Advertisement

ಲಸಿಕೆಗೆ ಹಿರಿಯರೇ ಮುಂದು : 10 ಲಕ್ಷ ದಾಟಿದ ಲಸಿಕೆ ಸ್ವೀಕರಿಸಿದವರ ಸಂಖ್ಯೆ

02:55 AM Mar 14, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಹತ್ತು ಲಕ್ಷ ತಲುಪಿದೆ. ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರಿಗಿಂತ ಹಿರಿಯ ನಾಗರಿಕರೇ ಮುಂದಿರುವುದು ಕಂಡುಬಂದಿದೆ.

Advertisement

ರಾಜ್ಯದಲ್ಲಿ ಲಸಿಕೆ ಅಭಿಯಾನ 2.0 ಆರಂಭವಾದ ಮಾ. 1ರಿಂದ ಇಲ್ಲಿಯವರೆಗೆ ನಿತ್ಯ ಸರಾಸರಿ 25 ಸಾವಿರದಂತೆ ಈ ವರೆಗೆ 3.17 ಲಕ್ಷ ಮಂದಿ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಎರಡನೇ ಅಲೆ ಭೀತಿ ಹೆಚ್ಚಳವಾದ ಕಳೆದ ಆರು ದಿನಗಳಲ್ಲಿ ನಿತ್ಯ 43 ಸಾವಿರದಂತೆ 2.2 ಲಕ್ಷ ಹಿರಿಯರು ಲಸಿಕೆ ಸ್ವೀಕರಿಸಿದ್ದಾರೆ.

ಕೊರೊನಾ ಸೇನಾನಿಗಳಿಗಿಂತ ಹಿರಿಯ ನಾಗರಿಕರಲ್ಲಿ ಕೊರೊನಾ ಜಾಗೃತಿ ಹೆಚ್ಚಿದೆಯೇ,  ಈ ಉತ್ಸಾಹದ ಹಿಂದಿರುವ ಕಾರಣ ಆತಂಕವೇ- ಕೊರೊನಾ ಲಸಿಕೆಗೆ ಹಿರಿಯ ನಾಗರಿಕರಿಂದ ಸಿಗುತ್ತಿರುವ ಸ್ಪಂದನೆಯಿಂದ ಇಂತಹ ಹಲವು ಪ್ರಶ್ನೆಗಳು ಮೂಡಿವೆ.
ಕೊರೊನಾ ಲಸಿಕೆ ಅಭಿಯಾನ 1.0ದಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಅಭಿಯಾನ 2.0ರಲ್ಲಿ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆಯುಳ್ಳವರಿಗೆ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಕಾರ್ಯರ್ತರಿಗೆ ಲಸಿಕೆ ಆರಂಭವಾದ ಮೊದಲ ಎರಡು ವಾರ ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ಆರಂಭವಾದ ಮೊದಲ ಎರಡು ವಾರಗಳನ್ನು ಗಮನಿಸಿದರೆ ಹಿರಿಯರು ಲಸಿಕೆ ಪಡೆಯುವಲ್ಲಿ ಮುಂದಿರುವುದು ಕಂಡುಬಂದಿದೆ.

ಮೊದಲ ಎರಡು ವಾರಗಳ ಅಂಕಿಅಂಶಗಳನ್ನು ಹೋಲಿಸಿದರೆ ಈ ಅವಧಿಯಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಿಗಿಂತ ಹಿರಿಯ ನಾಗರಿಕರ ಸಂಖ್ಯೆ 36 ಸಾವಿರದಷ್ಟು ಹೆಚ್ಚು ಇದೆ. 56 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ನಿತ್ಯ ಸರಾಸರಿ 8,400 ಮಂದಿಯಂತೆ ಲಸಿಕೆ ಪಡೆದಿದ್ದರೆ ಅಭಿಯಾನ 2.0 ಆರಂಭವಾದ 13 ದಿನಗಳಲ್ಲಿ ಹಿರಿಯ ನಾಗರಿಕರು ನಿತ್ಯ ಸರಾಸರಿ 25 ಸಾವಿರ ಮಂದಿಯಂತೆ ಲಸಿಕೆ ಹಾಕಿಸಿಕೊಂಡಿದ್ದಾರೆ.

ಮೊಬೈಲ್‌ ಬೇಕಿಲ್ಲ
ಮೊಬೈಲ್‌ ಇಲ್ಲದ ಹಿರಿಯರು ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಆಧಾರ್‌ ಹೊರತು ಪಡಿಸಿ ಇತರ ಗುರುತಿನ ಚೀಟಿ ತೋರಿಸಿ ಸ್ಥಳದಲ್ಲಿಯೇ ನೋಂದಣಿ ಮಾಡಿ ಲಸಿಕೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next