ವಡಗೇರಾ: ನೂತನ ತಾಲೂಕು ವಡಗೇರಾ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ವಡಗೇರಾ ಬಂದ್ ಸಂಪೂರ್ಣ ಯಶಸ್ವಿಯಾಯಿತು. ವಡಗೇರಾ ತಾಲೂಕು ರಚನೆಯಾಗಿ 2 ವರ್ಷ ಕಳೆದಿದೆ. ಆದರೂ ತಾಲೂಕು ಕೇಂದ್ರದಲ್ಲಿ ಯಾವುದೇ ಸರ್ಕಾರಿ ಇಲಾಖೆಗಳು ಪ್ರಾರಂಭವಾಗಿಲ್ಲ ನೂತನ ವಡಗೇರಾ ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಜಿಲ್ಲೆಯಲ್ಲಿ 3 ತಾಲೂಕುಗಳು ಘೋಷಣೆಯಾಗಿವೆ. ಗುರುಮಠಕಲ್, ಹುಣಸಗಿಯಲ್ಲಿ ಈಗಾಗಲೇ ಕೆಲವು ಕಚೇರಿ ಪ್ರಾರಂಭಿಸಲಾಗಿದೆ. ಆ ಭಾಗದ ಜನರಿಗೆ ತಕ್ಕಮಟ್ಟಿಗೆ ಅನುಕೂಲವಾಗುತ್ತಿದೆ. ಆದರೆ ವಡಗೇರಾ ತಾಲೂಕಿಗೆ ತಹಶೀಲ್ದಾರ್ ಕಚೇರಿ ಹೊರತುಪಡಿಸಿ ಉಳಿದ ಯಾವುದೇ ಕಚೇರಿಗಳು ಆರಂಭವಾಗಿ ಎಂದು ದೂರಿದರು.
ಕಳೆದ 2 ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗಿದೆ. ರೈತರು, ಹೋರಾಟಗಾರರು, ಪ್ರಗತಿಪರ ಚಿಂತಕರು ಮೇಲಿಂದ ಮೇಲೆ ಜಿಲ್ಲಾಡಳಿತ ಗಮನಕ್ಕೆ ತಂದರೂ ಮೌನವಾಗಿದ್ದಾರೆ ಎಂದು ಆರೋಪಿಸಿದರು. ಕಚೇರಿಗಳ ಕೆಲಸಕ್ಕಾಗಿ ವಡಗೇರಾ ತಾಲೂಕಿನ ಸುತ್ತ-ಮುತ್ತಲಿನ ಗ್ರಾಮಸ್ಥರು, ರೈತರು, ಬಡ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರು, ಅಂಗವಿಕಲರು. ಸರ್ಕಾರಿ ನೌಕರರು ಶಹಾಪುರಕ್ಕೆ ಹೋಗ ಬೇಕಾಗಿದೆ ಎಂದು ದೂರಿದರು.
ಕರವೇ ಕಾರ್ಯಕರ್ತರು ನಡು ರಸ್ತೆಯಲ್ಲಿ ಧರಣಿ ಕುಳಿತು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟುಹಿಡಿದ ಪರಿಣಾಮ ತಹಶೀಲ್ದಾರ್ ಸಂತೋಷಿರಾಣಿ ವಾಪಸಾದರು. ನಂತರ ಸಂಜೆಯಾದರೂ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರುಪ್ರತಿಭಟನೆಯನ್ನು ಮುಖ್ಯ ರಸ್ತೆಗೆ ಯಾದಗಿರಿಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ನಂತರ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಿ ಕೆಲ ಬೇಡಿಕೆಗಳು ಈಗಾಗಲೇ ಈಡೇರಿಕೆ ಹಂತದಲ್ಲಿವೆ. ತಕ್ಷಣದಲ್ಲಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ಮಾಡಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು. ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಬಂದ್ ಹಿಂದಕ್ಕೆ ಪಡೆಯಲಾಯಿತು.
ಯಾದಗಿರಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೆರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ವಡಗೇರಾ ತಾಲೂಕು ಅಧ್ಯಕ್ಷ ಶಿವಕುಮಾರ ಕೊಂಕಲ್, ಭೀಮಾಶಂಕರ ಹತ್ತಿಕುಣಿ, ಅಬ್ದುಲ್ ಚಿಗಾನೂರು, ತೇಜರಾಜ ರಾಠೊಡ, ಮಹಾವೀರ ಲಿಂಗೇರಿ, ವಿಶ್ವಾರಾಧ್ಯ ದಿಮ್ಮೆ, ರಾಜು ಚವ್ಹಾಣ, ಹಣಮಂತ್ರಾಯ ತೇಕರಾಳ, ಚೌಡಯ್ಯ ಬಾವೂರ, ಭೀಮಣ್ಣ ಶಖಾಪುರ, ವೆಂಕಟೇಶ ಬೈರಿಮಡ್ಡಿ, ಭೀಮು ಮಲ್ಲಿಬಾವಿ, ಈರಣ್ಣ ಸಾಹುಕಾರ ಅಗ್ನಿ, ಮಲ್ಲು ಕಲ್ಮನಿ ಹಾಲಗೇರಾ, ಬಸವರೆಡ್ಡಿ ಅಭಿಶಾಳ, ಶಿವರಾಜ ಗೋನಾಲ, ದೇವರಾಜ ಕುರಕುಂದಿ, ಸಾಹೇಬಗೌಡ ನಾಯಕ, ಮಲ್ಲು ದೇವಕರ್, ಯಮನಯ್ಯ ಗುತ್ತೇದಾರ, ಸಿದ್ದಪ್ಪ ಕೂಲೂರ, ಸಾಬು ಹೋರುಂಚಾ, ಸಿದ್ದಪ್ಪ ಕ್ಯಾಸಪನಳ್ಳಿ ರಿಯಾಜ್ ಪಟೇಲ್, ದೀಪಕ್ ಒಡೆಯರ್, ಸೈದಪ್ಪ ಗೌಡಗೇರಾ, ಭೀಮಣ್ಣ ಶೆಟ್ಟಿಗೇರಾ ಭಾಗವಹಿಸಿದ್ದರು.