ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಮುಂಚೂಣಿ ಕಾರ್ಯರ್ತರೊಂದಿಗೆ ಸರ್ಕಾರ ಸೂಚಿಸಿದ ಆದ್ಯತಾ ವಲಯ ಮತ್ತು ಗುಂಪುಗಳಿಗೆ ಕೊರೊನಾ ಲಸಿಕೆ ನೀಡಲು ಶುರು ಮಾಡಲಾಗಿದೆ. ಕೆಲವು ಕಡೆ ಕಾಮಗಾರಿ ಸ್ಥಳದಲ್ಲೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ ಈಗಾಗಲೇ 2.30 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 57 ಸಾವಿರ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಲಸಿಕೆ ಕೊರತೆ ಇತ್ತು. ಆದರೆ, ಜಿಲ್ಲೆಯಲ್ಲಿ ಈಗ 20 ಸಾವಿರ ಡೋಸ್ ಕೋವಿಶೀಲ್ಡ್ ಮತ್ತು ಸುಮಾರು ಐದು ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಇದೆ ಎಂದು ಹೇಳಿದರು. ಕೋವಿಶೀಲ್ಡ್ ಎರಡನೇ ಡೋಸ್ ಪಡೆಯುವಿಕೆ ಅವಧಿಯನ್ನು 12 ವಾರಗಳಿಗೆ ವಿಸ್ತರಿಸಲಾಗಿದೆ. ಕೋವ್ಯಾಕ್ಸಿನ್ ಲಸಿಕೆಗೆ ನಾಲ್ಕು ವಾರಗಳ ಅಂತರವೇ ಮುಂದುವರಿದಿದೆ. ಹೀಗಾಗಿ ಸರ್ಕಾರದ ನಿರ್ದೇಶನದ ಪ್ರಕಾರದ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತಿದೆ.
ಮುಂಚೆಯೇ ಅನಗತ್ಯವಾಗಿ ಲಸಿಕಾ ಕೇಂದ್ರಕ್ಕೆ ಬಂದು ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ. ಎರಡನೇ ಲಸಿಕೆ ಸಂಬಂಧ ನಿಮ್ಮ ಮೊಬೈಲ್‌ಗೆ ಸಂದೇಶ ಬಂದ ನಂತರವೇ ಕೇಂದ್ರಗಳಿಗೆ ಬನ್ನಿ ಎಂದು ಮನವಿ ಮಾಡಿದರು. ನೋಡಲ್ ಅಧಿಕಾರಿಗಳ ನೇಮಕ: ಮುಂಚೂಣಿ ಕಾರ್ಯರ್ತರೊಂದಿಗೆ ಆದ್ಯತಾ ಗುಂಪುಗಳಿಗೂ ಲಸಿಕೆ ನೀಡಲು ಸರ್ಕಾರ ಮಾರ್ಗಸೂಚಿ ನೀಡಿದೆ. ಅಂಗವಿಕಲರು, ಕೈದಿಗಳು, ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಕೆಲಸ ಮಾಡುವರು, ಕ್ಯಾಬ್ ಚಾಲಕರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು, ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ನೀರು ಸರಬರಾಜು ಮತ್ತು ವಿದ್ಯುತ್ ಪೂರೈಕೆ ಕಾರ್ಮಿಕರಿಗೆ ಆದ್ಯತೆ ಮೇಲೆ ಲಸಿಕೆ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇವರಿಗೆ ಲಸಿಕೆ ನೀಡಲು ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೇ, ಅವರು ಕಾಮಗಾರಿ ಸ್ಥಳದಲ್ಲೂ ಲಸಿಕೆ ನೀಡಲಾಗುವುದು. ಇದಕ್ಕಾಗಿ ಆಯಾ ವಲಯವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಮುಂದೆ ಅಧಿಕ ಲಸಿಕೆ ಲಭ್ಯವಾದಲ್ಲಿ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೂ ಲಸಿಕೆ ಕೊಡಲಾಗುವುದು ಎಂದರು. ಗ್ರಾಮೀಣದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಹೋಂ ಐಸೋಲೇಷನ್‌ದಲ್ಲಿ ಇದ್ದವನ್ನು ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳಿದರು.