Advertisement

ವ್ಯಾಕ್ಸಿನೇಶನ್‌; ಗುರಿ ತಲುಪಲು ಹರಸಾಹಸ!

02:06 PM Oct 28, 2021 | Team Udayavani |

ಮಸ್ಕಿ: ಕೋವಿಡ್‌-19 ಮೊದಲ ಮತ್ತು ಎರಡನೇ ಅಲೆಯಲ್ಲಿ ಉಂಟಾದ ಸಾವು-ನೋವು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನೇಶನ್‌ ಅಭಿಯಾನ ಆರಂಭವಾಗಿದೆ. ಆದರೆ ಮಸ್ಕಿ ತಾಲೂಕಿನಲ್ಲಿ ಎಲ್ಲರನ್ನೂ ವ್ಯಾಕ್ಸಿನ್‌ ವ್ಯಾಪ್ತಿಗೆ ತರಲು ಹರಸಾಹಸ ನಡೆದಿದೆ!.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ತಾಲೂಕು ಆಡಳಿತವೇ ಖುದ್ದು ಮನೆ-ಮನೆಗೆ ತೆರಳಿ ಲಸಿಕೆ ಕುರಿತು ಅಭಿಯಾನ ನಡೆಸಿದೆ. ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಸಿಬ್ಬಂದಿ ಸೇರಿ ಸ್ವತಃ ಎಸಿ, ತಹಶೀಲ್ದಾರ್‌ಗಳೇ ಬೀದಿಗಿಳಿದು ಆಂದೋಲನ ನಡೆಸಿದ್ದಾರೆ.

ಮನೆ- ಮನೆಗೂ ತೆರಳಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಕರೆ ನೀಡುತ್ತಿದ್ದಾರೆ. ಆದರೂ ಕೋವಿಡ್‌ ಲಸಿಕೆ ಕುರಿತು ಜನರಲ್ಲಿ ಇನ್ನೂ ಜಾಗೃತಿ ಬಾರದಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಪ್ರಸಂಗಗಳು ನಡೆಯುತ್ತಿವೆ.

ಬಾಕಿ ಬೆಟ್ಟದಷ್ಟು

ತಾಲೂಕಿನಲ್ಲಿ ಕೋವಿಡ್‌ ಕುರಿತಾಗಿ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಹಾಕಿದ್ದಕ್ಕಿಂತ ಹೆಚ್ಚಾಗಿ ಇನ್ನು ಹಾಕಿಸಿಕೊಳ್ಳುವವರ ಸಂಖ್ಯೆಯೇ ಬೆಟ್ಟದಷ್ಟಿದೆ. ತಾಲೂಕು ವ್ಯಾಪ್ತಿಯ ತೋರಣದಿನ್ನಿ, ಸಂತೆಕಲ್ಲೂರು, ಬಳಗಾನೂರು, ಮಸ್ಕಿ, ಮೆದಕಿನಾಳ, ಪಾಮನಕಲ್ಲೂರು ಹೋಬಳಿ ಒಳಗೊಂಡಿದ್ದು, ಒಟ್ಟು 1,96,550 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ ಸದ್ಯ ಇದುವರೆಗೆ ಮೊದಲ ಡೋಸ್‌ ಪಡೆದುಕೊಂಡ ಜನರ ಸಂಖ್ಯೆ 82,422ರ ಗಡಿ ದಾಟಿದೆ. ಎರಡನೆ ಡೋಸ್‌ 31,396 ಜನರು ಪಡೆದಿದ್ದಾರೆ. ಆದರೆ ಒಟ್ಟು ವ್ಯಾಕ್ಸಿನೇಷನ್‌ ಗುರಿ ಪೈಕಿ ಮೊದಲ ಡೋಸ್‌ ಶೇ.67.83, ಎರಡನೇ ಡೋಸ್‌ ಶೇ.25.83 ಜನರನ್ನು ಲಸಿಕೆ ವ್ಯಾಪ್ತಿಗೆ ತರಲಾಗಿದೆ. ಇನ್ನುಳಿದ ಜನರಿಗೆ ಲಸಿಕೆ ನೀಡಲು ತಾಲೂಕು ಆಡಳಿತ ಹೈರಾಣಾಗಿದೆ.

