ಧಾರವಾಡ: ಕರ್ನಾಟಕ ವಿವಿಯ ಡಾ| ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಕೊಡ ಮಾಡುವ ಪ್ರೊ| ಸ.ಸ. ಮಾಳವಾಡ ಗ್ರಂಥ ಪುರಸ್ಕಾರವನ್ನು “ವಚನ ತವನಿ ’ ಕೃತಿಗಾಗಿ ಕೃತಿಕಾರರಾದ ಭೂವಿಜ್ಞಾನಿ ಡಾ| ಎಚ್. ಚಂದ್ರಶೇಖರ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು.
ಪುರಸ್ಕಾರ ಪ್ರದಾನ ಮಾಡಿದ ಕವಿವಿ ಕುಲಸಚಿವ ಡಾ| ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಸಾಹಿತಿಗಳು ವರ್ತಮಾನದ ಜತೆ ಮುಖಾಮುಖೀಯಾಗಬೇಕಲ್ಲದೆ, ವಿಜ್ಞಾನಕ್ಕೆ ಗಮನ ಕೊಡಬೇಕು. ಸಾಹಿತ್ಯದಿಂದ ಸಮಾಜಕ್ಕೆ ಉಪಯೋಗವಾಗುವ ಕೆಲಸವನ್ನು ನಮ್ಮ ಪ್ರಾಧ್ಯಾಪಕರು ಮತ್ತು ಯುವ ಜನಾಂಗ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.
ನಾನು ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಪ್ರೊ| ಸ.ಸ. ಮಾಳವಾಡ ಅವರದ್ದು ದೊಡ್ಡ ಹೆಸರು. ಮಾಳವಾಡರು ಸಾಹಿತಿ, ವಿದ್ವಾಂಸರಷ್ಟೇ ಆಗಿರಲಿಲ್ಲ, ನಮ್ಮ ಸ್ಮೃತಿಪಟಲದಲ್ಲಿರುವ ಜೀವಂತ ವ್ಯಕ್ತಿಯಾಗಿದ್ದರು. ಅವರ ಪತ್ನಿ ಶಾಂತದೇವಿ ಮಾಳವಾಡರು ಪತಿಯ ದಾರಿಯಲ್ಲಿ ಬಹುದೂರ ನಡೆದು ಬಂದವರು ಎಂದು ಸ್ಮರಿಸಿದರು.
ಪ್ರಶಸ್ತಿ ಪಡೆದ ಕೃತಿ “ವಚನ ತವನಿ ’ಯ ಕುರಿತು ಮಾತನಾಡಿದ ಸಾಹಿತಿ ಡಾ| ಬಾಳಣ್ಣ ಶೀಗೀಹಳ್ಳಿ, ಮಾಳವಾಡರ ನೇರ-ನಿಷ್ಠುರ ವ್ಯಕ್ತಿತ್ವಕ್ಕೂ ಡಾ| ಎಚ್. ಚಂದ್ರಶೇಖರ ಅವರ ವಚನ ತವನಿ ಗ್ರಂಥಕ್ಕೂ ಸಂಬಂಧವಿದೆ. ದೊಡ್ಡ ಸಂಶೋಧಕ ಮಾಡಬಹುದಾದ ಪ್ರಾಮಾಣಿಕ, ನಿಷ್ಠುರದ ಕಾರ್ಯವಿದು. ಇಲ್ಲಿ ಲೇಖಕರು ಯಶಸ್ವಿಯಾಗಿದ್ದರೆ ಪ್ರತಿಯೊಂದು ಲೇಖನವೂ ಹೊಸ ವಾಗ್ವಾದಗಳನ್ನು ಇಟ್ಟುಕೊಂಡೇ ಮುಂದೆ ಸಾಗಿದೆ.
ಆಕರಗಳನ್ನು, ಶಾಸನ, ಶಿಲ್ಪ, ಕ್ಷೇತ್ರಕಾರ್ಯದ ಸಂಗತಿಗಳನ್ನು ಇಟ್ಟುಕೊಂಡೇ ತಾತ್ವಿಕ ವಾಗ್ವಾದಗಳನ್ನು ಸೃಷ್ಟಿಮಾಡುವ ಡಾ| ಎಚ್. ಚಂದ್ರಶೇಖರ ಅವರು ನಮಗೆ ಮೆಚ್ಚುಗೆಯಾಗುತ್ತಾರೆ ಎಂದರು. ಕೃತಿಕಾರ ಡಾ| ಎಚ್. ಚಂದ್ರಶೇಖರ ಮಾತನಾಡಿದರು.
ಡಾ| ಜೆ.ಎಂ. ನಾಗಯ್ಯ ಅಧ್ಯಕ್ಷತೆ ವಹಿಸಿದರು. ಪ್ರೊ| ಸ.ಸ. ಮಾಳವಾಡ ಪ್ರಶಸ್ತಿಯ ಸಂಯೋಜಕ ಡಾ| ನಿಂಗಪ್ಪ ಮುದೇನುರ ಸ್ವಾಗತಿಸಿದರು. ಮಹಾಂತೇಶ ಚವ್ಹಾಣ ಪ್ರಾರ್ಥಿಸಿದರು. ಸರಸ್ವತಿ ಹತ್ತಿಕಟಿಗಿ ಪರಿಚಯಿಸಿದರು. ಮಹಾಂತ ದೇಸಾಯಿ ನಿರೂಪಿಸಿದರು. ಕಿರಣ ಕಮ್ಮಾರ ವಂದಿಸಿದರು.