ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತಾಪಿ ಸಮದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಲಸಿಕೆಯುಂಟು. ಆದರೆ ರೋಗಗಳಿಗೆ ತುತ್ತಾದರೆ ಆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಔಷಧಿಯೇ ಇಲ್ಲ!
ಜಿಲ್ಲೆಗೆ ನಿಗದಿತ ಸಮಯಕ್ಕೆ ಔಷಧಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ನೀಡಲು ಔಷಧಿ ಕೊರತೆ ಎದುರಾಗಿದೆ. ಮೊದಲೇ ಪಶು ವೈದ್ಯರ ಕೊರತೆ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈಗ ಔಷಧಿ ಕೊರತೆ ಉಂಟಾಗಿರುವ ಕಾರಣ ವೈದ್ಯರು ಲಭಿಸಿದರೂ ಔಷಧಿ ಇಲ್ಲದ ಕಾರಣ ಜಾನುವಾರುಗಳಿಗೆ ಚಿಕಿತ್ಸೆಲಭ್ಯವಾಗುತ್ತಿಲ್ಲ. ಇನ್ನೂ ಔಷಧಿ ಇಲ್ಲದ ಕಾರಣದಿಂದ ವೈದ್ಯರೇ ಚೀಟಿ ಬರೆದು ಔಷಧಿ ತರುವಂತೆ ಜಾನುವಾರು ಮಾಲೀಕರಿಗೆ ಕೊಡುತ್ತಿದ್ದಾರೆ. ಇದರಿಂದ ಜಿಲ್ಲೆಯ ಜಾನುವಾರುಗಳಿಗೆ ಅಷ್ಟೇ ಅಲ್ಲದೇ ಜಾನುವಾರುಗಳ ಮಾಲೀಕರೂ ಸಹ ಸಂಕಷ್ಟ ಎದುರಾಗುವಂತಾಗಿದೆ.
ಚಿಕಿತ್ಸಾಲಯದಲ್ಲಿಲ್ಲ ಔಷಧಿ: ಧಾರವಾಡ ನಗರದಲ್ಲಿ ಮಾತ್ರವೇ ಪಾಲಿ ಕ್ಲಿನಿಕ್ ಕೇಂದ್ರ ಇದ್ದು, ಈ ಕೇಂದ್ರದ ಉಪನಿರ್ದೇಶಕ ಹುದ್ದೆ ಸಹ ಖಾಲಿ ಇದೆ. ಇನ್ನು ನವಲಗುಂದ ತಾಲೂಕು ಹೊರತುಪಡಿಸಿ ಪ್ರತಿ ತಾಲೂಕಿನ ಎರಡು ಹೋಬಳಿ ಮಟ್ಟದಲ್ಲಿ ಪಶು ಆಸ್ಪತ್ರೆಗಳು ಸೇರಿ ಒಟ್ಟು 11 ಪಶು ಆಸ್ಪತ್ರೆಗಳು ಇವೆ. ಇನ್ನುಳಿದಂತೆ 53 ಪಶು ಚಿಕಿತ್ಸಾಲಯ, 42 ಪ್ರಾಥಮಿಕ ಪಶು ಚಿಕಿತ್ಸಾಲಯ ಇದ್ದು, ಈ ಚಿಕಿತ್ಸಾಲಯಗಳಲ್ಲಿ ಕೆಲವೊಂದಿಷ್ಟು ಮೂಲಸೌಕರ್ಯಗಳು ಹಾಗೂ ವೈದ್ಯಾಧಿಕಾರಿಗಳ ಕೊರತೆ ಎದ್ದು ಕಾಣುತ್ತಲಿವೆ.
ಈ ಆಸ್ಪತ್ರೆಗಳಿಂದ ದೂರ ಇರುವ ಹಳ್ಳಿಯ ಜನರ ಅನುಕೂಲಕ್ಕಾಗಿ ಜಿಲ್ಲೆಗೆ ಮಂಜೂರಾಗಿರುವ ಸಂಚಾರಿ ಪಶುಚಿಕಿತ್ಸಾಲಯಗಳ ಪೈಕಿ ಮೂರು ಅಷ್ಟೇ ಕಾರ್ಯಾರಂಭ ಇವೆ. ಕುಂದಗೋಳ ಹಾಗೂ ನವಲಗುಂದದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು ಕಾರ್ಯಾರಂಭವೇ ಮಾಡಿಲ್ಲ. ಈ ಎಲ್ಲ ಕೇಂದ್ರಗಳಲ್ಲೂ ಔಷಧಿ ಕೊರತೆ ಎದುರಾಗಿರುವ ಕಾರಣ ಜಾನುವಾರುಗಳಿಗೆ ನಿಗದಿತ ಸಮಯಕ್ಕೆ ಸೂಕ್ತ ಚಿಕಿತ್ಸೆಯೇ ಸಿಗದಂತಾಗಿದೆ.
ಹೊರಗಡೆಯಿಂದ ಔಷಧಿ: ಸಾಂಕ್ರಾಮಿಕ ರೋಗಗಳ ಹತೋಟಿಗಾಗಿ ಮುಂಜಾಗೃತಾ ಕ್ರಮವಾಗಿ ಲಸಿಕೆ ಹಾಕುವ ಸಂಪ್ರದಾಯ ಇದ್ದು, ಈ ಲಸಿಕೆ ಸಹ ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕಾಗಿ ಅಭಿಯಾನ ಕೈಗೊಂಡು ಲಸಿಕೆ ಹಾಕುವ ಕಾರ್ಯವೂ ನಡೆಯುತ್ತಲೇ ಇದ್ದು, ಈ ಕಾರ್ಯಕ್ಕಾಗಿ ಲಸಿಕೆಯ ಕೊರತೆ ಇಲ್ಲ. ಆದರೆ ರೋಗಗಳಿಗೆ ತುತ್ತಾಗುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯ ಆಗುತ್ತಿಲ್ಲ ಎಂಬ ಆರೋಪರೈತಾಪಿ ವರ್ಗದವರಲ್ಲಿ ಇದೆ. ರೋಗಕ್ಕೆ ತುತ್ತಾದ ಜಾನುವಾರುಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದೇ ಕಷ್ಟ. ಆಸ್ಪತ್ರೆಗೆ ಹೋದರೂ ನಿಗದಿತ ಸಮಯಕ್ಕೆ ವೈದ್ಯಾಧಿಕಾರಿಗಳೇ ಇರಲ್ಲ. ಒಂದು ವೇಳೆ ಇದ್ದರೂ ಚಿಕಿತ್ಸೆ ಕೊಡಲು ಸಿದ್ಧರಿದ್ದರೂ ಆಸ್ಪತ್ರೆಯಲ್ಲಿ ಔಷಧಿ ಇಲ್ಲ. ಹೀಗಾಗಿ ಹೊರಗಡೆ ಹೋಗಿ ಔಷಧಿ ತರುವಂತೆ ಚೀಟಿ ಬರೆದು ಕೊಡುತ್ತಾರೆ ಎಂಬ ಆರೋಪಗಳು ರೈತಾಪಿ ಸಮುದಾಯದಿಂದ ಕೇಳಿ ಬರುತ್ತಲಿವೆ.
-ಶಶಿಧರ್ ಬುದ್ನಿ