Advertisement

ಇದನ್ನೂ ಓದಿ: ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಪ್ರಭಾರಿ ಆಹಾರ ಸಂರಕ್ಷಣಾಧಿಕಾರಿ

ಸಂವಹನ ಕೊರತೆ

ವ್ಯಾಕ್ಸಿನೇಶನ್‌ ಪ್ರಕ್ರಿಯೆಯಲ್ಲಿ ಕೆಲವು ಇಲಾಖೆ ಆಸಕ್ತಿ ತೋರಿ ಆ್ಯಕ್ಟಿವ್‌ ಆಗಿ ಪಾಲ್ಗೊಳ್ಳುತ್ತಿದ್ದರೆ, ಇನ್ನು ಕೆಲ ಇಲಾಖೆಗಳು ಬೇಕಾಬಿಟ್ಟಿ ತೊಡಗಿಸಿಕೊಳ್ಳುವಿಕೆ ಕಂಡು ಬರುತ್ತಿದೆ. ಇದೇ ಕಾರಣಕ್ಕಾಗಿಯೇ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವ ಅಂಶ ಸ್ವತಃ ಅಧಿಕಾರಿಗಳ ವಲಯದಲ್ಲಿಯೇ ಕೇಳಿ ಬರುತ್ತಿದೆ. ಇಲಾಖೆಗಳ ನಡುವಿನ ಸಂವಹನ ಕೊರತೆ ಎದ್ದು ಕಾಣುತ್ತಿದ್ದು, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಇಲಾಖೆ ಸರಿಯಾಗಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಆರೋಪಗಳಿವೆ. ಕೇವಲ ಆರೋಗ್ಯ ಇಲಾಖೆ ನರ್ಸ್‌ಗಳು, ಆಶಾ- ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಇದರಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದಾರೆ. ಸ್ಥಳೀಯ ಸಂಸ್ಥೆ (ಪುರಸಭೆ, ಪಪಂ, ಗ್ರಾಪಂ) ಅಧಿಕಾರಿಗಳು, ಮೇಲುಸ್ತುವಾರಿ ಹೊತ್ತವರ ಗೈರು ಎದ್ದು ತೋರುತ್ತಿದೆ. ಎಸಿ, ತಹಶೀಲ್ದಾರ್‌ ದರ್ಜೆಯ ಅಧಿಕಾರಿಗಳು ಫಿಲ್ಡ್‌ಗೆ ಇಳಿದಾಗ ಮಾತ್ರ ವೇಗ ಪಡೆಯುವ ಲಸಿಕೆ ಅಭಿಯಾನ ಬಳಿಕ ಪುನಃ ವೇಗ ತಗ್ಗಿಸಿಕೊಳ್ಳಲಿದೆ. ಇದೇ ಕಾರಣಕ್ಕೆ ಸಂಪೂರ್ಣ ಗುರಿ ಮುಟ್ಟುವಲ್ಲಿ ವಿಳಂಬವಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಮಸ್ಕಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ-ಮನೆಗೂ ತೆರಳಿ ಲಸಿಕೆ ಪಡೆಯಲು ಮನವಿ ಮಾಡುತ್ತಿದ್ದೇವೆ. ಆದರೆ ಜನರಲ್ಲಿ ಜಾಗೃತಿ ಕೊರತೆ ಕಾರಣ ಸಂಪೂರ್ಣ ಲಸಿಕೆ ಹಾಕಲು ವಿಳಂಬವಾಗುತ್ತಿದೆ. ಸಾರ್ವಜನಿಕರೂ ಸಹ ಸ್ಪಂದಿಸುತ್ತಿದ್ದಾರೆ. ಕ್ರಮೇಣವಾಗಿ ಸಂಪೂರ್ಣ ಗುರಿ ಈಡೇರುವ ಭರವಸೆ ಇದೆ. -ಕವಿತಾ. ಆರ್‌, ತಹಶೀಲ್ದಾರ್‌

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next