ವಾಡಿ: ಹೆಗಲಿಗೆ ಪಾಟಿಚೀಲ ಹಾಕಿಕೊಂಡು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ರಸ್ತೆ ಕ್ರಮಿಸಿ ಶಾಲೆ ಸೇರಬೇಕಾದ ಪುಟಾಣಿ ಮಕ್ಕಳು, ಹದಗೆಟ್ಟ ದಾರಿ ದಾಟಲಾಗದೆ ಎಡವಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ರೊಜ್ಜು ನೀರಿನ ತ್ಯಾಜ್ಯ ದಾಟಿ ಸಾಗುವಾಗ ವಾಹನಗಳ ವೇಗಕ್ಕೆ ರಾಡಿ ಸಿಡಿದು ಕೊಳೆಯಾಗುವ ಸಮವಸ್ತ್ರ ಮಕ್ಕಳ ಕಣ್ಣೀರಿಗೆ ಕಾರಣವಾಗುತ್ತಿದೆ.
ಪುರಸಭೆ ವ್ಯಾಪ್ತಿಯ ವಾರ್ಡ್ 8ರ ಬಡಾವಣೆಯಲ್ಲಿ ಪ್ರತಿಷ್ಠಿತ ಕಾನ್ವೆಂಟ್ ಶಾಲೆಯಿದ್ದು, ಸಾವಿರಾರು ಮಕ್ಕಳು ಈ ಬಡಾವಣೆ ರಸ್ತೆಯನ್ನೇ ಅವಲಂಬಿಸಿದ್ದಾರೆ. ಯಾದಗಿರಿ ಮುಖ್ಯ ರಸ್ತೆಯಿಂದ ಸೇಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆ ವರೆಗಿನ ರಸ್ತೆ ವಿಪರೀತ ಹದಗೆಟ್ಟಿದ್ದು, ಮಕ್ಕಳು ಏಳುತ್ತಾ ಬೀಳುತ್ತಾ ಶಾಲೆ ಸೇರಬೇಕಾದ ದುಸ್ಥಿತಿ ಎದುರಾಗಿದೆ. ಸಾರ್ವಜನಿಕರ ಗೃಹ ಕಟ್ಟಡ ನಿರ್ಮಾಣದ ಕಲ್ಲು ಮಣ್ಣು ಮರಳಿನ ತ್ಯಾಜ್ಯ ರಸ್ತೆಯನ್ನು ಆವರಿಸಿ ಅವಾಂತರ ಸೃಷ್ಟಿಯಾಗಿದೆ.
ಹರಿಯುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ರೊಜ್ಜು ನೀರು ರಸ್ತೆಗೆ ಸಾಗಲು ಸಹಕಾರ ನೀಡಿದ್ದರಿಂದ ಗೊಬ್ಬು ವಾಸನೆಯಲ್ಲೇ ಮಕ್ಕಳ ಸಂಚಾರ ಮುಂದುವರಿದಿದೆ. ಶಾಲಾ ವಾಹನಗಳ ಓಡಾಟ ಮತ್ತು ಪೋಷಕರ ಬೈಕ್‌ಗಳ ಟ್ರಾಫಿಕ್ ಜಾಮ್ ಮಾರ್ಗದಲ್ಲಿ ಪಾದಚಾರಿ ಮಕ್ಕಳ ಗೋಳಾಟ ಹೇಳತೀರದಂತಾಗಿದೆ.
ರಸ್ತೆ ಅಭಿವೃದ್ಧಿ ಮಾಡಬೇಕಾದ ಪುರಸಭೆ ಅಕಾರಿಗಳು ಹಾಗೂ ವಾರ್ಡ್ ಸದಸ್ಯೆ ಕಾಂಗ್ರೆಸ್‌ನ ಸುಗಂಧಾ ಜೈಗಂಗಾ ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಕೂಡಲೇ ಸಿಸಿ ರಸ್ತೆ ನಿರ್ಮಿಸುವ ಮೂಲಕ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಿಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.
ಕಾನ್ವೆಂಟ್ ಶಾಲೆಯ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಬಳಕೆ ಮಾಡುವ ರಸ್ತೆ ಹದಗೆಟ್ಟಿದ್ದು ನನ್ನ ಗಮನಕ್ಕಿದೆ. ಕಿರಿದಾದ ಚರಂಡಿಗಳು ಇರುವುದರಿಂದ ಪದೇ ಪದೇ ಹೂಳು ತುಂಬಿ ನೀರು ರಸ್ತೆಗೆ ಹರಿಯುತ್ತಿದೆ. ಸಾರ್ವಜನಿಕರ ಸಂಚಾರದ ಹಿತದೃಷ್ಠಿಯಿಂದ ಈ ಮಾರ್ಗದಲ್ಲಿ ಸಿಸಿ ರಸ್ತೆ, ಎರಡೂ ಬದಿಯಲ್ಲಿ ಚರಂಡಿ ಮತ್ತು ಪುಟ್ಪಾತ್ ನಿರ್ಮಿಸಲು ಸುಮಾರು 40 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಗೊಳಿಸಿದ್ದೇನೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕೆಲಸ ಶುರುವಾಗುತ್ತದೆ. ಇದಕ್ಕೂ ಮೊದಲು ರಸ್ತೆಯಲ್ಲಿನ ತೆಗ್ಗುಗಳನ್ನು ಮುಚ್ಚಿ ರೊಜ್ಜು ನೀರು ಸ್ಥಳಾಂತರಿಸುವ ವ್ಯವಸ್ಥೆ ಮಾಡಿಸುತ್ತೇನೆ.
•
ಸುಗಂಧಾ ನಾಗೇಂದ್ರ ಜೈಗಂಗಾ,
ವಾರ್ಡ್ ಸದಸ್ಯೆ