ವಾಡಿ: ಕಳೆದ ಐದಾರು ದಿನಗಳಿಂದ ದಡ ಸೋಸಿ ಧುಮ್ಮಿಕ್ಕುತ್ತಿರುವ ಚಿತ್ತಾಪುರ ತಾಲೂಕು ವ್ಯಾಪ್ತಿಯ ಭೀಮಾ ತೀರದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಸಂಸದ ಡಾ| ಉಮೇಶ ಜಾಧವ, ಜನರಕ್ಷಣೆಗೆ ಸಿದ್ಧರಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸನ್ನತಿ ಭೀಮಾ ಬ್ಯಾರೇಜ್ ಬಳಿಯ ಶ್ರೀ ಚಂದ್ರಲಾ ಪರಮೇಶ್ವರಿ ದೇವಸ್ಥಾನ ಹತ್ತಿರ ಬೋರ್ಗೆರೆಯುತ್ತಿರುವ ಭೀಮೆಗೆ ಬಾಗೀನ ಅರ್ಪಿಸಿದ ಡಾ| ಜಾಧವ, ಅಪಾಯದ ಅಂಚಿನಲ್ಲಿರುವ ಕಡಬೂರ, ಕೊಲ್ಲೂರು, ಚಾಮನೂರು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಎದುರಾಗಲಿರುವ ಪ್ರವಾಹದ ಸ್ಥಿತಿಗತಿಯನ್ನು ಅಧಿಕಾರಿಗಳ ಸಮಕ್ಷಮ ವೀಕ್ಷಿಸಿದರು.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ಒಡಲು ಕಂಡು ಗ್ರಾಮಸ್ಥರು ಜಾಗೃತಿಯಿಂದ ಇರುವಂತೆ ಕೋರಿದರು. ಯಾವುದೇ ರೀತಿಯ ತೊಂದರೆ ಉಂಟಾದರೆ ತಕ್ಷಣಕ್ಕೆ ಸಂಬಂಧಿಸಿದ ತಾಲೂಕು ಅಧಿಕಾರಿಗಳನ್ನಾಗಲಿ ಅಥವಾ ನೇರವಾಗಿ ನನ್ನನ್ನು ಸಂಪರ್ಕಿಸಿದರೂ ತೊಂದರೆಯಿಲ್ಲ ಎಂದು ಹೇಳಿದರು.
ಚಿತ್ತಾಪುರ ತಾಲೂಕಿನ ಭೀಮಾನದಿ ದಂಡೆಯ ಗ್ರಾಮಗಳಿಗೆ ಯಾವೂದೇ ರೀತಿಯ ಅಪಾಯ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಹೆಚ್ಚು ಆತಂಕವಿರುವ ಗ್ರಾಮಗಳಿಗೆ ದೋಣಿಗಳನ್ನು ಒದಗಿಸಲಾಗುವುದು. ಮಹಾರಾಷ್ಟ್ರದಲ್ಲಿ ಆದ ಮಳೆ ಕಾರಣಕ್ಕೆ ಕರ್ನಾಟಕ ಜಲಪ್ರಳಯದ ಭೀಕರ ಸ್ಥಿತಿಗೆ ತುತ್ತಾಗಿದೆ. ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ರಾಜ್ಯ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಪ್ರವಾಹ ಪೀಡಿತ ಜಿಲ್ಲೆಗಳ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಕಟ್ಟುನಿಟ್ಟಿನ ಆದೇಶ ನೀಡುವ ಮೂಲಕ ಜನರ ನೆರವಿಗೆ ಶ್ರಮಿಸುತ್ತಿದ್ದಾರೆ ಎಂದರು. ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಮುಖಂಡ ಶರಣಪ್ಪ ತಳವಾರ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ತಾಲೂಕಿನ ಮುಖಂಡರಾದ ಸಿದ್ಧಣ್ಣ ಕಲಶೆಟ್ಟಿ, ತಮ್ಮಣ್ಣ ಡಿಗ್ಗಿ, ಶರಣಬಸಪ್ಪ ಪಸಾರ, ಮಲ್ಲಿಕಾರ್ಜುನ ಮಾಲಗತ್ತಿ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.