Advertisement
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನಬೆಟ್ಟ. ಈ ಬೆಟ್ಟದ ತಪ್ಪಲಿನಲ್ಲಿರುವ ವಡಗೆರೆ ಗ್ರಾಮದ ಗುಡ್ಡದ ಬಳಿಯೂ ಬಿದ್ದಾಂಜನೇಯ ಸ್ವಾಮಿ ಹೆಸರಿನ ದೇಗುಲವಿದೆ. ಇದು ಅನಾದಿ ಕಾಲದಿಂದಲೂ ಹನುಮ ಭಕ್ತರ ಪಾಲಿನ ಮೆಚ್ಚಿನ ದೇಗುಲವಾಗಿ ಖ್ಯಾತಿ ಗಳಿಸಿದೆ.
ದೇಗುಲದ ಅನತಿ ದೂರದಲ್ಲೇ ಒಂದು ಗುಡ್ಡವಿದೆ. ಅದರಲ್ಲಿರುವ ಗುಹೆಯಲ್ಲಿ ಕಿವಿಮೂಲ ಎಂಬ ರಾಕ್ಷಸನಿದ್ದನಂತೆ. ಅಲ್ಲಿದ್ದ ಮತ್ತೂಂದು ಗುಹೆಯಲ್ಲಿ ವಸಿಷ್ಠ ಮುನಿಗಳು ತಪಸ್ಸು ಮಾಡುತ್ತಿದ್ದರಂತೆ. ಈ ರಾಕ್ಷಸನಿಂದ ಸದಾ ಕಿರುಕುಳ ಅನುಭಸುತ್ತಿದ್ದ ವಸಿಷ್ಠರು ಇದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದರು. ಈ ಸಂದರ್ಭದಲ್ಲಿ ತಿರುಪತಿಯಿಂದ ಗಿಡಮೂಲಿಕೆಗಳನ್ನು ಹುಡುಕಿಕೊಂಡು ವೆಂಕಟೇಶ್ವರ ಸ್ವಾಮಿ, ತನ್ನ ವಾಹನವಾದ ಗರುಡ ಪಕ್ಷಿಯನ್ನು ಬಿಟ್ಟು ಹನುಮಂತನ ಹೆಗಲೇರಿ ಬರುತ್ತಿದ್ದನಂತೆ.
Related Articles
ಇಲ್ಲೇ ಇದ್ದ ರಾಕ್ಷಸನನ್ನು ಸಂಹಾರ ಮಾಡಿದ ಹನುಮಂತ ವಸಿಷ್ಠರ ಮೆಚ್ಚುಗೆಗೆ ಪಾತ್ರನಾದರಂತೆ.
ಆದರೆ, ವೆಂಕಟೇಶ್ವರ ಸ್ವಾಮಿ ಎಷ್ಟು ಹೊತ್ತು ಕಾದರು ಬರಲಿಲ್ಲ. ಅವರಿಗಾಗಿ ಕಾದು ಕಾದು ಸಾಕಾಗಿ ಗುಡ್ಡದ ಕೆಳಗಿರುವ ಸ್ಥಳಕ್ಕೆ ಬಂದು ಹನುಮ ಮಲಗುತ್ತಾನೆ. ಆ ಸ್ಥಳವೇ ಆಂಜನೇಯ ಬಿದ್ದ ಸ್ಥಳವಾಯಿತು ಎನ್ನುತ್ತದೆ ಪುರಾಣ.
Advertisement
ಸೋಲಿಗರ ಕತೆಯೇ ಬೇರೆಬಿಳಿಗಿರಿರಂಗನಬೆಟ್ಟದ ಮೂಲನಿವಾಸಿಗಳಾದ ಸೋಲಿಗರ ಪ್ರಕಾರ ಬಿದ್ದಾಂಜನೇಯನನ್ನು ಕುರಿತು, ಇನ್ನೊಂದು ರೀತಿಯ ಕತೆ ಇದೆ. ಬಿಳಿಗಿರಿರಂಗನಾಥಸ್ವಾಮಿ ಆಹಾರಕ್ಕೆ ಬಂದಾಗ ಆತನೊಂದಿಗೆ ಬರುವ ಹನುಮಂತನು ತನ್ನ ಚೇಷ್ಟೆಗಳಿಂದ ಸ್ವಾಮಿಯ ಕೋಪಕ್ಕೆ ತುತ್ತಾದನಂತೆ. ಈ ಸಂದರ್ಭದಲ್ಲಿ ಸಿಟ್ಟಾದ ರಂಗನಾಥಸ್ವಾಮಿ ಹನುಮಂತನ ಕೆನ್ನೆಗೆ ಜೋರಾಗಿ ಹೊಡೆದದ್ದರಿಂದ ಆತ ಈ ಸ್ಥಳದಲ್ಲಿ ಬಿದ್ದನು ಎನ್ನುತ್ತಾರೆ ಸೋಲಿಗರು. ಇವೆರಡು ಕತೆಗಳಿಗೆ ಪೂರಕವೆಂಬಂತೆ ಬಿಳಿಗಿರಿರಂಗನಾಥಸ್ವಾಮಿಯ ದೊಡ್ಡ ರಥೋತ್ಸವ ಆದ ಮೂರನೇ ದಿನ ಇಲ್ಲೂ ಕೂಡ ತೇರು ನಡೆಯುವ ವಾಡಿಕೆ ಇದೆ. ಪ್ರತಿ ಶನಿವಾರದಂದು ಈ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇಗುಲದ ಅಭಿವೃದ್ಧಿ ಕಂಡಿಲ್ಲ
ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರಿದ್ದರೂ ಇದು ಅಭಿವೃದ್ಧಿ ಕಂಡಿಲ್ಲ. ಇದು ಶಕ್ತಿ ದೇಗುಲವಾಗಿದೆ. ಇಲ್ಲಿನ ಮೂರ್ತಿಯ ದರ್ಶನ ಮಾಡಿದರೆ, ಕಷ್ಟಗಳು ದೂರವಾಗುತ್ತವೆ. ರೋಗಗಳು ವಾಸಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ಒಂದೂ ಮುಕ್ಕಾಲು ಶತಮಾನ ಕಂಡಿರುವ ಹಳೆ ಕಟ್ಟಡದಲ್ಲೇ ದೇವಸ್ಥಾನವಿದೆ. ಸಣ್ಣ ದೇಗುಲದಲ್ಲೇ ಇನ್ನೂ ಪೂಜೆ ನಡೆದುಕೊಂಡು ಬರುತ್ತಿದೆ. ಎಡಭಾಗದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದ್ದರೂ ಇದರ ನಿರ್ವಹಣೆ ಸರಿಯಾಗಿಲ್ಲ. ದೇಗುಲದ ಮುಂದಿರುವ ಬೃಹತ್ ಆಲದ ಮರ ದೇವಸ್ಥಾನಕ್ಕೆ ಮೆರುಗು ತಂದು ಕೊಟ್ಟರೆ ಅದರ ಪಕ್ಕದಲ್ಲಿರುವ ರಥದ ಶೆಡ್ ಕೂಡ ಶಿಥಿಲವಾಗಿದೆ. ಕೊರತೆಗಳು ಏನೇ ಇದ್ದರೂ ಬಿದ್ದ ಆಂಜನೇಯ ಜನರ ಬದುಕನ್ನು ಹಸನು ಮಾಡುತ್ತಿದ್ದಾನೆ ಅನ್ನೋ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಫೈರೋಜ್‌ಖಾನ್