ಹೊಸದಿಲ್ಲಿ: ಕೊರೊನಾ ಲಸಿಕೆ ಖರೀದಿ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಮೂಗುದಾರ ಹಾಕಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋವಿನ್ ಪೋರ್ಟಲ್ ಮೂಲಕವೇ ಲಸಿಕೆಯನ್ನು ಆರ್ಡರ್ ಮಾಡಬೇಕೇ ಹೊರತು ಉತ್ಪಾದಕರಿಂದ ನೇರವಾಗಿ ಖರೀದಿಸುವಂತಿಲ್ಲ ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಮಾಸಿಕ ಲಸಿಕೆ ಖರೀದಿಯ ಮೇಲೆ “ಗರಿಷ್ಠ ಮಿತಿ’ ಹೇರಲಾಗಿದ್ದು, ಮಿತಿಗಿಂತ ಹೆಚ್ಚು ಲಸಿಕೆ ಖರೀದಿಸುವಂತಿಲ್ಲ ಎಂದೂ ನಿರ್ದೇಶಿಸಿದೆ.
ಸೀಮಿತ ಪೂರೈಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ವೇಸ್ಟೇಜ್ ತಪ್ಪಿಸುವುದು ಹಾಗೂ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದೇ ಇದರ ಉದ್ದೇಶ ಎಂದು ಹೇಳಲಾಗಿದೆ. ಜುಲೈ 1ರಿಂದಲೇ ಈ ಹೊಸ ಮಾರ್ಗಸೂಚಿಯು ಜಾರಿಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಬಾರಿಗೆ ಲಸಿಕೆ ಅಭಿಯಾನ ನಡೆಸಲಿರುವ ಆಸ್ಪತ್ರೆಗಳಿಗೆ ಲಭ್ಯವಿರುವ ಬೆಡ್ ಗಳ ಆಧಾರದಲ್ಲಿ ಲಸಿಕೆಯನ್ನು ವಿತರಿಸಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ಕೋವಿನ್ ಡೇಟಾಬೇಸ್ ನಲ್ಲಿ ಅಗತ್ಯ ವಿವರಗಳನ್ನು ಸಲ್ಲಿಸಬೇಕು. ಅಲ್ಲದೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪೋರ್ಟಲ್ ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲೇ ಹಣ ಪಾವತಿಸಬೇಕು ಎಂದೂ ಸೂಚಿಸಲಾಗಿದೆ. ಡೋಸ್ ಗಳ 75:25ರ ಹಂಚಿಕೆಯನ್ನು ಬದಲಿಸುವಂತೆ ಕೆಲವು ರಾಜ್ಯಗಳು ಕೋರಿಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ಹೊಸ ವಿಧಾನಗಳನ್ನು ಸರಕಾರ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮನೆಯಲ್ಲೇ ಲಸಿಕೆ: ಅನಾರೋಗ್ಯ ಪೀಡಿತರಾಗಿ ಅಥವಾ ವಯೋವೃದ್ಧರಾಗಿ ಹಾಸಿಗೆ ಹಿಡಿದಿರುವ ನಾಗರಿಕರಿಗೆ ಮನೆಗಳಲ್ಲೇ ಲಸಿಕೆ ನೀಡುವ ಪ್ರಾಯೋಗಿಕ ಪ್ರಕ್ರಿಯೆ ಆರಂಭಿಸುವುದಾಗಿ ಮಹಾರಾಷ್ಟ್ರ ಸರಕಾರ ಬುಧವಾರ ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದಕ್ಕೆ ಕೇಂದ್ರ ಸರಕಾರ ಅನುಮತಿ ನೀಡುವವರೆಗೆ ಕಾಯುವುದಿಲ್ಲ ಎಂದೂ ಹೇಳಿದೆ.
ಕೊವಿಶೀಲ್ಡ್, ಕೊವ್ಯಾಕ್ಸಿನ್ ಪರಿಗಣಿಸಲು ಭಾರತ ಮನವಿ: ಐರೋಪ್ಯ ಒಕ್ಕೂಟದ (ಇ.ಯು) ರಾಷ್ಟ್ರ ಗಳು, ತಮ್ಮ ಕೊರೊನಾ ಲಸಿಕೆ ಪಡೆದವರಿಗೆ ಪಾಸ್‌ಪೋರ್ಟ್ ನೀಡುವ ಯೋಜನೆಯಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಪಡೆದವರನ್ನೂ ಪರಿ ಗಣಿಸಬೇಕು ಎಂದು ಕೇಂದ್ರ ಸರ ಕಾ ರ, ಐರೋಪ್ಯ ಒಕ್ಕೂಟವನ್ನು ಆಗ್ರಹಿಸಿದೆ.
ಜಗತ್ತಿನ ವಿವಿಧ ದೇಶಗಳು ಒಂದಾಗಿ ಕೊರೊನಾ ವಿರುದ್ಧ ಸೆಣೆಸಬೇಕು. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯಸಂಸ್ಥೆಯಲ್ಲೇ ಭಾರೀ ಸುಧಾರಣೆಗಳಾಗಬೇಕು. ಎಲ್ಲ ದೇಶಗಳು ಪರಸ್ಪರ ತಮ್ಮ ಅನುಭವ, ಜ್ಞಾನ, ಉತ್ತಮ ಆರೋಗ್ಯ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು.
ಡಾ.ಹರ್ಷವರ್ಧನ್, ಕೇಂದ್ರ ಆರೋಗ್ಯ ಸಚಿವ