Advertisement

ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ

07:53 PM Oct 11, 2019 | mahesh |

ಬೆಳ್ತಂಗಡಿ: ಕ್ಷೀರ ಕ್ಷೇತ್ರದ ಕ್ರಾಂತಿಯಲ್ಲಿ ದೇಶದಲ್ಲೇ ಕರ್ನಾಟಕ ಅಗ್ರಗಣ್ಯ ಸ್ಥಾನವನ್ನು ಹೊಂದಿದ್ದು, ಅದನ್ನು ಮತ್ತಷ್ಟು ಕಾಪಿಡುವ ಉದ್ದೇಶದಿಂದ ಜಾನುವಾರು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಶುಸಂಗೋಪಣೆ ಇಲಾಖೆ ಹಾಗೂ ಕೆಎಂಎಫ್‌ ಅಧೀನದಲ್ಲಿ ರಾಜ್ಯದೆಲ್ಲೆಡೆ ಕಾಲುಬಾಯಿಕೆ ಲಸಿಕೆ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ.

Advertisement

ರಾಜ್ಯದಲ್ಲಿ ರೋಗ ಸಂಪೂರ್ಣ ನಿರ್ಮೂಲನೆಯೆಡೆಗೆ ಇಲಾಖೆ ಹಾಗೂ ಸಿಬಂದಿ ಶ್ರಮ ಉತ್ತಮವಾಗಿದ್ದು, ಎಲ್ಲೆಡೆ ಜನ ಜಾಗೃತಿ ಮೂಡಿರುವುದರಿಂದ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ರೋಗ ಲಕ್ಷಣ ಪ್ರಮಾಣ ಸಂಪೂರ್ಣ ಸುಧಾರಣೆ ಕಂಡಿದೆ.

ವರ್ಷದಲ್ಲಿ ಎರಡು ಬಾರಿ ಲಸಿಕೆ
ಕಳೆದ ಎಂಟು ವರ್ಷಗಳಿಂದ ವರ್ಷದಲ್ಲಿ 2 ಬಾರಿ (ಆರು ತಿಂಗಳಿಗೊಮ್ಮೆ) ಲಸಿಕೆ ನೀಡುತ್ತಾ ಬರಲಾಗಿದೆ. ಈ ಬಾರಿ 16ನೇ ಸುತ್ತಿನ ಲಸಿಕೆ ಕಾರ್ಯಕ್ರಮವಾಗಿದ್ದು, 2018ರ ಜಾನುವಾರು ಗಣತಿಯಂತೆ ಈಬಾರಿ ಸುಮಾರು 68,161 ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ನಡೆಸಲಾಗುವ ಜಾನುವಾರು ಗಣತಿ ಆಧಾರದಲ್ಲಿ ಕುರಿ ಮೇಕೆ ಹೊರತುಪಡಿಸಿ ದನ, ಹಂದಿ, ಎಮ್ಮೆ (ಸೀಳು ಗೊರಸಿನ) 3 ತಿಂಗಳಿಂದ ಮೇಲ್ಪಟ್ಟ ಜಾನುವಾರುಗಳಿಗೆ ಚುಚ್ಚು ಮದ್ದು ಕಡ್ಡಾಯಗೊಳಿಸಲಾಗಿದೆ.

5 ತಂಡಗಳ ರಚನೆ
ತಾಲೂಕು ಪಶುಸಂಗೋಪನಾ ಇಲಾಖೆ ಮತ್ತು ಕೆ.ಎಂ.ಎಫ್‌. ಸಿಬಂದಿ ಜತೆಗೂಡಿ ಅಭಿಯಾನ 20 ದಿನಗಳೊಳಗಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಒಂದು ಗ್ರಾಮದಲ್ಲಿ 60ರಿಂದ 70 ಜಾನುವಾರುಗಳಂತೆ 84 ಗ್ರಾಮಗಳ ಪೈಕಿ ಗ್ರಾಮಕ್ಕೊಂದರಂತೆ ಬ್ಲಾಕ್‌ ರಚಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ 5ರಿಂದ 7ಮಂದಿ ಸಿಬಂದಿ ನೇಮಿಸಲಾಗಿದ್ದು, ತಂಡದಲ್ಲಿ ಓರ್ವ ವ್ಯಾಕ್ಸಿನೇಟರ್‌ ಮತ್ತು ಕೃತಕ ಗರ್ಭಧಾರಣೆ ಕಾರ್ಯಕರ್ತ ಸೇರಿದಂತೆ ಸಿಬಂದಿ ನೇಮಿಸಲಾಗಿದೆ. ತಾಲೂಕಲ್ಲಿ ಒಟ್ಟು 68,161 ಜಾನುವಾರುಗಳಿದ್ದು ಪ್ರತಿ ನಿತ್ಯ ಸುಮಾರು 3,000 ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ಮೂಲಕ ಎಲ್ಲಾ ರಾಸುಗಳಿಗೂ ಚುಚ್ಚುಮದ್ದು ನೀಡುವ ಗುರಿ ಹೊಂದಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಮಂದಿ ಸಹಕಾರ ಅವಶ್ಯ
ಸಿಬಂದಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ಮನೆ ಭೇಟಿ ಕೈಗೊಳ್ಳುವರು. ಆಯಾಯ ತಾಲೂಕಿನ ಪ್ರತಿನಿತ್ಯದ ವರದಿ ಜಿಲ್ಲಾ ಕೇಂದ್ರದ ಸುಪರ್ಧಿಗೆ ತಲುಪಲಿದೆ. ಬಳಿಕ ಜಿಲ್ಲಾ ಕೇಂದ್ರವು ಜಿಲ್ಲೆಯ ಪ್ರತಿನಿತ್ಯದ ವರದಿಯನ್ನು ಆಯಾದಿನವೇ ರಾಜ್ಯ ಪಶುಸಂಗೋಪನಾ ಇಲಾಖೆಗೆ ಒಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಮನೆ ಮಂದಿ ಜವಾಬ್ದಾರಿಯುತವಾಗಿ ಸಿಬಂದಿಗೆ ಸಹಕಾರ ನೀಡುವ ಮೂಲಕ ರೋಗ ನಿಯಂತ್ರಣ ತರುವಲ್ಲಿ ಮಹತ್ತರ ಪಾತ್ರ ವಹಿಸಲಾಬೇಕಿದೆ.

