Advertisement

ಸಂತೆ ಸುರಕ್ಷತೆ ಪರಿಶೀಲಿಸಿದ ಪಿಎಸ್‌ಐ

12:55 PM Dec 06, 2019 | Team Udayavani |

ವಾಡಿ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಬರುವ ವಿವಿಧ ಗ್ರಾಮಗಳ ತರಕಾರಿ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಮತ್ತು ಸ್ಥಳೀಯರು ನೀಡುವ ಕಿರಿಕಿರಿ ಪ್ರಸಂಗ ಮುಂದುವರಿದಿದ್ದು, ಈ ಗುರುವಾರವೂ ವ್ಯಾಪಾರಿಗಳು ಕೂಡಲು ಸ್ಥಳಾವಕಾಶಕ್ಕಾಗಿ ಪರದಾಡಿದ ಘಟನೆ ನಡೆಯಿತು.

Advertisement

ಗುರುವಾರ ಬೆಳಗ್ಗೆ ವಿವಿಧೆಡೆಯಿಂದ ತರಕಾರಿ ಗಂಟುಗಳೊಂದಿಗೆ ಮಾರುಕಟ್ಟೆಗೆ ಬಂದವರು ತಮಗೆ ಅನುಕೂಲವಾದ ಸ್ಥಳದಲ್ಲಿ ಕುಳಿತು ವ್ಯಾಪಾರಕ್ಕೆ ಅಣಿಯಾಗುತ್ತಿದ್ದರು. ಎಂದಿನಂತೆ ಇಲ್ಲಿನ ಭೀಮನಗರ-ಅಂಬೇಡ್ಕರ್‌ ವೃತ್ತ ಮಾರ್ಗದ ರಸ್ತೆ ಬೀದಿಯಲ್ಲಿ ತರಕಾರಿ ವ್ಯಾಪಾರಕ್ಕೆ ಕೂಡಲು ಸ್ಥಳೀಯ ವ್ಯಾಪಾರಿಗಳು ಅವಕಾಶ ನೀಡದೇ ಜಗಳ ನಡೆಸುತ್ತಿದ್ದ ಪ್ರಸಂಗ ಕಂಡುಬಂದಿತು.

ದೊಡ್ಡ ವ್ಯಾಪಾರಿಗಳು ಸ್ಥಳ ಕಬಳಿಸುವ ಮೂಲಕ ಚಿಲ್ಲರೆ ವ್ಯಾಪಾರಿಗಳನ್ನು ಹೆದರಿಸಿ ಓಡಿಸುವ ಕೃತ್ಯಕ್ಕೆ ಮುಂದಾಗಿದ್ದರಿಂದ ಹೊರ ಊರಿನ ತರಕಾರಿ ವರ್ತಕರು ದಿಕ್ಕು ಕಾಣದೆ ಚಿಂತೆಗೀಡಾಗಿದ್ದರು. ಪುರಸಭೆಯ ಪೌರಕಾರ್ಮಿಕರು ಬಂದು ಆಜಾದ್‌ ವೃತ್ತದ ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದ್ದರಿಂದ ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರತಿ ಗುರುವಾರ ಇದೇ ಕಿರಿಕಿರಿಯಾಗಿದೆ ಎಂದು ವ್ಯಾಪಾರಿಗಳು ಮಾಧ್ಯಮದವರ ಎದುರು ಅಳಲು ತೋಡಿಕೊಂಡರು.

