Advertisement

ರಾಜ್ಯ ಸರಕಾರಿ ನೌಕರರಿಗೆ ರಜೆ,ವೇತನದ ಬಂಪರ್‌?

06:00 AM Jan 28, 2018 | Harsha Rao |

ಬೆಂಗಳೂರು/ಉಡುಪಿ: ಸದ್ಯದಲ್ಲೇ ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ.
ರಾಜ್ಯ ಆರನೇ ವೇತನ ಆಯೋಗ ತನ್ನ ವರದಿ ಸಿದ್ಧ ಪಡಿಸಿದ್ದು ಈ ಮಾಸಾಂತ್ಯದೊಳಗೆ ಸರಕಾರಕ್ಕೆ ಸಲ್ಲಿಕೆ ಮಾಡಲಿದೆ. ಈ ವರದಿಯಲ್ಲಿ ಸರಕಾರಿ ನೌಕರರಿಗೆ ಭರಪೂರ ಕೊಡುಗೆಗಳ ಶಿಫಾರಸುಗಳನ್ನೇ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನೌಕರರ ವೇತನ ಶೇ. 24ರಿಂದ 30 ಹೆಚ್ಚ ಳ ಹಾಗೂ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆ ನೀಡುವ ಬಗ್ಗೆ ಈ ವರದಿ
ಯಲ್ಲಿ ಶಿಫಾರಸು ಮಾಡಲಾಗಿದೆ ಎಂದು  ತಿಳಿದು ಬಂದಿದೆ.

Advertisement

ಫೆ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ ಮಂಡಿಸಲಿದ್ದು, ಇದರಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ. ಇದು ಜಾರಿಯಾದರೆ,  ಸುಮಾರು 6.2 ಲಕ್ಷ ರಾಜ್ಯ ಸರಕಾರಿ ನೌಕರರಿಗೆ ಇದರ ಲಾಭ ಸಿಗುತ್ತದೆ. ಆದರೆ, ಇದರಿಂದಾಗಿ, ಸರಕಾರದ ಮೇಲೆ ವಾರ್ಷಿಕ 10 ಸಾವಿರ ಕೋಟಿ ರೂ. ಹೊರೆ ಬೀಳಲಿದೆ.

ರಜೆಗಳ ಸಮತೋಲನ ಹೇಗೆ?: ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನ ವೇತನ ಶ್ರೇಣಿ ಹಾಗೂ ವಾರದಲ್ಲಿ ಐದು ದಿನಗಳು ಮಾತ್ರವೇ ಕೆಲಸಕ್ಕೆ ಅವಕಾಶ ನೀಡಬೇಕೆಂಬ ರಾಜ್ಯ ಸರಕಾರಿ ನೌಕರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ವೇತನ ಹೆಚ್ಚಳ ಹಾಗೂ ಹೆಚ್ಚುವರಿ ರಜಾ ದಿನ ಘೋಷಣೆಯ ನಿರ್ಧಾರ  ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಸಂಘದ ಬೇಡಿಕೆಯಂತೆ, ವಾರದಲ್ಲಿ ಐದು ದಿನಗಳು ಮಾತ್ರ ಸೇವೆಗೆ ಅವಕಾಶ ನೀಡುವುದು ಕಷ್ಟವಾಗಿರುವುದರಿಂದ, ಈಗ ಚಾಲ್ತಿಯಲ್ಲಿರುವಂತೆ ಎರಡನೇ ಶನಿವಾರದ ರಜೆಯೊಂದಿಗೆ ಹೆಚ್ಚುವರಿಯಾಗಿ ನಾಲ್ಕನೇ ಶನಿವಾರವನ್ನೂ ರಜಾ ದಿನವನ್ನಾಗಿ ಘೋಷಿಸಲು ಸರಕಾರ ಆಲೋಚಿಸಿದೆ ಎಂದು ಹೇಳಲಾಗಿದೆ.

