Advertisement

ಸಮಸ್ಯೆಗಳ ಗೂಡಾದ ಮೊರಾರ್ಜಿ ಶಾಲೆ

02:58 PM Aug 28, 2019 | Naveen |

ವಾಡಿ: ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮಸ್ಯೆಗಳ ಗೂಡಾಗಿದೆ.

Advertisement

ಈ ವಸತಿ ಶಾಲೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ 200 ವಿದ್ಯಾರ್ಥಿಗಳು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 14 ಶಿಕ್ಷಕರಿದ್ದು, ನಾಲ್ಕು ತರಗತಿ ಕೋಣೆಗಳಿವೆ. ಬಾಡಿಗೆ ಕಟ್ಟಡವಾಗಿದ್ದರಿಂದ ಶೌಚಾಲಯ ಮತ್ತು ಸ್ನಾನದ ಕೋಣೆಗೆ ಸಾಲುಗಟ್ಟಿ ಕಾಯುವ ದುಸ್ಥಿತಿಯಿದೆ.

ಇಕ್ಕಟ್ಟಾದ ಕೋಣೆ ಇರುವುದರಿಂದ ಒಂದೊಂದೇ ತರಗತಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಭೋಜನ ಮಾಡುವ ಪರಿಸ್ಥಿತಿಯಿದೆ. ಅಲ್ಲದೇ ಮಲಗಲು ಗಾದಿ, ಮಂಚಗಳಿದ್ದರೂ ನೆಲದ ಮೇಲೆ ಮಲಗುವಂತಾಗಿದೆ. ಪುಸ್ತಕ, ನೋಟ್ಬುಕ್‌ ವಿತರಿಸಲಾಗಿದೆ. ಆದರೆ ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದರೂ ಸಮವಸ್ತ್ರ ವಿತರಿಸಿಲ್ಲ. ಹೀಗಾಗಿ ಮಕ್ಕಳಲ್ಲಿ ಶಿಸ್ತು ಕಣ್ಮರೆಯಾಗಿದ್ದು, ಶಾಲಾ ವಾತಾವರಣವೇ ಕಳೆಗುಂದಿದೆ.

ಆಗ್ರಹ: ವಸತಿ ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಿ, ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದು ಪುರಸಭೆ ಸದಸ್ಯ ತಿಮ್ಮಯ್ಯ ಪವಾರ, ಕಾಂಗ್ರೆಸ್‌ ಮುಖಂಡ ನಾಗೇಂದ್ರ ಜೈಗಂಗಾ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ವಿಜಯಕುಮಾರ ಯಲಸತ್ತಿ ಆಗ್ರಹಿಸಿದ್ದಾರೆ.

ಸ್ವಂತ ಕಟ್ಟಡವಿಲ್ಲದ ಕಾರಣ ನಾಲ್ಕು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ವಸತಿ ಶಾಲೆ ನಡೆಸುತ್ತಿದ್ದೇವೆ. ಸರಕಾರ ಎಲ್ಲ ಸೌಲಭ್ಯ ಒದಗಿಸಿದೆ. ಸ್ಥಳದ ಕೊರತೆಯಿಂದ ಸಮರ್ಪಕವಾಗಿ ಮಕ್ಕಳಿಗೆ ಸಲ್ಲುತ್ತಿಲ್ಲ. ಊಟ ಮತ್ತು ವಸತಿಗೆ ತೊಂದರೆಯಾಗುತ್ತಿದೆ. ಸರಕಾರದಿಂದ ಸಮವಸ್ತ್ರ ವಿತರಣೆಯಾಗಿಲ್ಲ. ರಾವೂರ ಗ್ರಾಮದಲ್ಲಿ ವಸತಿ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಸುಣ್ಣ ಬಣ್ಣ ಮುಗಿದ ನಂತರ ಕಟ್ಟಡ ನಮಗೆ ಹಸ್ತಾಂತರವಾಗಲಿದೆ. ಅಕ್ಟೋಬರ್‌ನಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುತ್ತೇವೆ.
ಮೃತ್ಯುಂಜಯ ಚೌಧರಿ,
 ಪ್ರಾಂಶುಪಾಲ, ಮೊರಾರ್ಜಿ ವಸತಿ ಶಾಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next