ನೆಲಮಂಗಲ: ರಾಜ್ಯದಲ್ಲಿ ಲಸಿಕೆಗಾಗಿ ಜನ ಪರ ದಾಡುವ ಸಮಯದಲ್ಲಿ ಸರ್ಕಾರಿ ಸಿಬ್ಬಂದಿ ಉಚಿತ ಲಸಿಕೆಯನ್ನು 400ಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ದಾಳಿಯಿಂದ ಪತ್ತೆಯಾಗಿದೆ. ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಆರೋಗ್ಯ ಉಪ ಕೇಂದ್ರದಲ್ಲಿ 50 ಡೋಸ್ ಉಚಿತ ಲಸಿಕೆ ನೀಡಲಾಗುತ್ತಿತ್ತು.
ಆದರೆ, ಆರೋಗ್ಯ ಸಹಾಯಕಿ ಗಾಯಿತ್ರಿ ಲಸಿಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ರಹಸ್ಯ ಕಾರ್ಯಾಚರಣೆ ನಡೆಸಿ ದಾಗ ಸಿಕ್ಕಿಬಿದ್ದಿದ್ದಾರೆ. ತಕ್ಷಣ ಇದರ ಬಗ್ಗೆ ಮಾಹಿತಿ ತಿಳಿದು ತಹಶೀಲ್ದಾರ್ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಸ್ಥಳದಲ್ಲಿ ಎರಡು ಬಾಟಲ್ ಲಸಿಕೆ ದೊರೆತ್ತಿದ್ದು, ಹಣ ಪಡೆದಿರುವುದು ಖಚಿತವಾಗಿದೆ.
ಅಧಿಕಾರಿಗಳ ಮೇಲೆ ಕೂಗಾಟ: ಲಸಿಕೆ ಹಣ ಪಡೆಯುತ್ತಿರುವ ಬಗ್ಗೆ ವಿಡಿಯೋ ಸಮೇತ ಮಾಹಿತಿ ಸಿಕ್ಕ ನಂತರ ಅಧಿಕಾರಿಗಳು ಕೇಂದ್ರದ ಮೇಲೆ ದಾಳಿ ಮಾಡಿದಾಗ ಗಾಯಿತ್ರಿ ಅಧಿಕಾರಿಗಳ ಮೇಲೆ ಕೂಗಾಡಿದರು. ಪರಿಶೀಲನೆ ಮಾಡಿ ದಾಗ ದಾಖಲಾತಿ, ಲಸಿಕೆ ಸಿಕ್ಕಿದ ತಕ್ಷಣ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಕಾಲಿಗೆ ಬಿದ್ದು ನಾನು ಸಾಯುತ್ತೇನೆ, ಬಿಟ್ಟು ಬಿಡಿ ಎಂದು ಹೈಡ್ರಾಮ ಮಾಡಿದ್ದಾಳೆ. ದಾಖಲಾತಿ, ಲಸಿಕೆ ವಶ ಪಡಿಸಿಕೊಂಡಿದ್ದು, ತನಿಖೆಗೆ ಆದೇಶ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಲಸಿಕೆ ವ್ಯರ್ಥವಾಗದಿರಲಿ: ಒಬ್ಬ ವ್ಯಕ್ತಿಗೆ 0.5 ಎಂಎಲ್ ಲಸಿಕೆ ನೀಡಬೇಕು. ಆದರೆ, ಅರಿಶಿನಕುಂಟೆ ಆರೋಗ್ಯ ಉಪಕೇಂದ್ರದಲ್ಲಿ 0.3 ಎಂಎಲ್, 0.2 ಎಂಎಲ್ ನೀಡುವ ಮೂಲಕ ಇಲಾಖೆ ನೀಡುತ್ತಿದ್ದ 5 ಬಾಟಲ್ನ 50 ಡೋಸನ್ನು 80ಕ್ಕೂ ಹೆಚ್ಚು ಜನರಿಗೆ ನೀಡುತ್ತಿದ್ದು, 400ರಿಂದ 500 ರೂ.ಗೆ ಮಾರಾಟ ಮಾಡಿದ್ದಾರೆ. ಲಸಿಕೆ ಪಡೆದವರಿಗೆ 5-6 ದಿನ ನಂತರ ನೋಂದಣಿ ಮಾಡಿ, ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಡೋಸ್ ಪ್ರಮಾಣ ಕಡಿಮೆಯಾ ದರೆ, ಲಸಿಕೆ ಪರಿಣಾಮಕಾರಿಯಲ್ಲ. ಕಡಿಮೆ ಪ್ರಮಾಣ ನೀಡುವ ಬಗ್ಗೆ ಸಮಗ್ರ ತನಿಖೆ ಮುಂದಾಗಿದ್ದು, ಮುಂದಿನ ದಿನದಲ್ಲಿ ಮತ್ತೆ ಅವರಿಗೆ ಲಸಿಕೆ ನೀಡುವುದು ಅನಿವಾರ್ಯ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ,
ದೊಡ್ಡಜಾಲ: ನನಗೆ ಲಸಿಕೆ ಬಂದಿರುವ ಬಗ್ಗೆ ಮೇಲಾಧಿಕಾರಿಗೆ ಮಾಹಿತಿ ಇದೆ. ನಾನು ಒಬ್ಬಳೇ ಲಸಿಕೆ ಮಾರಾಟ ಮಾಡುತ್ತಿಲ್ಲ. ಅನೇಕರು ಮಾಡುತ್ತಿದ್ದಾರೆ. ನಾನು ಒತ್ತಾಯ ಮಾಡಿ ಲಸಿಕೆ ತಂದಿದ್ದೇನೆ ಎಂದು ದಾಳಿ ವೇಳೆ ಸಿಬ್ಬಂದಿ ಗಾಯಿತ್ರಿ, ಅಧಿಕಾರಿಗಳಿಗೆ ಸುಳಿವು ನೀಡಿದ್ದು, ಸರ್ಕಾರಿ ಸಿಬ್ಬಂದಿ, ಕೆಲ ಅಧಿಕಾರಿಯಿಂದಲೇ ಲಸಿಕೆ ಮಾರಾಟ ದಂಧೆ ನಡೆಯುತ್ತಿರುವ ಅನುಮಾನವ್ಯಕ್ತವಾಗಿದ್ದು, ಸಮಗ್ರ ತನಿಖೆಯಾದರೆ ದೊಡ್ಡಜಾಲ ಪತ್ತೆಯಾಗಲಿದೆ.