Advertisement
ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕೊರೊನಾ ತಡೆ ನಿಯಮಗಳು ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಅತ್ಯಂತ ಪರಿಣಾಮ ಕಾರಿ ಸಾಧನಗಳಾಗಿವೆ ಎಂಬುದು ನಮಗೆ ತಿಳಿದಿದೆ. ನಿಯಂತ್ರಣ ಮತ್ತು ಕಾನೂನು ಜಾರಿ ಸಂಸ್ಥೆಗಳು ಕೊರೊನಾ ತಡೆ ನಿಯಮಗಳನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೆ ತರಬೇಕು. ಈ ನಿಯಮಗಳನ್ನು ಉಲ್ಲಂ ಸಿದರೆ ಭಾರೀ ಮೊತ್ತದ ದಂಡಗಳನ್ನು ವಿಧಿಸಬೇಕು. ಈ ಕ್ರಮವು ಭವಿಷ್ಯದ ಅಲೆಗಳ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
Related Articles
Advertisement
ಭಾರತದಲ್ಲಿ ಲಸಿಕೆ ಪಡೆಯುವಲ್ಲಿನ ಹಿಂಜರಿಕೆಗೆ ದಾರಿ ತಪ್ಪಿಸುವಿಕೆ ಮತ್ತು ತಪ್ಪು ಮಾಹಿತಿಯೇ ಕಾರಣವಾಗಿದೆ. ಹೀಗಾಗಿಯೇ ಈ ಹಿಂಜರಿಕೆಯು ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಇರುವ ದೊಡ್ಡ ಅಡ್ಡಿಯಾಗಿದೆ. ಹೀಗಾಗಿ ಬಿಲಿಯನ್ ಡಾಲರ್ ಪ್ರಶ್ನೆ ಏನು ಎಂದರೆ ನಾವು ಲಸಿಕೆಯನ್ನು ಸಾರ್ವತ್ರಿಕವಾಗಿ ಅಥವಾ ಕನಿಷ್ಠ ಆಯ್ದ ಜನಸಂಖ್ಯೆಯ ಗುಂಪಿನಲ್ಲಿ ಕಡ್ಡಾಯಗೊಳಿಸಬೇಕೇ ಅಥವಾ ನಾಗರಿಕರಿಗೇ ನಿರ್ಧರಿಸಲು ಆಯ್ಕೆಯಾಗಿ ಬಿಡಬೇಕೇ ಎಂಬುದಾಗಿದೆ.
ಒಂದು ಪ್ರಮುಖ ವಿಷಯವೆಂದರೆ ಪ್ರಸ್ತುತ ಲಭ್ಯವಿರುವ ಎಲ್ಲ ಲಸಿಕೆಗಳು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೇ ಸಾಕಷ್ಟು ಸುರಕ್ಷಿತವಾಗಿವೆೆ. ಲಸಿಕೆ ಪಡೆದ ಜನರು, ಲಸಿಕೆ ಪಡೆಯದವರಿಗಿಂತ ಕೊರೊನಾ ಮತ್ತು ಇತರ ಗಂಭೀರ ರೋಗಕ್ಕೆ ತುತ್ತಾಗುವ ಅಪಾಯ ಕಡಿಮೆ ಎಂಬುದನ್ನು ಪ್ರಯೋಗಗಳು ತೋರಿಸಿವೆ. ಸಾವಿರಾರು ಸ್ವಯಂಸೇವಕರನ್ನು ಒಳಗೊಂಡ ವೈದ್ಯಕೀಯ ಪ್ರಯೋಗಗಳ ಪ್ರಕಾರ, ಲಸಿಕೆ ಪಡೆದವರಲ್ಲಿ ಕೊರೊನಾದ ಅಪಾಯವನ್ನು ಶೇ.70-95ನಷ್ಟು ಕಡಿಮೆ ಮಾಡಿದೆ ಎಂದು ತೋರಿಸಿದೆ. ಆದ್ದರಿಂದ ಲಸಿಕೆಯ ಸುರಕ್ಷತೆ, ಸಾಮರ್ಥ್ಯ ಮತ್ತು ಪರಿಣಾಮಕತ್ವವು ಲಸಿಕೆಯ ಹಿಂಜರಿಕೆಗೆ ಯಾವುದೇ ಅವಕಾಶವನ್ನು ನೀಡಬಾರದು. ಸಾರ್ವಜನಿಕ ಹಿತಾಸಕ್ತಿಗಾಗಿ ಈ ಹಿಂಜರಿಕೆಯನ್ನು ನಿವಾರಿಸಲು ಕಡ್ಡಾಯ ಲಸಿಕೆಯ ಅಗತ್ಯವಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಲಸಿಕೆಯನ್ನು ಕಡ್ಡಾಯಗೊಳಿಸುವುದರ ಜತೆಗೆ, ನಾವು ಮೊದಲಿಗೆ ಕೊರತೆಯಾಗದ ರೀತಿ ಪೂರೈಕೆ, ಪೂರೈಕೆಯ ಸರಪಳಿಯ ನಿರ್ವಹಣೆ ಮತ್ತು ಅರ್ಹ ಜನಸಂಖ್ಯೆಗೆ ಲಸಿಕೆ ನೀಡಲು ಬೇಕಾದ ಮೂಲ ಸೌಕರ್ಯವಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ವಿವಿಧ ಹಂತಗಳಲ್ಲಿ ನೈತಿಕ, ಪಾರದರ್ಶಕತೆಯ ಮೂಲಕ ವೈಜ್ಞಾನಿಕ ದತ್ತಾಂಶವನ್ನು ಸಾರ್ವಜನಿಕರ ಮುಂದಿಟ್ಟು ಅವರ ನಂಬಿಕೆಯನ್ನು ಗಳಿಸಿಕೊಳ್ಳಬೇಕು
