Advertisement

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚಾಮರಾಜನಗರದ ಹನೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಆಯೋಜಿಸಿದ್ದ “ವಿಜಯಸಂಕಲ್ಪ’ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು ಹಾಜರಾಗಿದ್ದು, ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ.

Advertisement

ರಾಷ್ಟ್ರೀಯ ನಾಯಕರು ಭಾಗವಹಿ ಸುವ ಕಾರ್ಯಕ್ರಮವೊಂದರಿಂದ ಜಿಲ್ಲಾ ಉಸ್ತುವಾರಿ ಸಚಿವರು ದೂರ ಉಳಿಯುತ್ತಾರೆ ಎಂಬುದು ಚುನಾವಣ ಸಂದರ್ಭದಲ್ಲಿ ಸಣ್ಣ ಮಾತಂತೂ ಅಲ್ಲ. ಅದರಲ್ಲಿಯೂ ವೀರಶೈವ ಸಮು ದಾಯದ ಪ್ರಭಾವಿ ಸಚಿವರೊಬ್ಬರು ತಟಸ್ಥರಾಗಿ ಮನೆಯಲ್ಲೇ ಕುಳಿತುಕೊಳ್ಳುವುದನ್ನು ಸಹಜ ಎಂದು ಪರಿಗಣಿಸುವುದಕ್ಕೆ ಸಾಧ್ಯವೇ ಇಲ್ಲ.

ಏಕೀ ಬೇಸರ: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಚಿಂತೆ ಬಿಜೆಪಿಗೆ ಸೇರ್ಪಡೆಯಾದ ವರ್ಷದಿಂದಲೇ ಸೋಮಣ್ಣ ಅವರನ್ನು ಕಾಡುತ್ತಿದೆ. ಅದರಲ್ಲಿಯೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಇವರನ್ನು ಪಕ್ಕಕ್ಕೆ ಸರಿಸಿದ್ದಾರೆ ಎಂಬ ಆರೋಪ ಪಕ್ಷದೊಳಗಿತ್ತು. ಅನಂತ್‌ ಕುಮಾರ್‌ ಬದುಕಿದ್ದಾಗ ತಮ್ಮ ದುಗುಡವನ್ನು ಹಂಚಿಕೊಳ್ಳುವುದಕ್ಕೆ ಅವರಿಗೊಂದು ವೇದಿಕೆಯಾದರೂ ಇತ್ತು. ಅನಂತ್‌ ಕುಮಾರ್‌ ಅವರಿಗೂ ಯಡಿಯೂರಪ್ಪ ಅವರಿಗೆ ಪ್ರತಿಯಾಗಿ ಸೋಮಣ್ಣ ಒಬ್ಬ ಪ್ರಬಲ ಲಿಂಗಾಯತ ನಾಯಕನಾಗಿ ಆಧಾರವಾಗಿದ್ದರು. ಆದರೆ ಬದಲಾದ ಬಿಜೆಪಿಯಲ್ಲಿ ಸೋಮಣ್ಣ ಅವರ ಸ್ಥಿತಿ “ಅತ್ತ ಬೇತಾಳ, ಇತ್ತ ಪಾತಾಳ’ ಎಂಬಂತಾಗಿದೆ. ಇಲ್ಲಿರಲಾರದೇ, ಅಲ್ಲಿಗೂ ಹೋಗಲಾರದೇ ಸೋಮಣ್ಣ ತ್ರಿಶಂಕು ಸ್ಥಿತಿ ತಲುಪುವಂತಾಗಿದೆ.

ಅಷ್ಟಕ್ಕೂ ಕೆಲವು ತಿಂಗಳ ಹಿಂದೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಸೋಮಣ್ಣ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ, ಅತೃಪ್ತಿ ಶಮನಗೊಳಿಸಿದ್ದರು. ರಾಜ್ಯದ ಪ್ರಬಲ ವೀರ ಶೈವ- ಲಿಂಗಾಯತ ಮಠ-ಮಾನ್ಯಗಳ ಜತೆಗೆ ಸೋಮಣ್ಣ ಭವಿಷ್ಯದಲ್ಲಿ ಸಂಪರ್ಕ ಸೇತುವಾಗುತ್ತಾರೆ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರೇ ಈ ಸಲಹೆಯನ್ನು ಅಮಿತ್‌ ಶಾ ಅವರಿಗೆ ನೀಡಿದ್ದರು ಎನ್ನಲಾಗಿದೆ. ಆದರೆ ರಾಷ್ಟ್ರೀಯ ನಾಯಕರು ತಮಗೆ ನೀಡಿದ ಈ ಮರ್ಯಾದೆ ಭವಿಷ್ಯದಲ್ಲಿ ಮಾರಕವಾಗಬಹುದೆಂಬ ಆತಂಕವನ್ನು ಖುದ್ದು ಸೋಮಣ್ಣ ಅವರೇ ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದರು.

ಸೋಮಣ್ಣ ಅವರ ಈ ನಿರೀಕ್ಷೆ ಕೊನೆಗೂ ನಿಜವಾಗಿದೆ. ಚಾಮರಾಜನಗರದಿಂದ ಹೊರಟ ವಿಜಯ ಸಂಕಲ್ಪ ಯಾತ್ರೆಯ ನಾಯಕತ್ವವನ್ನು ಪಕ್ಷ ತಮಗೆ ನೀಡಬಹುದೆಂಬ ನಿರೀಕ್ಷೆ ಹುಸಿ ಯಾಗಿದೆ. ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಸಾರಥ್ಯ ವಹಿಸಿದ್ದು ಬೇಸರಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಪಕ್ಷದ ಹಿರಿಯರ ಜತೆ ವ್ಯಕ್ತಪಡಿಸಿರುವ ಅವರು ಅನಾರೋಗ್ಯದ ಕಾರಣ ನೀಡಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

Advertisement

ಪಕ್ಷದಲ್ಲಿ ಪದೆ ಪದೇ ತಮ್ಮನ್ನು ಕಡೆಗಣಿಸುತ್ತಿರುವುದು ಸೋಮಣ್ಣ ಮತ್ತೆ ಕವಲುದಾರಿಯಲ್ಲಿ ನಿಲ್ಲುವಂತೆ ಮಾಡಿದೆ.

– ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next