ನವದೆಹಲಿ: ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರು ಮೂರು ತಿಂಗಳ ಬಳಿಕ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ ಎಂದು ಕೇಂದ್ರ ಸರ್ಕಾರ ಬುಧವಾರ(ಮೇ 19) ತಿಳಿಸಿದೆ.
ಇದನ್ನೂ ಓದಿ:ಶಿರ್ವ ಕೋಳಿ ಅಂಕಕ್ಕೆ ದಾಳಿ: ವಾಹನಗಳ ಸಹಿತ ಇಬ್ಬರ ವಶ ; ಉಡುಪಿ ಡಿಎಆರ್ ಪೊಲೀಸ್ ಶಾಮೀಲು
ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡವರಿಗೆ ಸೋಂಕು ತಗುಲಿದರೆ, ಅವರೂ ಕೂಡಾ ಸೋಂಕಿನಿಂದ ಗುಣಮುಖರಾದ ಮೇಲೆ ಮೂರು ತಿಂಗಳ ನಂತರ ಎರಡನೇ ಡೋಸ್ ಹಾಕಿಸಿಕೊಳ್ಳುವಂತೆ ಕೋವಿಡ್ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ತಂಡ ಶಿಫಾರಸು ಮಾಡಿದೆ.
ಈವರೆಗೂ ಇಂತಹ ಪರಿಸ್ಥಿತಿ ಎದುರಾದಾಗ ಲಸಿಕೆ ಪಡೆಯುವ ಬಗ್ಗೆ ಯಾವುದೇ ಸಮಯವನ್ನು ನಿಗದಿಪಡಿಸಿಲ್ಲವಾಗಿತ್ತು. ರೋಗಿಯ ಆರೋಗ್ಯ ಸ್ಥಿತಿಯನ್ನು ಆಧರಿಸಿ ವೈದ್ಯರು ಎರಡು ಅಥವಾ ಮೂರು ವಾರಗಳ ಅಂತರವನ್ನು ಶಿಫಾರಸು ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.
ಕೆಲವು ದಿನಗಳ ಹಿಂದೆ ದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಇಂತಹ ಪರಿಸ್ಥಿತಿಯಲ್ಲಿ ನಾಲ್ಕು ವಾರಗಳ ಅಂತರ ಇರುವುದು ಉತ್ತಮ ಎಂದು ಸಲಹೆ ನೀಡಿದ್ದರು.
ಇದೀಗ ಕೋವಿಶೀಲ್ಡ್ ಲಸಿಕೆಯ ಡೋಸ್ ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ನಿಯಮಗಳ ಪ್ರಕಾರ ಕೋವಿಡ್ ನಿಂದ ಗುಣಮುಖರಾದವರು ನಾಲ್ಕು ವಾರಗಳ ನಂತರ ಲಸಿಕೆ ಹಾಕಿಸಿಕೊಳ್ಳಬಹುದು. ಗರ್ಭಿಣಿಯರಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರ ಇನ್ನಷ್ಟೇ ನಿರ್ಧಾರ ಪ್ರಕಟಿಸಬೇಕಾಗಿದೆ.