ವರದಿ: ದತ್ತು ಕಮ್ಮಾರ
ಕೊಪ್ಪಳ:ಜಿಲ್ಲೆಯಲ್ಲಿಕೊರೊನಾಸೋಂಕುನಿಯಂತ್ರಣಕ್ಕೆ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಇಷ್ಟಾದರೂ ಜನರಲ್ಲಿ ಲಸಿಕೆ ಪಡೆಯಬೇಕೆನ್ನುವ ಜಾಗೃತಿ ಬರುತ್ತಿಲ್ಲ. ಎಲ್ಲರಿಗೂ ಲಸಿಕೆ ಹಾಕಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತ ಆದ್ಯತಾ ವಲಯದಲ್ಲಿನ ಜನರಿಗೆ ಆ. 27ರಂದು ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕಾ ಮೇಳ ಹಮ್ಮಿಕೊಂಡಿದೆ.
ಕೊರೊನಾ ಸೋಂಕು ಜಗತ್ತಿನಲ್ಲಿ ಕಾಣಿಸಿಕೊಂಡು ಎರಡು ವರ್ಷ ಕಳೆದಿವೆ. ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭಯವಿದೆ. ಆದರೆ ನಮ್ಮ ಆರೋಗ್ಯವನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಜಾಗೃತಿ ಜನರಲ್ಲಿ ಇನ್ನೂ ಬರುತ್ತಿಲ್ಲ. ಕೆಲವರು ಮಾಸ್ಕ್ ಧರಿಸಿದರೆ, ಇನ್ನು ಕೆಲವರು ಹಾಗೇ ಎಲ್ಲೆಂದರಲ್ಲಿ ಸುತ್ತಾಡಿ ಆರೋಗ್ಯವಂತರಿಗೂ ಸೋಂಕು ತಗುಲಿಸುತ್ತಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬೇಕು ಎಂದರೆ ಪ್ರತಿಯೊಬ್ಬ ವ್ಯಕ್ತಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇವೆ.
ಇಷ್ಟಾದರೂ ಜನರಲ್ಲಿ ಲಸಿಕೆ ಹಾಕಿಸಿಕೊಂಡರೆ ನಮಗೆ ಏನಾಗುತ್ತೋ ಏನೋ? ಎನ್ನುವ ಭಯದಿಂದಲೇ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಜಿಲ್ಲಾಡಳಿತವು ವಿವಿಧ ಹಂತಗಳಲ್ಲಿಯೂ ಜನರಿಗೆ ಲಸಿಕೆ ಹಾಕಿಸಿ ಜಾಗೃತಿ ಮೂಡಿಸುತ್ತಿದೆ. ಇಷ್ಟಾದರೂ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ವೀಡಿಯೋಗಳನ್ನು ನೋಡಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವಂತಹ ಸಂದರ್ಭಗಳೂ ಜಿಲ್ಲೆಯಲ್ಲಿ ನಡೆದಿವೆ. ಇದೆಲ್ಲವನ್ನು ಗಮನಿಸಿರುವ ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಜಿಲ್ಲಾ, ತಾಲೂಕು, ಸಮುದಾಯ, ಪ್ರಾಥಮಿಕ ಹಾಗೂ ಉಪ ಕೇಂದ್ರಗಳಲ್ಲಿ ಲಸಿಕಾ ಕೋವಿಡ್ ಮೇಳ ಹಮ್ಮಿಕೊಂಡಿದೆ. ಇದೇ ಆ. 27ರಂದು ಜಿಲ್ಲಾದ್ಯಂತ ಲಸಿಕಾ ಮೇಳ ನಡೆಯಲಿದ್ದು, ಜನರು ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.
ಯಾರಿಗೆಲ್ಲಾ ಲಸಿಕೆ ಹಾಕಲಾಗುತ್ತೆ? ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 1ನೇ ಡೋಸ್ ಪಡೆಯದವರಿಗೆ 1ನೇ ಡೋಸ್ ಲಸಿಕೆ ಹಾಕಲಾಗುವುದು. ಇನ್ನೂ 1ನೇ ಡೋಸ್ ಪಡೆದ ಎಲ್ಲ ಅರ್ಹರಿಗೂ 2ನೇ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಲಸಿಕೆ ಪಡೆಯುವ ವ್ಯಕ್ತಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ತೆಗೆದುಕೊಂಡು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಸಮೀಪದ ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ. ಲಸಿಕೆ ಪಡೆಯಿರಿ: ಕೊರೊನಾ ಸೋಂಕು ನಿಯಂತ್ರಣವಾಗಬೇಕೆಂದರೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನು ಲಸಿಕೆ ಪಡೆಯಬೇಕಿದೆ. ಸೋಂಕು ನಿಯಂತ್ರಣಕ್ಕೆ ಲಸಿಕೆಯೊಂದೇ ಮಾರ್ಗ ಎನ್ನುವುದನ್ನು ಅರಿಯಬೇಕಿದೆ. ಲಸಿಕೆ ಬಗ್ಗೆ ಅಸಡ್ಯ ಭಾವನೆ ತಾಳದೇ, ನಿರ್ಲಕ್ಷ್ಯ ತಾಳದೇ ಸ್ವಇಚ್ಛೆಯಿಂದ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕಿದೆ. ಜಿಲ್ಲಾಡಳಿತವು 18 ವರ್ಷ ಮೇಲ್ಪಟ್ಟ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.