ವಾಡಿ: ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಮುಸ್ಲಿಮರು ಹಾಗೂ ದಲಿತ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಏರ್ಪಡಿಸಲಾಗಿದ್ದ ಡಾ| ಉಮೇಶ ಜಾಧವ ಅವರ ಗೆಲುವಿನ ಕೃತಜ್ಞತಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕರ್ನಾಟಕದಲ್ಲಿ ಒಂದೇ ಕೈ ಉಳಿದುಕೊಂಡಿದೆ. ಜೆಡಿಎಸ್‌ಗೂ ಮರ್ಮಾಘಾತ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಜನರು ಬೇಸತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ದುರಹಂಕಾರದ ರಾಜಕಾರಣಕ್ಕೆ ಈ ಬಾರಿ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಹಾಗೂ ಇತರ ಎಲ್ಲ ಸಮುದಾಯಗಳ ಜನರು ಮೋದಿ ಪರವಾಗಿ ಮತ ಚಲಾಯಿಸಿದ್ದರಿಂದಲೇ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲಲು ಸಾಧ್ಯವಾಗಿದೆ ಎಂದರು.
ಸೋಲಿಲ್ಲದ ಸರದಾರ ಡಾ| ಮಲ್ಲಿಕಾರ್ಜುನ ಖರ್ಗೆ ಕುರಿತು ನನಗೆ ವೈಯಕ್ತಿಕವಾಗಿ ಗೌರವವಿದೆ. ಅವರ ಹಿರಿತನಕ್ಕೆ ಮತ್ತು ರಾಜಕೀಯ ಅನುಭವಕ್ಕೆ ನಾನು ತಲೆಬಾಗುತ್ತೇನೆ. 11 ಸಲ ಸಲ ಗೆದ್ದ ರಾಜಕಾರಣಿ ಖರ್ಗೆ ಸೋಲಿಗೆ ಅವರ ಪುತ್ರ ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ದರ್ಪದ ರಾಜಕಾರಣವೇ ಕಾರಣವಾಗಿದೆ. ಮತದಾರರನ್ನು, ಪಕ್ಷದ ಕಾರ್ಯಕರ್ತರನ್ನು ಮತ್ತು ಹಿರಿಯರನ್ನು ಕಾಲುಕಸದಂತೆ ಕಂಡಿದ್ದೇ ಅವರ ಸೋಲಿಗೆ ಕಾರಣವಾಗಿದೆ. ಕಾಂಗ್ರೆಸ್‌ಗೆ ರೈತರ ಮತ್ತು ಡಾ| ಬಿ.ಆರ್. ಅಂಬೇಡ್ಕರ್ ಅವರ ಶಾಪ ತಟ್ಟಿದೆ ಎಂದು ಹೇಳಿದರು.
ಎರಡನೇ ಬಾರಿ ಪ್ರಧಾನಮಂತ್ರಿ ಆಗಲು ಹೊರಟಿರುವ ನರೇಂದ್ರ ಮೋದಿ ಸಂವಿಧಾನಕ್ಕೆ ಹಣೆಯಿಟ್ಟು ಅಂಬೇಡ್ಕರ್ ಅವರನ್ನು ಗೌರವಿಸಿದ್ದಾರೆ. ಬಿಜೆಪಿ ವಿರುದ್ಧ ಸಂವಿಧಾನ ವಿರೋಧಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು ಮೂಲೆಗುಂಪಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಹಾಗೂ ವಾಡಿ ಅಧ್ಯಕ್ಷ ಬಸವರಾಜ ಪಂಚಾಳ, ತಾಲೂಕು ಕಾರ್ಯದರ್ಶಿ ಶರಣು ಜ್ಯೋತಿ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ, ಮುಖಂಡರಾದ ವೀರಣ್ಣ ಯಾರಿ, ಸಿದ್ಧಣ್ಣ ಕಲಶೆಟ್ಟಿ, ರಾಮಚಂದ್ರ ರೆಡ್ಡಿ, ಪೋಮು ರಾಠೊಡ, ಪ್ರಕಾಶ ನಾಯಕ, ಭಾಗವತ ಸುಳೆ, ಹರಿ ಗಲಾಂಡೆ, ಬಾಲಾಜಿ ಬುರಬುರೆ, ನಾಗರಾಜ ಹೂಗಾರ, ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ ಜಾಧವ, ಅಂಬಾದಾಸ ಜಾಧವ, ಆನಂದ ಇಂಗಳಗಿ, ಜಗತಸಿಂಗ್ ರಾಠೊಡ, ಬಾಜಿರಾವ ಪವಾರ, ರಿಚರ್ಡ್ ಮರೆಡ್ಡಿ, ರಾಜೇಶ ಅಗರವಾಲ, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ವಾಲ್ಮೀಕಿ ನಾಯಕ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ತಂತ್ರ-ಕುತಂತ್ರ ಕೆಲಸ ಮಾಡಲಿಲ್ಲ
ಮೋದಿ ಹವಾ ಎಷ್ಟಿದೆ ಎಂದರೆ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬುಡಸಮೇತ ನಾಶವಾಗಿದೆ. ಸೋಲನ್ನೇ ಕಂಡರಿಯದ ಖರ್ಗೆ ಸೋತು ಸುಣ್ಣವಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕಮಲ ಮುನ್ನಡೆ ಸಾಧಿಸಿದೆ. ಮೋದಿ ಗಾಳಿ ಎದುರು ಕಾಂಗ್ರೆಸ್‌ನವರ ಯಾವ ತಂತ್ರ-ಕುತಂತ್ರವೂ ಕೆಲಸ ಮಾಡಲಿಲ್ಲ.
•
ರಾಜು ಮುಕ್ಕಣ್ಣ ,
ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