Advertisement

ಇನ್ನೊಂದು ಹೆಜ್ಜೆಯಷ್ಟೇ ಬಾಕಿ : ಕೊವ್ಯಾಕ್ಸಿನ್‌ ತುರ್ತು ಬಳಕೆಗೂ ಶಿಫಾರಸು

01:18 AM Jan 03, 2021 | Team Udayavani |

ಹೊಸದಿಲ್ಲಿ: ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಕೊವಿಶೀಲ್ಡ್‌ ಲಸಿಕೆಯ ಬೆನ್ನಲ್ಲೇ ಈಗ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್‌ ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಎರಡು ಲಸಿಕೆಗಳು ಭಾರತದಲ್ಲಿ ಅಂತಿಮ ಅನುಮತಿ ಪಡೆಯುವತ್ತ ಹೆಜ್ಜೆ ಯಿಟ್ಟಂತಾಗಿದೆ. ಆದರೆ ಕೊವ್ಯಾಕ್ಸಿನ್‌ ಮತ್ತು ಕೊವಿಶೀಲ್ಡ್‌ ಎರಡೂ ಲಸಿಕೆಗಳು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾ ಲಯ(ಡಿಸಿಜಿಐ)ದ ಒಪ್ಪಿಗೆಯ ಮುದ್ರೆಗಾಗಿ ಕಾಯುತ್ತಿದ್ದು, ಒಪ್ಪಿಗೆ ಸಿಕ್ಕ ಕೂಡಲೇ ತುರ್ತು ಬಳಕೆ ಆರಂಭವಾಗಲಿದೆ.

Advertisement

ಕೊವ್ಯಾಕ್ಸಿನ್‌ ಲಸಿಕೆಯನ್ನು ಭಾರತ್‌ ಬಯೋಟೆಕ್‌ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ(ಐಸಿಎಂಆರ್‌) ಮತ್ತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ(ಎನ್‌ಐವಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಡಿ.7 ರಂದು ಭಾರತ್‌ ಬಯೋಟೆಕ್‌ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. 3ನೇ ಹಂತದ ಪ್ರಯೋಗದ ದತ್ತಾಂಶಗಳು ಹಾಗೂ ಸುರಕ್ಷತಾ ಮಾಹಿತಿಯನ್ನು ಕೋರಿದ್ದ ತಜ್ಞರ ಸಮಿತಿ, ಈಗ ಈ ಎಲ್ಲದರ ಪರಿಶೀಲನೆ ನಡೆಸಿ ತುರ್ತು ಬಳಕೆಗೆ ಶಿಫಾರಸು ಮಾಡಿದೆ.

ನಾಲ್ವರಿಗೆ ಸೋಂಕು: ಯುಕೆಯಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ್ದ ನಾಲ್ವರಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರನ್ನೂ ಪ್ರತ್ಯೇಕವಾಸದಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ, ದೇಶದಲ್ಲಿ ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳಲ್ಲಿ 19,079 ಮಂದಿಗೆ ಸೋಂಕು ದೃಢಪಟ್ಟಿದ್ದು, 224 ಮಂದಿ ಸಾವಿಗೀಡಾಗಿದ್ದಾರೆ.

ದೇಶಾದ್ಯಂತ ಉಚಿತ ಲಸಿಕೆ: ಒಂದು ಕೋಟಿ ಆರೋಗ್ಯ ಸೇವಾ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಆದ್ಯತಾ ಫ‌ಲಾನುಭವಿಗಳಿಗೆ ಮೊದಲ ಹಂತದ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಶನಿವಾರ ಘೋಷಿಸಿದ್ದಾರೆ. ಜುಲೈ ತಿಂಗಳ ವರೆಗೆ ಲಸಿಕೆ ಸ್ವೀಕರಿಸಲಿರುವ 27 ಕೋಟಿ ಫ‌ಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಲಸಿಕೆಗೆ ಅನುಮತಿ ನೀಡುವಾಗ ಯಾವುದೇ ಶಿಷ್ಟಾಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ಲಸಿಕೆಯ ಸುರಕ್ಷತೆ ಹಾಗೂ ದಕ್ಷತೆ ಕುರಿತ ವದಂತಿಗಳಿಗೆ ಕಿವಿಗೊಡದಿರಿ ಎಂದೂ ಹರ್ಷವರ್ಧನ್‌ ಸಲಹೆ ನೀಡಿದ್ದಾರೆ.

ಎಲ್ಲ ರಾಜ್ಯಗಳಲ್ಲೂ ಡ್ರೈ ರನ್‌: “ಆಪರೇಷನ್‌ ಲಸಿಕೆ’ ಅಭಿಯಾನದ ಅಂಗವಾಗಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರ ಲಸಿಕೆ ವಿತರಣೆಯ ಅಣಕು ಪ್ರಕ್ರಿಯೆ(ಡ್ರೈ ರನ್‌) ಶನಿವಾರ ನಡೆಸಲಾಗಿದೆ. ಕರ್ನಾಟಕ, ಕೇರಳ, ದಿಲ್ಲಿ, ತಮಿಳುನಾಡು, ಅಸ್ಸಾಂ, ಪ. ಬಂಗಾಲ, ಮಹಾರಾಷ್ಟ್ರ ಸಹಿತ ಎಲ್ಲ ರಾಜ್ಯಗಳ ಆಯ್ದ ಆಸ್ಪತ್ರೆಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಲಸಿಕೆ ವಿತರಣೆಗೆ ಸಮರ್ಪಕ ವಿಧಾನ ಬಳಕೆ ಹಾಗೂ ಸಾಗಣೆ-ದಾಸ್ತಾನು ಪ್ರಕ್ರಿಯೆಯಲ್ಲಿನ ಲೋಪ ನಿವಾರಣೆ ಹಾಗೂ ತರಬೇತಿಯ ಉದ್ದೇಶದಿಂದ ಈ ಡ್ರೈ ರನ್‌ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next