ನವದೆಹಲಿ: ನಾನು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಭಾರತದಂತಹ ಮುಕ್ತ ವಾತಾವರಣದ ದೇಶ ಜಗತ್ತಿನಲ್ಲಿಯೇ ಬೇರೆ ಎಲ್ಲಿಯೂ ಇಲ್ಲ…ಇದು ಪಾಕಿಸ್ತಾನದಲ್ಲಿ ಬಲವಂತವಾಗಿ ವಿವಾಹ ಬಂಧನಕ್ಕೊಳಗಾಗಿ ಗುರುವಾರ ಭಾರತಕ್ಕೆ ಮರಳಿದ ದೆಹಲಿ ನಿವಾಸಿ ಉಜ್ಮಾ ಮನದಾಳದ ಮಾತು.
ಪಾಕಿಸ್ತಾನಕ್ಕೆ ಹೋಗುವುದು ತುಂಬಾ ಸುಲಭ. ಆದರೆ ವಾಪಸ್ ಆಗುವುದು ತುಂಬಾ ಕಷ್ಟ. ಯಾಕೆಂದರೆ ಪಾಕಿಸ್ತಾನ ಒಂದು ಮೃತ್ಯುಕೂಪ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಜ್ಮಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಭಾರತಕ್ಕೆ ವಾಪಸ್ ಆದ ಖುಷಿಯಲ್ಲಿ ಉಜ್ಮಾ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದಲ್ಲಾದ ಅನುಭವವನ್ನು ಹಂಚಿಕೊಂಡರು. ನಾನು ಪಾಕಿಸ್ತಾನಕ್ಕೆ ಮೇ 1ರಂದು ಹೋಗಿದ್ದೆ. ಮೇ 12ಕ್ಕೆ ಅಲ್ಲಿಂದ ವಾಪಸ್ ಆಗಬೇಕಿತ್ತು. ಆದರೆ ನನ್ನ ಪರಿಸ್ಥಿತಿ ಹೀಗೆ ಆಗುತ್ತೆ ಅಂತ ನಾನು ಯಾವತ್ತೂ ಎಣಿಸಿರಲಿಲ್ಲ ಎಂದು ಹೇಳಿದರು.
20ರ ಹರೆಯದ ಉಜ್ಮಾಳನ್ನು ಪಾಕಿಸ್ತಾನಿ ನಿವಾಸಿ ತಾಹಿರ್ ಅಲಿ ಎಂಬಾತ ಗನ್ ಪಾಯಿಂಟ್ ನಿಂದ ಬೆದರಿಸಿ ಬಲವಂತವಾಗಿ ಮದುವೆ ಆಗಿದ್ದ. ತಾಹಿರ್ ಉಜ್ಮಾಳಿಗೆ ನಿದ್ದೆ ಮಾತ್ರೆ ತಿನ್ನಿಸಿ, ನಿದ್ದೆಯ ಮಂಪರಿನಲ್ಲಿ ಇದ್ದಾಗಲೇ ಈ ಹಿಂದೆ ತಾಲಿಬಾನ್ ಹಿಡಿತದಲ್ಲಿದ್ದ ಗುನೆರ್ ಎಂಬ ಕುಗ್ರಾಮಕ್ಕೆ ಕರೆದೊಯ್ದಿರುವುದಾಗಿ ವಿವರಿಸಿದ್ದಾರೆ.
ಗುನೆರ್ ಅತ್ಯಂತ ಭಯಾನಕ ಪ್ರದೇಶವಾಗಿತ್ತು. ಇಲ್ಲಿನ ಎಲ್ಲಾ ವ್ಯಕ್ತಿಗಳಿಗೂ 2, 3 ಹೆಂಡತಿಯರು ಮತ್ತು ದೊಡ್ಡ, ದೊಡ್ಡ ಗನ್ ಗಳನ್ನು ಹಿಡಿದು ನಿಂತಿರುವ ದೃಶ್ಯ ನನ್ನ ಕಂಗೆಡಿಸಿತ್ತು. ತಾಹಿರ್ ವಶದಲ್ಲಿದ್ದಾಗ ಉಜ್ಮಾಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಕಿರುಕುಳ ಕೊಟ್ಟಿರುವುದಾಗಿ ತಿಳಿಸಿದ್ದಾರೆ.