Advertisement

ಲಸಿಕೆಗಾಗಿ ಸಾರಿಗೆ ನೌಕರರ ನೂಕುನುಗ್ಗಲು

09:38 PM May 26, 2021 | Girisha |

ಮುದ್ದೇಬಿಹಾಳ: ಸರ್ಕಾರದ ನಿರ್ದೇಶನದಂತೆ ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಲಸಿಕೆ ಹಾಕುವ ಅಭಿಯಾನ ಸಂದರ್ಭ ಗದ್ದಲ ಹೆಚ್ಚಾಗಿ ನೂಕು ನುಗ್ಗಲು ಉಂಟಾಗಿದ್ದೂ ಅಲ್ಲದೆ ಲಸಿಕೆಗಾಗಿ ಕೆಲ ಸಿಬ್ಬಂದಿ ಘಟಕ ವ್ಯವಸ್ಥಾಪಕರೊಂದಿಗೆ ಜಟಾಪಟಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಸಾರಿಗೆ ಸಂಸ್ಥೆಯ ನೌಕರರಿಗೂ ಲಸಿಕೆಯನ್ನು ಆದ್ಯತೆ ಮೇರೆಗೆ ಹಾಕಬೇಕು ಎನ್ನುವ ಬೇಡಿಕೆ ಹಿನ್ನೆಲೆ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪ್ರಯತ್ನದ ಮೇರೆಗೆ ಸಾರಿಗೆ ನೌಕರರೆಲ್ಲರಿಗೂ ಆಯಾ ಘಟಕದಲ್ಲೇ ಕೋವಿಶೀಲ್ಡ್‌ನ ಮೊದಲ ಡೋಸ್‌ ಲಸಿಕೆ ಹಾಕಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಅದರಂತೆ ಮುದ್ದೇಬಿಹಾಳ ಘಟಕಕ್ಕೆ ಮೊದಲ ದಿನ 200 ಡೋಸ್‌ ಲಸಿಕೆಯನ್ನು ನಿಗದಿಪಡಿಸಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರನ್ನು ಘಟಕಕ್ಕೆ ಕಳಿಸಲಾಗಿತ್ತು. ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ಧಾವಂತದಲ್ಲಿ ಸಾರಿಗೆ ನೌಕರರು ಸಾಮಾಜಿಕ ಅಂತರ ಪಾಲನೆ ಮರೆತು ಏಕಾಏಕಿ ಲಸಿಕೆ ಸಿಬ್ಬಂದಿ ಮೇಲೆ ಮುಗಿಬಿದ್ದರು. ಕೆಲವರು ಸರದಿಯಲ್ಲಿ ನಿಂತಿದ್ದರೂ ಒಬ್ಬರಿಗೊಬ್ಬರು ಒತ್ತಿಕೊಂಡಂತೆ ನಿಂತು ಗುಂಪು ಹೆಚ್ಚಾಗಲು ಕಾರಣರಾಗಿದ್ದರು.

ಯಾರಿಗೂ ನಿಧಾನವಾಗಿ ಸರದಿಯಂತೆ ಲಸಿಕೆ ಹಾಕಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ತಾಳ್ಮೆ ಇದ್ದವರು ಸಹನೆಯಿಂದ ಇದ್ದರೂ ಅನೇಕರು ಅಂಥವರನ್ನು ಹಿಂದೆ ಸರಿಸಿ ತಾವು ಮುಂದೆ ನುಗ್ಗಿ ಲಸಿಕೆಗೆ ಮುಗಿಬಿದ್ದಿದ್ದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ವಿಷಯ ತಿಳಿದು ಘಟಕ ವ್ಯವಸ್ಥಾಪಕ ರಾವುಸಾಬ್‌ ಹೊನಸೂರೆ ಸ್ಥಳಕ್ಕೆ ಆಗಮಿಸಿ ನೌಕರರಿಗೆ ಸಾಮಾಜಿಕ ಅಂತರ ಪಾಲಿಸುವಂತೆ ತಿಳಿಹೇಳುವ ಪ್ರಯತ್ನ ವ್ಯರ್ಥವಾಯಿತು. ಘಟಕದಲ್ಲಿ ಕೆಲಸ ಮಾಡುವ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಮನವರಿಕೆ ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ಘಟಕದ ನೌಕರರೊಂದಿಗೆ ಬೇರೆ ಘಟಕದಲ್ಲಿ ಕೆಲಸ ಮಾಡುವ ಸ್ಥಳೀಯರು ಸೇರಿಕೊಂಡಿದ್ದನ್ನು ಗುರುತಿಸಿ ಬುದ್ಧಿವಾದ ಹೇಳಲು ಮುಂದಾದರೂ ಇವರ ಮಾತನ್ನು ಕೇಳುವ ಸ್ಥಿತಿ ಅಲ್ಲಿದ್ದವರಲ್ಲಿ ಕಂಡು ಬರಲಿಲ್ಲ.