ಇದೇ ವೇಳೆ ಸಂತೆ ನಡೆಯುವ ಸ್ಥಳಕ್ಕಾಗಮಿಸಿ ವ್ಯಾಪಾರದ ಬೀದಿಗಳನ್ನು ಪರಿಶೀಲಿಸಿದ ವಾಡಿ ಪೊಲೀಸ್‌ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಗಂಗಮ್ಮಾ, ಬೀದಿ ಸ್ಥಳಕ್ಕಾಗಿ ಕಾದಾಡುವವರನ್ನು ಎಚ್ಚರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇಕ್ಕಟ್ಟಾದ ಗಲ್ಲಿ ರಸ್ತೆಯಲ್ಲಿ ನಡೆಯುತ್ತಿದ್ದ ಸಂತೆ ಮಾರ್ಗದಲ್ಲಿ ಸಂಚರಿಸುವ ಮೂಲಕ ಜೇಬುಗಳ್ಳರು ಮತ್ತು ಮೊಬೈಲ್‌ ಕಳ್ಳರಿಂದ ಎಚ್ಚರದಿಂದಿರಿ. ಕಳ್ಳರು ಕಂಡುಬಂದರೆ ತಕ್ಷಣ ಠಾಣೆಗೆ ಮಾಹಿತಿ ಕೊಡಿ. ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಸ್ಥಳಾವಕಾಶಕ್ಕಾಗಿ ಕಾದಾಡಬಾರದು.

Advertisement

ಎಲ್ಲರಿಗೂ ವ್ಯಾಪಾರ ಮಾಡಲು ಅವಕಾಶವಿದ್ದು, ಸಹಕರಿಸಿಕೊಂಡು ಹೋಗಿರಿ ಎಂದು ತಾಕೀತು ಮಾಡಿದರು. ವಾರದ ಸಂತೆಯೊಳಗೆ ವಾಹನಗಳು ಬರದಂತೆ ಸುರಕ್ಷತೆ ಒದಗಿಸಲಾಗುವುದು. ಸಂತೆ ನಡೆಯುವ ಕಾರಣಕ್ಕೆ ಪ್ರತಿ ಗುರುವಾರ ಒಂದು ದಿನ ಮಾತ್ರ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಚೌಕ್‌
ಮತ್ತು ಅಂಬೇಡ್ಕರ್‌ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ಮಾರ್ಗ ಬಸವೇಶ್ವರ ವೃತ್ತದತ್ತ ಬದಲಿಸುವ ಕುರಿತು ಯೋಚಿಸುವುದಾಗಿ ಪಿಎಸ್‌ಐ ಗಂಗಮ್ಮಾ ಹಣ್ಣು-ತರಕಾರಿ ವ್ಯಾಪಾರಿಗಳಿಗೆ ತಿಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ಬಿಜೆಪಿಯ ಭೀಮಶಾ ಜಿರೊಳ್ಳಿ, ಕೊಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ ಹಾಗೂ ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಶ್ರವಣಕುಮಾರ ಮೌಸಲಗಿ, ವಾಡಿಯಲ್ಲಿ ವಾರದ ಸಂತೆಗೆ ಸೂಕ್ತವಾದ ಸ್ಥಳವಿಲ್ಲ. ಗಲ್ಲಿ ರಸ್ತೆಗಳ ಬೀದಿಯಲ್ಲಿ ತರಕಾರಿ ಸಂತೆ ನಡೆಯುತ್ತಿದೆ.

ಹೊರಗಿನಿಂದ ಬರುವ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಕಿರಿಕಿರಿ ನೀಡುತ್ತಿದ್ದಾರೆ. ಕೆಲ ಸ್ಥಳೀಯ ವ್ಯಾಪಾರಿಗಳು ಅಧಿಕಾರಿಗಳ ಮೂಲಕ ಪರ ಊರಿನಿಂದ ಬರುವ ವ್ಯಾಪಾರಿಗಳ ಗಂಟುಮೂಟೆಗಳನ್ನು ಜಪ್ತಿ ಮಾಡಿಕೊಂಡು ಹೋಗುತ್ತಿದ್ದಾರೆ.

ಈ ದೌರ್ಜನ್ಯ ನಿಲ್ಲಬೇಕು. ಸಂತೆಗೆ ಪೊಲೀಸ್‌ ಭದ್ರತೆ ಒದಗಿಸಬೇಕು. ಮಾರುಕಟ್ಟೆಗೆ ವಾಹನಗಳು ಬರದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷಿಸಿದರೇ ತರಕಾರಿಯೊಂದಿಗೆ ಬೀದಿಯಲ್ಲಿ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next