Advertisement

2022ರೊಳಗೆ ಸರ್ವರಿಗೂ ಸೂರು ! 22 ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣ

02:52 PM Nov 12, 2020 | sudhir |

ಚಿಕ್ಕೋಡಿ: 2022ರ ಒಳಗಾಗಿ ಸರ್ವರಿಗೂ ಸೂರು ಕಲ್ಪಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಬರುವ ಎರಡು ವರ್ಷದಲ್ಲಿ ಒಂದು ಲಕ್ಷ ಮನೆ ನೀಡುವ ಗುರಿ ಇಟ್ಟುಕೊಂಡಿದ್ದು, ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ ಎಂದು ವಸತಿ ಸಚಿವ
ಸೋಮಣ್ಣ ಹೇಳಿದರು.

Advertisement

ನಿಪ್ಪಾಣಿ ನಗರದ ಶಿಂಧೆ ನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ನಿಪ್ಪಾಣಿ ನಗರದಲ್ಲಿ ಪಿ.ಎಂ.ಎ.ವೈ.ಎ.ಎಚ್‌.ಪಿ.ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ 2052 (ಜಿ+2) ಮಾದರಿಯ ಗುಂಪು ಮನೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

2022 ರ ಒಳಗಾಗಿ ಪ್ರತಿಯೊಬ್ಬರಿಗೆ ಮನೆ ನೀಡುವುದು ರಾಜ್ಯ ಸರಕಾರದ ಆಶಯವಾಗಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ನಗರದ ಜನರಿಗೆ ಮನೆ ನೀಡಲು ಈ ಯೋಜನೆ ರೂಪಿಸಿದೆ ಎಂದರು.

ನಿಪ್ಪಾಣಿ ನಗರದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು 22 ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ. 20 ತಿಂಗಳ ಅವಧಿಯಲ್ಲಿ ಬಡಜನರಿಗೆ ಮನೆ ನೀಡಲಾಗುತ್ತದೆ. ಮೂಲಭೂತ ಸೌಕರ್ಯಕ್ಕಾಗಿ ಬರುವ ವಾರದಲ್ಲಿ 10 ಕೋಟಿ ರೂ ಮಂಜೂರಾತಿ ನೀಡಲಾಗುತ್ತದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ಇದನ್ನೂ ಓದಿ:ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಐಷಾರಾಮಿ ವಂಚಕ ಪೊಲೀಸ್ ಬಲೆಗೆ

Advertisement

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದು, ಬಡ ಜನರಿಗೆ ಅನುಕೂಲವಾಗಲು ಪ್ರಧಾನಿ 8 ಕೋಟಿ ಉಚಿತ ಅಡುಗೆ ಅನಿಲ ಸಿಲಿಂಡರ್‌ ನೀಡಿದ್ದಾರೆ. ರೈತರಿಗೆ 6
ಸಾವಿರ ರೂ. ಜೊತೆಗೆ ಮುಖ್ಯಮಂತ್ರಿಗಳು 4 ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ರೂ. ನೀಡುತ್ತಿದ್ದಾರೆ. ಸರಕಾರ ಜನರ ಪರವಾದಂತಹ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನಿಪ್ಪಾಣಿ ನಗರದಲ್ಲಿ ಮನೆ ನಿರ್ಮಾಣ ಬಹುದಿನಗಳ ಬೇಡಿಕೆಯಾಗಿತ್ತು. ಕಳೆದ 2001ರಿಂದ ಜನ ನಗರಸಭೆಗೆ ಅರ್ಜಿ ಹಾಕುತ್ತಾ ಬಂದಿದ್ದರು. ಈಗ ವಸತಿ ಸಚಿವ ಸೋಮಣ್ಣ ಅವರು ಎಲ್ಲ ಮನೆಗಳಿಗೆ ನಿರ್ಮಾಣ
ಮಾಡಲು ಅನುಮತಿ ನೀಡಿದ್ದು, ಬಹುದಿನಗಳ ಕನಸು ನನಸಾಗಿದೆ. ಅರ್ಹ ಫಲಾನುಭವಿಗಳು ವಂತಿಗೆ ಹಣ ತುಂಬಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೈದ್ಧಿ ಕೆಲಸ ಮಾಡಿದೆ. ಕಳೆದ ಅವಧಿಯಲ್ಲಿ ನಿಪ್ಪಾಣಿ ಕ್ಷೇತ್ರದಲ್ಲಿ 800 ಕೋಟಿ ರೂ. ನಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಈಗ ನನೆಗುದಿಗೆ ಬಿದ್ದಿರುವ
ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನ ನಡೆಸಿದ್ದೇನೆ. ವಸತಿ ಸಚಿವ ಸೋಮಣ್ಣ ಅವರು 2052 ಮನೆ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ನಿಪ್ಪಾಣಿ ನಗರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.

ವೇದಿಕೆ ಮೇಲೆ ನಗರಸಭೆ ಅಧ್ಯಕ್ಷ ಪ್ರವೀಣ ಬಾಟಲೆ, ಉಪಾಧ್ಯಕ್ಷ ನೀತಾ ಬಾಗಡೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೊಠಿವಾಲೆ, ಜಿಲ್ಲಾಧಿಕಾರಿ ಜಿ.ಎಂ.ಹಿರೇಮಠ, ಉಪವಿಭಾಗಾಧಿಕಾರಿ ಯುಕೇಶಕುಮಾರ ಮುಂತಾದವರು ಇದ್ದರು.
ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ ಸ್ವಾಗತಿಸಿದರು. ರಾಜೀವ ಗಾಂಧಿ ನಿಗಮ ತಾಂತ್ರಿಕ ವ್ಯವಸ್ಥಾಪಕ ಮಹಾದೇವ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next