ಕಚೇರಿ ಅವಧಿ ಕೊರತೆ ತಪ್ಪಿಸಲು ಮೊದಲ, ಮೂರನೇ ಶನಿವಾರಗಳ ಕಚೇರಿ ಅವಧಿಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಎಷ್ಟು  ಹೆಚ್ಚಾಗುತ್ತೆ ವೇತನ?: ಶೇ. 24 ವೇತನ ಹೆಚ್ಚಳವಾದರೆ ನೌಕರನೊಬ್ಬ ತನ್ನ ಈಗಿನ ಸಂಬಳಕ್ಕೆ ಕನಿಷ್ಠ 3 ಸಾವಿರದಿಂದ 12 ಸಾವಿರ ಹೆಚ್ಚು ವೇತನ ಪಡೆಯುತ್ತಾನೆ. ಮಾಸಿಕ 50 ಸಾವಿರ ರೂ. ವೇತನ ಪಡೆಯುತ್ತಿದ್ದವರಿಗೆ ಶೇ. 24ರಷ್ಟು ವೇತನ ಹೆಚ್ಚಾದರೆ ಅವರು 12 ಸಾವಿರ ರೂ. ಹೆಚ್ಚುವರಿ ವೇತನ ಪಡೆಯಲಿದ್ದಾರೆ. ತಿಂಗಳಿಗೆ 15 ಸಾವಿರ ರೂ. ಪಿಂಚಣಿ ಪಡೆಯುವ ನಿವೃತ್ತ ನೌಕರರು, 3,600 ರೂ. ಹೆಚ್ಚು  ಪಡೆಯಲಿದ್ದಾರೆ.

ಇಷ್ಟಾದರೂ ಕೊರತೆಯೇ! 
ಸದ್ಯಕ್ಕೆ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಹಾಗೂ ಸರಕಾರಿ ನೌಕರರ ನಡುವಿನ ವೇತನ ವ್ಯತ್ಯಾಸ ಸದ್ಯಕ್ಕೆ ಶೇ. 65ರಷ್ಟು ಇದೆ. ಈಗ, ಶೇ. 30ರಷ್ಟು ವೇತನ ಹೆಚ್ಚಳ ಮಾಡಿದರೂ ಇದರ ವ್ಯತ್ಯಾಸ ಅರ್ಧದಷ್ಟು (ಶೇ. 35ಕ್ಕೆ) ಇಳಿಯುತ್ತದಷ್ಟೆ. ಈ ಹಿಂದೆ, ಸದಾನಂದ ಗೌಡರು ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯ ಸರಕಾರಿ ನೌಕರರ ವೇತನವನ್ನು ಶೇ. 22ರಷ್ಟು ಹೆಚ್ಚಿಸಿದ್ದರು. ಆಗ ಅವರು, ಮೂಲ ವೇತನದಲ್ಲಿ ಹೆಚ್ಚಳ ಮಾಡಿರಲಿಲ್ಲ. ಬದಲಿಗೆ, ಬಾಡಿಗೆ ಸೇರಿದಂತೆ ಇತರ ಭತ್ತೆಗಳನ್ನು ಹೆಚ್ಚಿಸಿದ್ದರು.

ಆರನೇ ವೇತನ ಆಯೋಗ 
ಶೀಘ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದು, ಶೇ. 25ರಿಂದ 35ರಷ್ಟು ಮೂಲ ವೇತನ ಹೆಚ್ಚಿಸಲು, ತಿಂಗಳ 2ನೇ ಮತ್ತು ನಾಲ್ಕ ನೇ ಶನಿವಾರ ರಜೆ ನೀಡಲು ಶಿಫಾರಸು ಮಾಡಲಿದೆ ಎಂದು ತಿಳಿದು ಬಂದಿದೆ.
– ಎಸ್‌.ಎಸ್‌. ತೋನ್ಸೆ, ರಾಜ್ಯ ಸರಕಾರಿ 
ನಿವೃತ್ತ ನೌಕರರ ಜಿಲ್ಲಾ ಸಂಘದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next