Advertisement

ಸ್ವಚ್ಛತೆಯೇ ಮಂತ್ರ
ಕಾಲುಬಾಯಿ ರೋಗ ಬಯಲು ಸೀಮೆಯಲ್ಲಿ ಹೆಚ್ಚಾಗಿ ಉಲ್ಬಣಗೊಳ್ಳುತ್ತದೆ. ಪಿಕಾರ್ನಾ (picornavirus) ಎಂಬ ವೈರಸ್‌ ಸೋಂಕಿನಿಂದ ಕಾಲು ಮತ್ತು ಬಾಯಿಗಳಲ್ಲಿ ರೋಗದ ಲಕ್ಷಣ ಗೋಚರಿಸಲ್ಪಡುತ್ತದೆ. ದ.ಕ.ಜಿಲ್ಲೆಯಲ್ಲಿ ವಿರಳವಾಗುತ್ತಿದ್ದು, ಸ್ವಚ್ಛತೆ ಕಾಪಾಡಿದಲ್ಲಿ ರೋಗ ತಡೆಗಟ್ಟಬಹುದು. ರೋಗ ಗುಣಲಕ್ಷಣ ಕಂಡುಬಂದಲ್ಲಿ ಹತ್ತಿರದ ಪಶು ಇಲಾಖೆ ಕಚೇರಿ ಸಂಪರ್ಕಿಸಿದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿರುತ್ತದೆ.

ಅಭಿಯಾನ ಪರಿಣಾಮಕಾರಿಯಾಗುವಲ್ಲಿ ಮನೆಮಂದಿ ಸಹಕಾರ ಅತ್ಯವಶ್ಯ. ಚುಚ್ಚುಮದ್ದು ನೀಡಲು ಬರುವ ಸಿಬಂದಿಗಳಿಗೆ ಬೇಕಾಗುವ ಅಗತ್ಯತೆ ಮನಗಂಡು ಸಹಕರಿಸಬೇಕು. ಜಾನುವಾರುಗಳನ್ನು ಈ ಸಮಯದಲ್ಲಿ ತೊಳೆದು ಸ್ವತ್ಛವಾಗಿರಿಸಿ ಹಟ್ಟಿಯಲ್ಲೇ ಇರಿಸಿಕೊಳ್ಳಬೇಕು.
ಡಾ| ರವಿಕುಮಾರ್‌, ಮುಖ್ಯ ಪಶುವೈದ್ಯಾಧಿಕಾರಿ ಬೆಳ್ತಂಗಡಿ

ಕಾಲುಬಾಯಿ ರೋಗ ನಿಯಂತ್ರಣ ದೃಷ್ಟಿಯಿಂದ ಸರಕಾರವು ಉಚಿತವಾಗಿ ವ್ಯಾಕ್ಸಿನ್‌ ಪೂರೈಸುತ್ತಿದೆ. ಇದನ್ನು ಸದ್ಬಳಿಸಿಕೊಂಡು ಮಾರುಕಟ್ಟೆಯಲ್ಲಿ ಹೈನುಗಾರಿಕೆ ಉತ್ಪನ್ನ ಗುಣಮಟ್ಟ ವೃದ್ಧಿಸುವಲ್ಲಿ ಅಭಿಯಾನ ಯಶಸ್ವಿಗೊಳಿಸಲಾಗವುದು.
ಡಾ| ರತ್ನಾಕರ್‌ ಮಲ್ಯ, ಸಹಾಯಕ ನಿರ್ದೇಶಕರು,

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next