Advertisement

ಲಸಿಕೆಗಾಗಿ ಮುಗಿಬಿದ್ದ ಜನ

09:39 PM Jul 05, 2021 | Team Udayavani |

ಗದಗ: ದಿನಕಳೆದಂತೆ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಇಲ್ಲಿನ ಗಾಂಧಿ ಸರ್ಕಲ್‌ನಲ್ಲಿರುವ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ರವಿವಾರ ಕೋವಿಡ್‌ ಲಸಿಕೆಗಾಗಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು.

Advertisement

ಜನರ ಸರದಿ ಆಸ್ಪತ್ರೆಯ ಮೇನ್‌ ಗೇಟ್‌ ತಲುಪಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಲಸಿಕೆ ಖಾಲಿಯಾಗಿದ್ದರಿಂದ ಭಾಗಶಃ ಜನರು ಬಂದ ದಾರಿಗೆ ವಾಪಸ್ಸಾದರು. ಹಳೇ ಜಿಲ್ಲಾಸ್ಪತ್ರೆಯ ಮೊದಲ ಮಹಡಿಯಲ್ಲಿ ಲಸಿಕಾ ಕೇಂದ್ರ ಆರಂಭಿಸಲಾಗಿತ್ತು. ಆದರೆ, ಶನಿವಾರ ಮತ್ತು ರವಿವಾರ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದರಿಂದ ಆಸ್ಪತ್ರೆಯ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಪ್ರತ್ಯೇಕ ಎರಡು ಲಸಿಕಾ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ.

ನಿರೀಕ್ಷೆಯಂತೆ ರವಿವಾರ ರಜಾ ದಿನವಾಗಿದ್ದರಿಂದ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಸೇರಿದಂತೆ ಏಕಕಾಲಕ್ಕೆ ಒಂದೂವರೆ ಸಾವಿರಕ್ಕಿಂತ ಹೆಚ್ಚಿನ ಜನರು ಲಸಿಕೆಗಾಗಿ ಆಗಮಿಸಿದ್ದರು. ಬೆಳಗ್ಗೆ 9 ಗಂಟೆಯಿಂದಲೇ ಜನರು ಸಾಲುಗಟ್ಟಿದ್ದರು. ಲಸಿಕಾಕರಣ ಆರಂಭವಾದ ಬಳಿಕ ಜನರ ಸಾಲು ನೋಡನೋಡುತ್ತಿದ್ದಂತೆ ಆಸ್ಪತ್ರೆಯ ಮೇನ್‌ ಗೇಟ್‌ ತಲುಪಿತು. ಈ ವೇಳೆ ಜನರ ಮಧ್ಯೆ ನೂಕನುಗ್ಗಲು ಉಂಟಾಗಿದ್ದರಿಂದ ಸಾರ್ವಜನಿಕರ ವಾಗ್ವಾದಕ್ಕೆ ಕಾರಣವಾಯಿತು.

ಕೆಲವರು ಸರದಿ ತಪ್ಪಿಸಿ ಮುಂದೆ ಹೋಗುತ್ತಿದ್ದವರನ್ನು ಪ್ರಶ್ನಿಸಿದರೆ, ಅವರೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದರಿಂದ ಇದರಿಂದಾಗಿ ಸರದಿಯಲ್ಲಿ ಗೊಂದಲ, ಗಲಾಟೆಗಳು ಕಾರಣವಾಗುತ್ತಿದ್ದವು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಪ್ರವೇಶಿಸಿ, ನಿವಾರಿಸುವುದರ ಜೊತೆಗೆ ಜನರನ್ನು ಸರದಿಯಲ್ಲಿ ನಿಲ್ಲುವಂತೆ ಮಾಡಲು ಹರಸಾಹಸ ನಡೆಸಿದರು.

ಭಾಗಶಃ ಮಂದಿಗೆ ದೊರೆಯದ ಲಸಿಕೆ: ಜಿಮ್ಸ್‌, ಗಾಂಧಿ ಸರ್ಕಲ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ(ಹಳೇ ಜಿಲ್ಲಾ ಆಸ್ಪತ್ರೆ), ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ, ರೆಹಮತ್‌ ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ಅವಳಿ ನಗರದಲ್ಲಿ ನಾಲ್ಕು ಲಸಿಕಾ ಕೇಂದ್ರಗಳಿದ್ದರೂ ನಗರದ ಹೃದಯ ಭಾಗದಲ್ಲಿರುವ ಹಳೇ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಜನರು ಮುಗಿ ಬೀಳುತ್ತಿರುವ ಹಿನ್ನೆಲೆಯಲ್ಲಿ ರೆಹಮತ್‌ ನಗರದ ಕೇಂದ್ರವನ್ನೂ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಆದರೆ, ಸರಕಾರದಿಂದ ಬೇಡಿಕೆಯಷ್ಟು ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ರವಿವಾರ ಸರದಿಯಲ್ಲಿ ನಿಂತಿದ್ದವರಲ್ಲಿ ಬಹುತೇಕರಿಗೆ ಲಸಿಕೆ ಸಿಗದೇ ವಾಪಸ್ಸಾಗುವಂತಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಆರ್‌ಸಿಎಚ್‌ ಅಧಿಕಾರಿ ಡಾ| ಬಿ.ಎಂ. ಗೋಜನೂರ, ಜಿಲ್ಲೆಯ 50 ಲಸಿಕಾ ಕೇಂದ್ರಗಳಲ್ಲಿ ರವಿವಾರ 2827 ಜನರಿಗೆ ಲಸಿಕೆ ನೀಡಲಾಗಿದೆ. ಆ ಪೈಕಿ ಹಳೇ ಜಿಲ್ಲಾ ಆಸ್ಪತ್ರೆಗೆ ನೀಡಿದ್ದ 470 ಲಸಿಕೆ ಖಾಲಿಯಾಗಿದೆ.

Advertisement

ಸೋಮವಾರ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದರಿಂದ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಡೋಸ್‌ ಲಸಿಕೆ ಒದಗಿಸುವಂತೆ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next