ಯೋಗ ಭಾರತ ಜಗತ್ತಿಗೆ ನೀಡಿದ ಅಮೃತಕುಂಭ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಯೋಗ ತನ್ನ ಛಾಪು ಮೂಡಿಸಿದೆ. ನೂರಾರು ರಾಷ್ಟ್ರಗಳ ಲಕ್ಷಾಂತರ ಜನರು ಭಾರತಕ್ಕೆ ಯೋಗ ಕಲಿಯುವುದಕ್ಕಾಗಿಯೇ ಬರುತ್ತಾರೆ. ಇದರಿಂದಾಗಿ ಇಂದು ಅನೇಕ ಯೋಗಶಿಕ್ಷಕರ ಜೀವನ ರೂಪಿಸಲು ಸಹ ಸಾಧ್ಯಗಿದೆ.
ಆದರೆ ಅವಳಿಗೆ ಯೋಗವನ್ನು ಅಪ್ಪಿಕೊಳ್ಳುವ ಯಾವ ಅಗತ್ಯವೂ ಇರಲಿಲ್ಲ. ಯೋಗ ಕೇವಲ ಅವಳ ಮನೆಯ ಒಂದು ಸಂಪ್ರದಾಯವಾಗಿತ್ತು. ಆಕೆಯ ತಂದೆ ಮತ್ತು ಅಜ್ಜ ಇಬ್ಬರೂ ಭಾರತೀಯ ವೈದ್ಯ ಪದ್ಧತಿಯ ನೋಂದಾಯಿತ ವೈದ್ಯರು. ಅವಳ ಜೀವನ ನಡೆಸುವುದಕ್ಕೆ ಯಾವ ಕಷ್ಟವೂ ಇರಲಿಲ್ಲ. ಆದರೆ ಆಕೆ ಆರಿಸಿಕೊಂಡದ್ದು ಯೋಗವನ್ನು. ಆಕೆ ಬೇರೆ ಯಾರು ಅಲ್ಲ ಯೋಗ ಪಾಟಿಭಿ ವಿ. ನನಮ್ಮಾಳ್.
ನನಮ್ಮಾಳ್ ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ. 1920 ರ ಫೆಬ್ರವರಿ 24 ರಲ್ಲಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜನಿಸಿದ ಇವರು, 8ನೇ ವಯಸ್ಸಿಗೆ ತಮ್ಮ ಅಜ್ಜನಿಂದ ಯೋಗ ಕಲಿತು ಯೋಗದ ಐವತ್ತು ಆಸನಗಳನ್ನು ಸಲೀಸಾಗಿ ಮಾಡುತ್ತಿದ್ದರು. ಆದರೆ ಕುಟುಂಬದ ಸಂಪ್ರದಾಯ ಮತ್ತು ಆಚಾರದ ಪ್ರಕಾರ ಹೊರಗಿನ ಯಾರಿಗೂ ಯೋಗವನ್ನು ಕಲಿಸಿಕೊಡುವ ಹಾಗಿರಲಿಲ್ಲ. ನನಮ್ಮಾಳರ ಕುಟುಂಬ ಸಿದ್ಧ ಔಷಧವನ್ನು ತಯಾರಿಸುತ್ತಿತ್ತು ಹಾಗೂ ಕೃಷಿಯನ್ನು ಅವಲಂಬಿಸಿತ್ತು. ನನಮ್ಮಾಳ್ ಅವರ ಪತಿಯೂ ಸಿದ್ಧ ಔಷಧ ವೈದ್ಯರಾಗಿದ್ದರು. ಮದುವೆಯ ಬಳಿಕ ನನಮ್ಮಾಳ್ ಪ್ರಕೃತಿ ಚಿಕಿತ್ಸೆಯ ಕಡೆಗೆ ಒಲವು ಬೆಳೆಸಿಕೊಂಡರು. ಅನಂತರದಲ್ಲಿ ಯೋಗ ಶಿಕ್ಷಕರಾಗಿ ತಮ್ಮ ವೃತ್ತಿ ಪ್ರಾರಂಭಿಸಿದರು. ಯೋಗವನ್ನು ಒಂದು ಹೊಟ್ಟೆಪಾಡು ಎಂದು ಆಕೆ ಯಾವತ್ತೂ ತಿಳಿಯಲಿಲ್ಲ, ಮತ್ತು ಹೊಟ್ಟೆಪಾಡಿಗಾಗಿ ಯೋಗಶಿಕ್ಷಣ ನೀಡುವ ಪರಿಸ್ಥಿತಿಯೂ ಅವರದ್ದಾಗಿರಲಿಲ್ಲ.