ಕಡ್ಡಾಯ ಲಸಿಕೆಗಳ ಕೆಲವು ನಿರ್ದಿಷ್ಟ ಕ್ಷೇತ್ರಗಳನ್ನು ನೋಡೋಣ. ಆರೋಗ್ಯ ಕ್ಷೇತ್ರ ಮತ್ತು ಇತರ ಮುಂಚೂಣಿ ಕಾರ್ಯಕರ್ತರು ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದನ್ನು ಕಡ್ಡಾಯ ಮಾಡಬೇಕು ಮತ್ತು ಲಸಿಕೆ ಹಾಕಿಸಿಕೊಳ್ಳದಿದ್ದರೆ ರೋಗಿಯ ಆರೈಕೆ ಪ್ರದೇಶಗಳಲ್ಲಿ ಕೆಲಸ ಮಾಡಲು ಒಪ್ಪಿಗೆ ಕೊಡಬಾರದು. ಲಸಿಕೆ ಪಡೆದ ಅನಂತರ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗಲುವ, ಮರಣಕ್ಕೀ ಡಾಗಿರುವ ದರ ತುಂಬಾ ಕಡಿಮೆ ಇದೆ ಎಂಬುದನ್ನು ನಮ್ಮಲ್ಲಿರುವ ದತ್ತಾಂಶಗಳೇ ಸಾಬೀತು ಮಾಡಿವೆ.
ಶಾಲೆಗಳು: ಎಲ್ಲ ಶಿಕ್ಷಕರು ಮತ್ತು ಶಾಲೆಯಲ್ಲಿನ ಇತರ ವಯಸ್ಕ ಸಿಬಂದಿ ಲಸಿಕೆ ತೆಗೆದುಕೊಳ್ಳಬೇಕು. ಈ ಮೂಲಕ ಅವರ ನಡುವೆಯೇ ಕೊರೊನಾ ಹರಡದಂತೆ ಮತ್ತು ಮಕ್ಕಳಿಗೂ ಹರಡಿಸದಂತೆ ನೋಡಿಕೊಳ್ಳಬಹುದು.
ಸಾಮಾನ್ಯ ಜನತೆ: ಸಾಮಾನ್ಯವಾಗಿ ಎಲ್ಲ ಜನರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ನಿಯಮ ಮಾಡುವುದು ವಿರಳ. ಆದರೆ ಈಗ ಉದ್ಭವವಾಗಿರುವ ಸಾಂಕ್ರಾಮಿಕವನ್ನು ನಿಯಂತ್ರಣ ಮಾಡುವ ದೃಷ್ಟಿ ಯಿಂದ ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಇಂಥ ಕಠಿನ ನಿರ್ಧಾರ ತೆಗೆದು ಕೊಳ್ಳಲೇಬೇಕಾಗಿದೆ. ನಾನು ಕೂಡ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂಬುದನ್ನು ನಂಬುತ್ತೇನೆ. ಆದರೆ ಇದು ಲಭ್ಯತೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಅಂದರೆ ಯಾವ ಜನತೆ ದೊಡ್ಡ ಗುಂಪಿನೊಂದಿಗೆ ಸೇರುತ್ತಾರೋ ಅಂದರೆ ಪ್ರಯಾಣಿಕರು, ಕಚೇರಿಗೆ ತೆರಳುವವರು ಮತ್ತು ಗುಂಪಾಗಿ ಸೇರುವಂಥವರಿಗೆ, ಕೆಳವರ್ಗದ ಸಾಮಾಜಿಕ- ಆರ್ಥಿಕ ವಸತಿ ಗೃಹಗಳಲ್ಲಿ ಇರುವಂಥವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಈ ರೀತಿ ಮಾಡಿದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಂದು ಗೇಮ್ ಚೇಂಜರ್ ಆಗಲಿದೆ. ಈ ಸಾಂಕ್ರಾಮಿಕ ರೋಗದಲ್ಲಿ “ಎಲ್ಲರೂ ಸುರಕ್ಷಿತವಾಗಿರುವವರೆಗೆ ಯಾರೂ ಸುರಕ್ಷಿತರಲ್ಲ’ ಎಂಬ ಹೇಳಿಕೆಗಿಂತ ಹೆಚ್ಚು ಸತ್ಯವಾದುದು ಯಾವುದೂ ಇರಲಾರದು ಮತ್ತು ಲಸಿಕೆಗೆ ಅರ್ಹರಾದ ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಲಸಿಕೆ ಹಾಕುವ ಮೂಲಕ ಮಾತ್ರ ಇದನ್ನು ಸಾಧಿಸಬಹುದಾಗಿದೆ.
ಡಾ| ಸುದರ್ಶನ್ ಬಲ್ಲಾಳ್
ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷರು