ವಡಗೇರಾ: ನೂತನ ತಾಲೂಕು ಕೇಂದ್ರವಾಗಿರುವ ವಡಗೇರಾಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ. ಗ್ರಾಪಂ ಕೇಂದ್ರವಾಗಿದ್ದ ವಡಗೇರಾವನ್ನು ನೂತನ ತಾಲೂಕು ಕೇಂದ್ರವಾಗಿ ಘೋಷಿಸಿದ ಬಳಿಕ ಸರಕಾರ ಕೇವಲ ತಹಶೀಲ್ದಾರ್ ಕಚೇರಿ ಆರಂಭಿಸಿ ಹುದ್ದೆ ಮಂಜೂರು ಮಾಡಿದೆ.
ಅಲ್ಲದೇ ಮಾದರಿ ಆರೋಗ್ಯ ಕೇಂದ್ರ ಸಹ ಪ್ರಾರಂಭಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರೆ ಇಲಾಖೆ ಕಚೇರಿಗಳು ಇನ್ನೂ ಕಾರ್ಯಾರಂಭವಾಗಿಲ್ಲ. ವಡಗೇರಾ ತಾಲೂಕು ಘೋಷಣೆಯಾಗಿ ಎರಡು ವರ್ಷ ಕಳೆದರೂ ಶೈಕ್ಷಣಿಕವಾಗಿ ಪ್ರಗತಿ ಕಂಡಿಲ್ಲ ಉನ್ನತ ಮಟ್ಟದ ಆಸ್ಪತ್ರೆಗಳು ಇಲ್ಲ.
ಸ್ವಚ್ಛತೆ ಮರೀಚಿಕೆಯಾಗಿದೆ. ಹೆಸರಿಗೆ ಮಾತ್ರ ತಾಲೂಕು ಕೇಂದ್ರ ಎನ್ನುವಂತಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ರೈತರು ಶಹಾಪುರಕ್ಕೆ ಹೋಗುವುದು ಮಾತ್ರ ತಪ್ಪಿಲ್ಲ. ಸಾಕಷ್ಟು ಬಾರಿ ಹೋರಾಟದ ಫಲವಾಗಿ ಮಾರ್ಚ್ 16, 2017ರಂದು ನೂತನ ತಾಲೂಕು ಕೇಂದ್ರ ಘೋಷಣೆಯಾಗಿದೆ. ಆದರೆ ಅಗತ್ಯ ಅನುದಾನ ಮತ್ತು ಮೂಲಸೌಕರ್ಯ ಕಲ್ಪಿಸಿಲ್ಲ.
ಕಳೆದ ಮಾರ್ಚ 5ರಂದು ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ ಹೊಸ ತಾಲೂಕು ಕೇಂದ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಸಾರ್ವಜನಿಕರು ಆಶಾಭಾವನೆ ಹೊಂದಿದ್ದರು. ಆದರೆ ಅಂತಹ ಯಾವುದೇ ಘೋಷಣೆಯಾಗದ್ದರಿಂದ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ನೂತನ ತಾಲೂಕುಗಳಿಗೆ ಬಜೆಟ್‌ನಲ್ಲಿ ಆದ್ಯತೆಯೇ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕೃಷ್ಣ ಮತ್ತು ಭೀಮಾ ನದಿ ವಡಗೇರಾ ತಾಲೂಕಿನಲ್ಲಿ ಹರಿಯುತ್ತದೆ. ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲ ಕೃಷಿ ಪತ್ತಿನ ಸಹಕಾರಿ ಸಂಘ ಇಲ್ಲ.
ಯಾವ್ಯಾವ ಇಲಾಖೆಗಳು ಇಲ್ಲ?: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಉಪ ನೋಂದಣಿ, ಕೃಷಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪನೆ ಇಲಾಖೆ, ಬಿಸಿಎಂ ಇಲಾಖೆ. ಕರ್ನಾಟಕ ಭೂ ಸೇನಾ ನಿಗಮ. ತೋಟಗಾರಿಕೆ ಇಲಾಖೆ. ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೆಪಿಟಿಸಿಎಲ್, ಅರಣ್ಯ ಇಲಾಖೆ ಕಚೇರಿಗಳು ಇಲ್ಲ.
ಆದಷ್ಟು ಬೇಗನೆ ತಾಪಂ ಸೇರಿದಂತೆ ವಿವಿಧ ಕಚೇರಿ ಆರಂಭಿಸಿ ಅನುಕೂಲ ಕಲ್ಪಿಸಬೇಕು ಎನ್ನುವುದು ವಡಗೇರಾ ತಾಲೂಕಿನ ಜನರ ಬೇಡಿಕೆಯಾಗಿದೆ.
ಸಿದ್ದಣ್ಣಗೌಡ ಕಾಡಂನೋರ,
ಕಲಬುರ್ಗಿ, ಬೀದರ, ಯಾದಗಿರಿ ಹಾಲು
ಒಕ್ಕೂಟದ ಮಾಜಿ ಅಧ್ಯಕ್ಷ್ಯ
ಒಟ್ಟಿನಲ್ಲಿ ಹೊಸ ತಾಲೂಕುಗಳು ಹೆಸರಿಗಷ್ಟೇ ಎನ್ನುವ ಭಾವನೆ ಮೂಡಿದೆ. ಸರ್ಕಾರ ಹೊಸ ತಾಲೂಕುಗಳಿಗೆ ಭೂಮಿ, ಕಟ್ಟಡ ಜತೆಗೆ ವಿವಿಧ ಇಲಾಖೆಗಳ ಕಚೇರಿ, ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಬೇಕು.
ಅಬ್ದುಲ್ ಚಿಗನೋರ,
ಕರವೇ ಜಿಲ್ಲಾ ಮುಖಂಡ
ನಿಂಗಣ್ಣ ಕುರಿಯರ್