ಹಿರಿಯ ಸಂಗೀತ ನಿರ್ದೇಶಕ ಕಂ ನಟ ವಿ. ಮನೋಹರ್ ಬಹಳ ದಿನಗಳ ನಂತರ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೆ “ದರ್ಬಾರ್’ ಎಂಬ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಪೂರ್ಣಗೊಳಸಿರುವ ವಿ. ಮನೋಹರ್, ಇದೇ ಏಪ್ರಿಲ್ ವೇಳೆಗೆ ತಮ್ಮ ಸಿನಿಮಾವನ್ನು ಥಿಯೇಟರ್ ಗೆ ತರುವ ಯೋಚನೆಯಲ್ಲಿದ್ದಾರೆ. ಇತ್ತೀಚೆಗಷ್ಟೇ “ದರ್ಬಾರ್’ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ಮೊದಲಿಗೆ ತಮ್ಮ ಸಿನಿಮಾದ ಬಗ್ಗೆ ಮಾತಿಗಿಳಿದ ವಿ. ಮನೋಹರ್, “ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್. “ಇಂದ್ರ ಧನುಷ್’ ಸಿನಿಮಾದ ನಂತರ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗುತ್ತಾ ಹೋದೆ. ಹಾಗಾಗಿ ಅಂದುಕೊಂಡಂತೆ ಸಿನಿಮಾ ನಿರ್ದೇ ಶನ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಈಗ ಅದಕ್ಕೆ ಅವಕಾಶ ಸಿಕ್ಕಿದ್ದು, ರಾಜಕೀಯ ವಿಡಂಭನೆಯ ಕಥೆಯನ್ನು “ದರ್ಬಾರ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಕಥಾಹಂದರದ ವಿವರಣೆ ನೀಡಿದರು.
“ದರ್ಬಾರ್’ ಸಿನಿಮಾ ಶುರುವಾದ ನಂತರ ಕೋವಿಡ್ ಹೆಚ್ಚಾಯಿತು. ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಈ ಹಿಂದೆ “ದಿಲ್ದಾರ್’ ಸಮಯದಿಂದಲೂ ಸ್ನೇಹಿತರಾಗಿದ್ದ ಸತೀಶ್ ಈ ಕಥೆ ಹೇಳಿದರು. ಅದರಲ್ಲೂ ಪಾಲಿಟಿಟ್ಸ್ ಇತ್ತು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್ ಈ ಸಿನಿಮಾದಲ್ಲಿದೆ’ ಎಂದರು ವಿ. ಮನೋಹರ್.
ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಿಸಿದ ಅನುಭವವಿರುವ ಸತೀಶ್ “ದರ್ಬಾರ್’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. “ನಿಜವಾಗಿಯೂ ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಈ ಸಿನಿಮಾ ಮಾಡುತ್ತದೆ. ಮನರಂಜನೆಯ ಜೊತೆಗೊಂದು ಮೆಸೇಜ್ ಈ ಸಿನಿಮಾ ದಲ್ಲಿದೆ. ಸದ್ಯ ಸಿನಿಮಾ ಸೆನ್ಸಾರ್ ಮುಂದಿದ್ದು, ಆದಷ್ಟು ಬೇಗ ಥಿಯೇಟರ್‌ಗೆ ತರಲಿದ್ದೇವೆ’ ಎಂಬುದು ನಾಯಕ ಸತೀಶ್ ಮಾತು.
“ದರ್ಬಾರ್’ ಸಿನಿಮಾದಲ್ಲಿ ಜಾಹ್ನವಿ ನಾಯಕಿಯಾಗಿದ್ದು, ಉಳಿದಂತೆ ಕಾರ್ತಿಕ್ ಎಂ. ಎನ್ ಲಕ್ಷ್ಮೀದೇವಿ, ಅಶೋಕ್, ಸಾಧು ಕೋಕಿಲ ಮತ್ತಿತರರು ಇದ್ದಾರೆ.