ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಮಗುವಿಗೆ ಪೋಲಿಯೋà ಲಸಿಕೆ ಹಾಕುವ ಮೂಲಕ ಮೇಯರ್ ಗಂಗಾಂಭಿಕೆ ಬಿಬಿಎಂಪಿ ವ್ಯಾಪ್ತಿಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನೆರೆ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ದಾಖಲಾಗುತ್ತಿದ್ದು, ಮುಂಜಾಗ್ರತೆಗಾಗಿ ದೇಶದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಪೋಲಿಯೋ ಪ್ರಕರಣ ತಡೆಗಟ್ಟಲು ಎಚ್ಚರಿಕೆ ವಹಿಸಿ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಅಧಿಕಾರಿಗಳು ಲಸಿಕೆ ಹಾಕುತ್ತಿದ್ದಾರೆಂದರು.
ನಗರದಲ್ಲಿ ಮೊದಲ ಹಂತದ ಪಲ್ಸ್ ಪೋಲಿಯೋ ಅಭಿಯಾನಕ್ಕಾಗಿ 4,250 ಬೂತ್ ನಿರ್ಮಾಣ ಮಾಡಲಾಗಿದ್ದು, 8,500ಕ್ಕೂ ಅಧಿಕ ತಂಡಗಳಿಂದ ಲಸಿಕೆ ಹಾಕಲಾಯಿತು. ಇನ್ನು 260 ಸಂಚಾರಿ ಮೊಬೈಲ್ ವ್ಯಾನ್‌ಗಳಿಂದ ಕಾರ್ಯಕರ್ತರು ಕೊಳಚೆ ಪ್ರದೇಶಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಿದರು. ಅಲ್ಲದೇ, ನಗರದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಲಸಿಕೆ ಹಾಕಲಾಯಿತು.
ಉಡುಪಿ ನಂ.1, ಕಲಬುರಗಿ ಕೊನೆ: ರಾಜ್ಯದ ಒಟ್ಟು ಮಕ್ಕಳಲ್ಲಿ ಶೇ.89.78 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.97.27 ಮಕ್ಕಳಿಗೆ ಅತಿ ಹೆಚ್ಚು ಲಸಿಕೆ ಹಾಕಿದ್ದರೆ. ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.81.84 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಪ್ರಸಕ್ತ ವರ್ಷ 5 ವರ್ಷದೊಳಗಿನ 64,85,980 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ.
ಮೊದಲ ದಿನವೇ 5,82,3345 (ಶೇ.89.78) ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,55,958 (ಶೇ.81.87), ಬೆಂಗಳೂರು ನಗರದಲ್ಲಿ 5,87,908 (ಶೇ.88.04,) ಬೆಂಗಳೂರು ಗ್ರಾಮಾಂತರ 1,00,126 (ಶೇ.97) ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಲಸಿಕಾ ಕಾರ್ಯಕ್ರಮ ಮುಂದುವರೆಯಲಿದೆ. ಅಲ್ಲದೇ, ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ 5 ವರ್ಷದೊಳಗಿನ ಮಕ್ಕಳಿಗೆ ಈ ವರ್ಷವೂ ಲಸಿಕೆ ಹಾಕಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.