ವಾಡಿ: ಗ್ರಾಮಸ್ಥರ ವಿವಿಧ ಕುಂದು ಕೊರತೆಗಳನ್ನು ಕೇಳಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ನಡೆಸಲಾಗುವ ಅಧಿಕಾರಿಗಳ ಜನಸ್ಪಂದನೆ ಸಭೆ, ಗದ್ದಲದ ಗೂಡಾಗಿ ಪರಿವರ್ತನೆಯಾಯಿತು. ಅಧಿಕಾರಿಗಳ ಸುತ್ತಲೂ ಮುಗಿಬಿದ್ದ ಜನರ ನಡುವೆ ಪಿಂಚಣಿ ಅರ್ಜಿ ಸಲ್ಲಿಸಲು ನುಗ್ಗಿದ ವಯೋ ವೃದ್ಧರ ಕೂಗು ವೇದಿಕೆ ವರೆಗೆ ತಲುಪದೇ ಹೈರಾಣಾದರು.
ರಾವೂರ ಗ್ರಾ.ಪಂ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಕಂಡುಬಂದ ಪ್ರಸಂಗಗಳಿವು. ಜೆಸ್ಕಾಂ ಅಧಿಕಾರಿ ಅಂಬ್ರೀಶ ಹೂಗಾರ ಭಾಷಣ ಮಾಡುತ್ತಿದ್ದಾಗಲೇ ವೇದಿಕೆಗೆ ನುಗ್ಗಿದ ರಾವೂರು ಗ್ರಾಮಸ್ಥರು, ವಿದ್ಯುತ್ ಸೇವೆ ಕುರಿತು ಹತ್ತಾರು ಸಮಸ್ಯೆಗಳನ್ನು ಮುಂದಿಟ್ಟು ವಾಗ್ವಾದ ಆರಂಭಿಸಿದರು.
ರಾವೂರ ಗ್ರಾಮದಾದ್ಯಂತ ವಿದ್ಯುತ್ ತಂತಿಗಳು ಪದೇಪದೆ ಕತ್ತರಿಸಿ ಬೀಳುತ್ತಿವೆ. ವಿದ್ಯುತ್ ಕಂಬಗಳು ಬಾಗಿನಿಂತಿವೆ. ಬಾಲಕನೊಬ್ಬ ಜೋತುಬಿದ್ದ ವಿದ್ಯುತ್ ತಂತಿಗೆ ಬಲಿಯಾಗಿದ್ದಾನೆ. ಅನೇಕರು ವಿದ್ಯುತ್ ತಗುಲಿ ಗಾಯಗೊಂಡಿದ್ದಾರೆ. ಆತಂಕದಲ್ಲಿ ಬದುಕುತ್ತಿದ್ದೇವೆ. ಗ್ರಾಮದಲ್ಲಿ ಹೊಸ ವಿದ್ಯುತ್ ಕಂಬಗಳು ಮತ್ತು ತಂತಿ ಜೋಡಣೆ ಮಾಡುವಂತೆ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದಿದೆ. ಇಂದಿಗೂ ಬೇಡಿಕೆ ಈಡೇರಿಲ್ಲ. ಯಾರ ಜೀವ ನುಂಗಲು ಕುಳಿತಿದ್ದಿರಿ? ಎಂದು ತರಾಟೆಗೆ ತೆಗೆದುಕೊಂಡ ಘಟನೆ ಗದ್ದಲ ಸೃಷ್ಟಿಗೆ ಕಾರಣವಾಯಿತು.
ಗ್ರಾಮಸ್ಥರ ಪರವಾಗಿ ಅಧಿಕಾರಿಯೊಂದಿಗೆ ವಾದಕ್ಕಿಳಿದ ಜಿ.ಪಂ ಸದಸ್ಯ ಅಶೋಕ ಸಗರ, ನಿಮ್ಮ ಬೇಜವಾಬ್ದಾರಿಯಿಂದ ಜನರು ಬೇಸತ್ತಿದ್ದಾರೆ. ಏನು ಉತ್ತರ ಕೊಡ್ತೀರಿ ಕೊಡ್ರಿ ಎಂದು ದಬಾಯಿಸಿದರು. ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಹಳ್ಳೆ ಜನರನ್ನು ಸಮಾದಾನಪಡಿಸುವ ಪ್ರಯತ್ನಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಗದ್ದಲದಲ್ಲಿಯೇ ವಿವಿಧ ಇಲಾಖೆಗೆ ಸೇರಿದ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಮಾಡಬೇಕಾದ ನಿಯಮಗಳನ್ನು ಮನವರಿಕೆ ಮಾಡಿಕೊಟ್ಟರು. ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ತಿಳಿಸಲಾದ ದಿನಾಂಕದಂದು ತಹಶೀಲ್ದಾರ್ ಕಚೇರಿಗೆ ಬಂದು ಭಾವಚಿತ್ರ ಮತ್ತು ಬಯೋಮೆಟ್ರೀಕ್ ನೀಡಬೇಕಾಗುತ್ತದೆ ಎಂದರು.
ಒಟ್ಟಾರೆ ಯಾವ ಸಮಸ್ಯೆಗಳೂ ತಕ್ಷಣ ಇತ್ಯರ್ಥವಾಗದೆ ಜನಸ್ಪಂದನೆ ಕಾರ್ಯಕ್ರಮ ಮುಗಿದು, ಫಲಾನುಭವಿಗಳ ನಿರಾಸೆಗೆ ಕಾರಣವಾಯಿತು. ಜಿ.ಪಂ ಸದಸ್ಯ ಅಶೋಕ ಸಗರ, ಪಶು ಆರೋಗ್ಯ ವೈದ್ಯಾಧಿ ಕಾರಿ ಡಾ|ಪೂಜಾ, ಉಪ ವಲಯ ಅರಣ್ಯಾಧಿಕಾರಿ ಅನೀಲಕುಮಾರ, ಕೃಷಿ ಇಲಾಖೆಯ ಉಲ್ಲಾಸ ಹರಸೂರ ಮಾತನಾಡಿ, ತಮ್ಮ ಇಲಾಖೆಯ ಯೋಜನೆ, ಸೌಲಭ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಗ್ರಾ.ಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ಡಾ| ಅಮರದೀಪ ಪವಾರ, ಜಿ.ಪಂ ಮಾಜಿ ಸದಸ್ಯ ಅಬ್ದುಲ್ ಅಜೀಜ್‌ಸೇಠ, ತಾ.ಪಂ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಗ್ರಾ.ಪಂ ಸದಸ್ಯರಾದ ಯುನ್ಯೂಸ್ ಪ್ಯಾರೆ, ಶ್ರೀನಿವಾಸ ವಗ್ಗರ, ಮಹ್ಮದ್ ಹುಸೇನ, ಜಗದೀಶ ಪೂಜಾರಿ, ಮಹೆಬೂಬ ಖಾನ್, ಬಸವರಾಜ ಪೂಜಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಪಿಡಿಒ ಕಾವೇರಿ ರಾಠೊಡ ನಿರೂಪಿಸಿದರು.