Advertisement

ಮುಂಗಾರು ಮಳೆ-ಬೆಳೆಗೆ ಜೀವಕಳೆ

09:39 AM Jul 28, 2019 | Team Udayavani |

ವಾಡಿ: ಪಟ್ಟಣ ಸೇರಿದಂತೆ ಚಿತ್ತಾಪುರ ತಾಲೂಕಿನಾಧ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮೋಡಗಳ ಸದ್ದಿನ ಮಧ್ಯೆ ನೀರಿಲ್ಲದೆ ಮರುಗುತ್ತಿದ್ದ ಮುಂಗಾರು ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ. ಭೂಮಿ ತೇವಾಂಶ ಕೊರತೆಯಿಂದ ಬಾಡುತ್ತಿದ್ದ ಹೆಸರಿನ ಎಲೆಗಳೀಗ ಥಳಥಳ ಹೊಳೆಯುತ್ತಿವೆ. ಮೋಡಗಳ ತಂಪಿನಲ್ಲಿ ತಂಗಾಳಿ ತಾಗಿ ಫಸಲು ನಳನಳಿಸುತ್ತಿವೆ.

Advertisement

ಮುಂಗಾರು ಮಳೆಯನ್ನೆ ನಂಬಿ ಜೋಳ, ಹೆಸರು, ಉದ್ದು, ಶೇಂಗಾ ಬೀಜ ನಾಟಿ ಮಾಡಿದ್ದ ವಾಡಿ, ನಾಲವಾರ, ಕುಂಬಾರಹಳ್ಳಿ, ಚಿತ್ತಾಪುರ, ಯಾಗಾಪುರ, ಕೊಲ್ಲೂರ, ಸನ್ನತಿ ವಲಯದ ರೈತರು ಮಳೆಯಿಲ್ಲದೆ ಬರಗಾಲದ ಸಂಕಟ ಅನುಭವಿಸಿದ್ದರು. ಓಡುವ ಮೋಡಗಳ ಕಂಡು ಮಮ್ಮಲ ಮರುಗುತ್ತಿದ್ದರು. ಧರೆಗಿಳಿಯದ ವರುಣನ ಕರೆಯಲು ಗ್ರಾಮದೇವತೆ ಮೊರೆ ಹೋಗಿದ್ದರು. ಪ್ರಾಣಿ ಬಲಿ ಕೊಟ್ಟು, ದೀಡ್‌ ನಮಸ್ಕಾರ ಹಾಕಿ ಮಳೆರಾಯನ ಕರೆದಿದ್ದರು. ಗ್ರಾಮೀಣ ಜನರು ಕಪ್ಪೆಗಳ ಮದುವೆಯನ್ನು ಮಾಡಿದ್ದರು.

ಬೇಸಾಯದ ವರ್ಷದ ಆರಂಭಕ್ಕೆ ಹರ್ಷ ಮೂಡಿಸಬೇಕಿದ್ದ ವರ್ಷಧಾರೆ ತಡವಾಗಿ ತಂಪು ಪಸರಿಸಿದೆ. ಬರ ನೆನೆದು ಬಹುತೇಕ ರೈತರು ಮುಂಗಾರು ಬಿತ್ತನೆ ಮಾಡುವಲ್ಲಿ ಹಿಂದೆ ಸರಿದಿರುವುದು ಗಮನಾರ್ಹ. ಇದರ ನಡುವೆಯೇ ಒಣ ಭೂಮಿಯಲ್ಲಿ ಬಿತ್ತನೆ ಮಾಡಿ ಧೈರ್ಯ ಮೆರೆದ ರೈತರು ಹಲವರು. ಬೆಳೆಗಳು ಬಾಡುವ ಮುನ್ನ ಉತ್ತಮ ಮಳೆ ಸುರಿದಿದ್ದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಕೃಷಿ ಚಟುವಟಿಕೆ ಗರಿಗೆದರಿದೆ. ಹೀಗೆ ಸಕಾಲಕ್ಕೆ ಆಗಾಗ ಮಳೆಯಾಗುತ್ತಿದ್ದರೆ ನಂಬಿದ ಭೂತಾಯಿ ಬಾಯಿಗೆ ಅನ್ನ ಹಾಕುತ್ತಾಳೆ. ಮಾಡಿದ ಸಾಲದ ಹೊರೆ ಕರಗುತ್ತದೆ ಎನ್ನುತ್ತಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next