Advertisement

ವರ್ಷಾಂತ್ಯಕ್ಕೆ 50 ಸಾವಿರ ನಿವೇಶನ: ವಸತಿ ಸಚಿವ ವಿ.ಸೋಮಣ್ಣ

12:18 AM Aug 20, 2022 | Team Udayavani |

ಬೆಂಗಳೂರು: ಈ ವರ್ಷಾಂತ್ಯದ ವೇಳೆಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಪ್ಪತ್ತು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ 18 ಯೋಜನೆಗಳಿಗೆ ಸಂಬಂಧಿಸಿದ 103 ಪ್ರಕರಣ ಇತ್ಯರ್ಥಗೊಡು 600 ಎಕರೆಯಷ್ಟು ಜಮೀನು ಗೃಹ ಮಂಡಳಿ ವಶಕ್ಕೆ ಬಂದಿದ್ದು ನಿವೇಶನಕ್ಕಾಗಿ ಕಾದಿದ್ದವರ ಬಹುಕಾಲದ ನಿರೀಕ್ಷೆ ಈಡೇರಲಿದೆ ಎಂದು ಹೇಳಿದರು.

ಬಡಾವಣೆಗಳ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟವರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ.50ರಷ್ಟು ಕೊಡಲಾಗುತ್ತಿದೆ. ಇದರಿಂದ ಗೃಹ ಮಂಡಳಿಗೂ ಹೊರೆ ತಪ್ಪಿ ಜಮೀನು ಮಾಲೀಕರಿಗೂ ಅನುಕೂಲವಾಗಲಿದೆ. ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು, ಗದಗ, ಹುಬ್ಬಳ್ಳಿ-ಧಾರವಾಡ. ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಯೋಜನೆಗೆ ಇದರಿಂದ ಚಾಲನೆ ದೊರೆತಿದೆ. ಹೀಗಾಗಿ, ವರ್ಷಾಂತ್ಯಕ್ಕೆ 50 ಸಾವಿರ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ನಿವೇಶನಗಳ ಹಂಚಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ. ಸ್ಥಳದಲ್ಲಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದೇ ರೀತಿ ಯಶಸ್ವಿಯಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಶೇ.5 ವಿವೇಚನಾ ಕೋಟಾ
ಬೆಂಗಳೂರಿನ ಸೂರ್ಯನಗರ ಎರಡು ಹಾಗೂ ಮೂರನೇ ಹಂತ, ಜಿಗಣಿ ಬಳಿ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆ, ನೆಲಮಂಗಲ ಬಳಿಯ ಬಡಾವಣೆಗಳಲ್ಲೂ ನಿವೇಶನ ಹಂಚಿಕೆ ಮಾಡಲಾಗುವುದು. ಸ್ವಾತಂತ್ರ್ಯ ಯೋಧರು, ವಿಧವೆಯರು, ವಿಶೇಷ ಚೇತನರು ಸೇರಿ ಪ್ರಮುಖ ವರ್ಗಕ್ಕೆ ಶೇ.5ರಷ್ಟು ವಿವೇಚನಾ ಕೋಟಾದಡಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸೋಮಣ್ಣ ಹೇಳಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ 40 ಸಾವಿರ ಮನೆಗಳ ಹಂಚಿಕೆಗೆ ಗುರಿ ನಿಗದಿಪಡಿಸಿದ್ದು ಸದ್ಯದಲ್ಲೇ ಮೊದಲ ಹಂತದಲ್ಲಿ ಎರಡು ಸಾವಿರ ಮನೆ ಹಂಚಿಕೆ ಮಾಡಲಾಗುವುದು. ನಮ್ಮ ಅವಧಿಯೊಳಗೆ ನಮ್ಮ ಎಲ್ಲ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಚುನಾವಣೆ ಸಮೀಪ 24 ಲಕ್ಷ ಮನೆ ಘೋಷಿಸಿ ಎರಡು ಸಾವಿರ ಕೋಟಿ ರೂ. ಇಟ್ಟು ಹೋಗಿದ್ದರು. ಅದೆಲ್ಲವನ್ನೂ ರದ್ದುಪಡಿಸದೆ ಪೂರ್ಣಗೊಳಿಸಲಾಗಿದೆ. ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚರ್ಚೆಗೆ ಬಂದರೆ ದಾಖಲೆ ಸಹಿತ ವಿವರ ನೀಡಲು ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next