ದೇವನಹಳ್ಳಿ: ಕೋವಿಡ್ ನಿಯಂತ್ರಣಕ್ಕೆ ನಡೆಯುತ್ತಿರುವ ಉಚಿತ ಲಸಿಕಾ ಅಭಿಯಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದ್ದು, ಅರ್ಹ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವ ಮೂಲಕ ಸುರಕ್ಷಿತವಾಗಿರಬೇಕೆಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ(ಕೋವಿಡ್) ಸಚಿವ ಎನ್.ನಾಗರಾಜು(ಎಂಟಿಬಿ) ತಿಳಿಸಿದರು.
ಪಟ್ಟಣದ ಬಿಬಿ ರಸ್ತೆಯ ಲಯನ್ಸ್ ಸಂಸ್ಥೆ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುನ್ನೆಚ್ಚರಿಕೆ ಪಾಲಿಸಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9419 ಫಲಾನುಭವಿಗಳಿಗೆ ಕೋವಿಡ್ ಮುನ್ನೆ ಚ್ಚರಿಕೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಭಾರತ ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡು ತ್ತಿದ್ದು, ದೇಶದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ಕೋ ಮಾರ್ಬಿಡಿಟಿ ಹೊಂದಿರುವ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಕ್ರಮ ಕೈಗೊಳ್ಳಿ: 3ನೇ ಅಲೆ ಕೋವಿಡ್ ಈಗಾಗಲೇ ಪ್ರಾರಂಭವಾಗಿದೆ. ರಾಜ್ಯದಲ್ಲಿ ಬಹಳ ವೇಗವಾಗಿ ವಿಸ್ತರಿಸುತ್ತಿದೆ. ಜಿಲ್ಲೆಯಲ್ಲಿ 300ಪ್ರಕರಣ ಪತ್ತೆಯಾಗಿವೆ. ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ತಾಲೂಕುವಾರು ಸರ್ವೆ ಮಾಡುವುದರ ಮೂಲಕ ಶ್ರಮಿಸುತ್ತಿದ್ದಾರೆ.ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಒಟ್ಟಾಗಿ ಕ್ರಮ ತೆಗೆದುಕೊಂಡು ಹೋಗುತ್ತಿದೆ ಎಂದು ಹೇಳಿದರು. ಇಡೀ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಕಾರ್ಯ ವೇಗವಾಗಿ ಸಾಗಿದ್ದು, ಈಗಾಗಲೇ ಸುಮಾರು 150 ಕೋಟಿ ಡೋಸ್ ಲಸಿಕೆ ನೀಡಿರುವುದು ಅಸಾಮಾನ್ಯ ಸಾಧನೆ. ಸಂಭಾವ್ಯ 3ನೇ ಅಲೆ ಹಾಗೂ ಓಮಿಕ್ರಾನ್ ವೈರಾಣು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಜಿಲ್ಲೆಯ ಜನತೆ ಸಹಕರಿಸಿದ್ದಾರೆ ಎಂದು ಹೇಳಿದರು.
ಮುನ್ನೆಚ್ಚರಿಕೆ ಡೋಸ್ ಕೂಡ ಮೊದಲ ಹಾಗೂ ಎರಡನೇ ಡೋಸ್ ಮಾದರಿಯಲ್ಲಿಯೇ ಇರುತ್ತದೆ. ಈಗಾಗಲೇ ಎರಡನೇ ಡೋಸ್ ತೆಗೆದುಕೊಂಡು ಸುಮಾರು ಒಂಬತ್ತು ತಿಂಗಳು ಕಳೆದಿರುವ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಈ ಲಸಿಕೆ ಪ್ರಾರಂಭಿಕವಾಗಿ ಸಿಗಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಶೇ.50 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಶೀಘ್ರವಾಗಿ ಈ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿಯನ್ನು ಅಧಿಕಾರಿಗಳು ಸಾಧಿಸಬೇಕು ಎಂದು ತಿಳಿಸಿದರು.
ಮಾಸ್ಕ್ ಮರೆಯದಿರಿ: ಶಾಸಕ ಎಲ್.ಎನ್.ನಾರಾಯಣ ಸ್ವಾಮಿ ಮಾತನಾಡಿ, ಯಾವುದೇ ಕಾರಣಕ್ಕೂ ಸಾರ್ವಜನಿಕರು ಉದಾಸೀನ ತೋರದೆ, ಸರ್ಕಾರ ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿ ಪಾಲಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸ ಬೇಕು. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡಿದೆ. ಅದರಂತೆಯೇ ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಸರ್ಕಾರ ಮುಂದಾಗಿದ್ದು, ಅರ್ಹರು ತಪ್ಪದೇ ಲಸಿಕೆ ಪಡೆದುಕೊಳ್ಳುವ ಮೂಲಕ ಸಹಕಾರ ನೀಡಬೇಕು. ಎರಡನೇ ಕೋವಿಡ್ ಲಸಿಕೆ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯ ಬೇಕಾಗುತ್ತದೆ. ತಾಲೂಕಿನಲ್ಲಿ 3400 ಜನಕ್ಕೆ ಬೂಸ್ಟರ್ ಡೋಸ್ ನೀಡಬೇಕಾಗುತ್ತದೆ. ಎಲ್ಲರೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಕುವುದನ್ನು ಮರೆಯಬಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ ಈ.ರವಿಕುಮಾರ್, ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಮುನಿಯಪ್ಪ, ಪುರಸಭಾ ಸದಸ್ಯರಾದ ಜಿ.ಎ.ರವೀಂದ್ರ, ನಾಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಮತ್ತಿತರರು ಇದ್ದರು.
ಮಾಹಿತಿ ನೀಡಲಾಗಿದೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಈಗಾಗಲೇ ಕೋವಿಡ್-19 ಲಸಿಕಾಕರಣವನ್ನು ಶೇ.95.8ರಷ್ಟು ಮೊದಲನೇ ಡೋಸ್, ಶೇ.85.7 ರಷ್ಟು 2ನೇ ಡೋಸ್ ಲಸಿಕಾಕರಣ ನಡೆಸಲಾಗಿದ್ದು, ಮೊದಲನೇ ಡೋಸ್ ಲಸಿಕೆ ಪಡೆದು 2ನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಲಸಿಕೆ ನೀಡಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಾರ್ ರೂಂ ಗಳ ಮೂಲಕ ಫಲಾನುಭವಿಗಳಿಗೆ ಲಸಿಕೆ ಪಡೆದುಕೊಳ್ಳಲು ಮಾಹಿತಿ ನೀಡಲಾಗಿದೆ ಎಂದು ಸಚಿವರಾದ ಎಂಟಿಬಿ ನಾಗರಾಜ್ ಹೇಳಿದರು.