ಬೆಳಗಾವಿ: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸುತ್ತಮುತ್ತ ಶಿವಸೇನೆಯವರು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವುದು ತುಂಬಾ ಖಂಡನೀಯ ಎಂದು ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ವಿ ಸೋಮಶೇಖರ ಹೇಳಿದ್ದಾರೆ.
ಕನ್ನಡ ನಾಡಿನ ಜನರು ಹೆಚ್ಚಿರುವ ಕೊಲ್ಲಾಪುರದಲ್ಲಿ ನಾಮ ಫಲಕಗಳು ಕನ್ನಡದಲ್ಲಿಯೇ ಇರುವುದು ಅಪರಾಧವಲ್ಲ. ಇದನ್ನೇ ದೊಡ್ಡದು ಮಾಡಿ ಅಲ್ಲಿನ ಕನ್ನಡಿಗರಿಗೆ ಹಾಗೂ ಅವರು ನಡೆಸುತ್ತಿರುವ ವಾಣಿಜ್ಯ ಸಂಸ್ಥೆಗಳಿಗೆ ತೊಂದರೆ ಕೊಡುತ್ತಿರುವುದು ಹಾಗೂ ನಮ್ಮ ಸರ್ಕಾರದ ಸಾರಿಗೆ ಬಸ್ಸುಗಳಿಗೆ ಹಾನಿ ಮಾಡುತ್ತಿರುವುದು ಖಂಡನೀಯ. ಇಂತಹ ಕಾರ್ಯದಲ್ಲಿ ತೊಡಗಿರುವ ಶಿವಸೇನೆ ಕಾರ್ಯಕ ರ್ತರ ಮೇಲೆ ಕೂಡಲೇ ಮಹಾರಾಷ್ಟ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟಿಕೆ: ರಾಜ್ಯ ಸಾರಿಗೆ ಸಂಚಾರ ಸ್ಥಗಿತ
ಕನ್ನಡಿಗರ ಹಾಗೂ ಮರಾಠಿ ಭಾಷಿಗರ ನಡುವೆ ಸೌಹಾರ್ದ ವಾತಾವರಣ ಉಂಟು ಮಾಡುವ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದಲ್ಲದೆ ಕರ್ನಾಟಕದ ಗೃಹ ಮಂತ್ರಿಗಳು ಈ ಬಗ್ಗೆ ಮಹಾರಾಷ್ಟ್ರದ ಗೃಹ ಮಂತ್ರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ ಸೋಮಶೇಖರ ಹೇಳಿದ್ದಾರೆ.