ಜಟಾಪಟಿ: ಸ್ಥಳೀಯ ಘಟಕದಲ್ಲಿ ಕೆಲಸ ಮಾಡುವವರು ಬೇರೆ ಘಟಕದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ನೀವ್ಯಾಕೆ ಇಲ್ಲಿ ಬಂದೀರಿ. ನಿಮ್ಮ ಘಟಕಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ. ನಮಗೆ ಅವಕಾಶ ಮಾಡಿಕೊಡಿ ಎಂದು ತಿಳಿಹೇಳಲು ಮುಂದಾದರು. ಆದರೆ ಇದನ್ನು ನಿರ್ಲಕ್ಷಿಸಿದ ಬೇರೆ ಘಟಕದಲ್ಲಿ ಕೆಲಸ ಮಾಡುವ ಸ್ಥಳೀಯರು ಈ ಬಗ್ಗೆ ಏನು ಆದೇಶ ಇದೆ ಎಂದು ಜಟಾಪಟಿ ನಡೆಸಲು ಮುಂದಾದರು. ಈ ವೇಳೆ ಸ್ಥಳೀಯ ಮತ್ತು ಬೇರೆ ಘಟಕಗಳ ನೌಕರರ ನಡುವೆ ವಾಗ್ವಾದ ನಡೆಯಿತು. ಮಧ್ಯೆ ಪ್ರವೇಶಿಸಿದ ಘಟಕ ವ್ಯವಸ್ಥಾಪಕರು ನಮ್ಮ ಘಟಕದವರಿಗೆ ಪ್ರಯೋಜನ ದೊರಕಿಸಿಕೊಡಲು 200 ಡೋಸ್‌ ಕೊಡಲಾಗಿದೆ. ಮೊದಲು ನಮ್ಮ ಘಟಕದ ನೌಕರರು ಲಸಿಕೆ ಹಾಕಿಸಿಕೊಳ್ಳಲಿ, ಉಳಿದರೆ ನಿಮಗೂ ಅವಕಾಶ ಕೊಡಲಾಗುತ್ತದೆ ಎಂದು ತಿಳಿಹೇಳಲು ಯತ್ನಿಸಿದರು.

Advertisement

ಆಗ ಬೇರೆ ಘಟಕದ ನೌಕರನೊಬ್ಬ ನಿಮಗೆ ಈ ರೀತಿ ಆದೇಶ ಇದ್ದರೆ ತೋರಿಸಿ ಎಂದು ಉದ್ಧಟತನದಿಂದ ನಡೆದುಕೊಂಡ. ಆತನಿಗೆ ಮೊಬೈಲ್‌ಲ್ಲಿ ಬಂದಿದ್ದ ಆದೇಶದ ಪ್ರತಿಯನ್ನು ತೋರಿಸಿದ ಮೇಲೆ ಮೆತ್ತಗಾದ. ಅಲ್ಲಿದ್ದವರು ಈತನನ್ನು ತರಾಟೆಗೆ ತೆಗೆದುಕೊಂಡರು. ಬೇರೆ ಘಟಕದವರು ಸ್ಥಳದಿಂದ ತೆರಳುವಂತೆ ಘಟಕ ವ್ಯವಸ್ಥಾಪಕರು ಸೂಚಿಸಿ ಪರಿಸ್ಥಿತಿ ನಿಯಂತ್ರಿಸಲು ಹೆಣಗಾಡಿದರು. ಸಿಬ್ಬಂದಿ ತರಾಟೆ: ನೂಕು ನುಗ್ಗಲು ಹೆಚ್ಚಾಗತೊಡಗಿದಾಗ ಸಹನೆ ಕಳೆದುಕೊಂಡ ಆರೋಗ್ಯ ಸಿಬ್ಬಂದಿಯೊಬ್ಬರು ಏನ್ರೀ ತಿಳಿದವರಾಗಿ ಹೀಗೆ ಮಾಡೋದಾ, ಸ್ವಲ್ಪಾನಾದ್ರೂ ತಿಳಿವಳಿಕೆ ಇಲ್ವಾ? ಹೀಗೇಕೆ ಮಾಡ್ತೀರಿ ಎಂದು ಗದ್ದಲ ಮಾಡುತ್ತಿದ್ದವರಿಗೆ ಸೌಮ್ಯವಾಗಿಯೇ ತರಾಟೆಗೆ ತೆಗೆದುಕೊಂಡರು. ಅಂತೂ ಇಂತೂ ಹೆಣಗಾಡಿ ಒಟ್ಟು 236 ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next