1972 ರಲ್ಲಿ ತಮ್ಮ ಹುಟ್ಟೂರಾದ ಕೊಯಂಬತ್ತೂರಿನಲ್ಲಿ ಓಝೊನ್ ಯೋಗ ಶಿಕ್ಷಣ ಕೇಂದ್ರ ಪ್ರಾರಂಭಿಸಿದರು. ಆ ಸಂಸ್ಥೆಯ ಮೂಲಕ ಐದು ದಶಕಗಳಲ್ಲಿ ಅವರು ಯೋಗ ಕಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಹತ್ತು ಲಕ್ಷ. ಅವರಿಂದ ಯೋಗ ಕಲಿತ ಆರು ನೂರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಯೋಗ ಶಿಕ್ಷಕರಾಗಿದ್ದಾರೆ. ಇವರ ಕುಟುಂಬದ ಒಟ್ಟು ಯೋಗಶಿಕ್ಷಕರ ಸಂಖ್ಯೆಯೇ ಅರುವತ್ತಕ್ಕೂ ಹೆಚ್ಚು!
ಇವರು ಯೋಗದಿಂದಾಗುವ ಆರೋಗ್ಯ ವೃದ್ಧಿಯ ಬಗ್ಗೆ ಬಹುವಾಗಿ ಕೆಲಸ ಮಾಡಿದರು. ಮಹಿಳೆಯರ ಆರೋಗ್ಯಕ್ಕೆ ಯೋಗದಲ್ಲಿರುವ ಫಲಗಳ ಬಗ್ಗೆಯೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಉಪನ್ಯಾಸ ನೀಡಿದ್ದಾರೆ. ಇವರ ಸಾಧನೆಗಾಗಿ ಭಾರತದ ನಾಲ್ಕನೇ ಅತ್ಯಂತ ನಾಗರಿಕ ಪ್ರಶಸ್ತಿ “ಪದ್ಮಶ್ರೀ’ ಸಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನಾರಿಶಕ್ತಿ’ ಪುರಸ್ಕಾರ ನೀಡಿ ಗೌರವಿಸಿದೆ. “ಯೋಗ ರತ್ನ ಪುರಸ್ಕಾರ’ ಮತ್ತು ರೋಟರಿ ಕ್ಲಬ್ ನ ಜೀವಮಾನ ಸಾಧನೆ ಪ್ರಶಸ್ತಿಗಳೂ ಇವರನ್ನು ಅರಸಿಕೊಂಡು ಬಂದಿವೆ.
2019 ರಲ್ಲಿ ಬೆಳಗಿನ ಜಾವ ಹಾಸಿಗೆಯಿಂದ ಕೆಳಗೆ ಬಿದ್ದು ಹಾಸಿಗೆ ಹಿಡಿದ ಯೋಗ ನಕ್ಷತ್ರ ಅದೇ ವರ್ಷ ಅಕ್ಟೋಬರ್ 26 ರಂದು ಭಾನು ಸೇರಿತ್ತು. ಯೋಗ ಭಾರತದ ಹೆಮ್ಮೆ. ನನಮ್ಮಾಳ್ ಯೋಗದ ಹೆಮ್ಮೆ.
ಲತೇಶ್ ಸಾಂತ
ವಿವಿ ಮಂಗಳೂರು, ಹಂಪನಕಟ್ಟೆ