Advertisement

ಉಜಿರ್‌ಬೆಟ್ಟು: ಬರಡು ಭೂಮಿಯಲ್ಲಿ ಕೃಷಿ ಕ್ರಾಂತಿ; ಬಂಗೇರ್‌ಕಟ್ಟೆ ನಿವಾಸಿಯಿಂದ ಮಾದರಿ ಕಾರ್ಯ

03:40 PM Jul 25, 2020 | mahesh |

ಉಪ್ಪಿನಂಗಡಿ: ಶ್ರಮಜೀವಿಗಳಿಬ್ಬರು ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿಯನ್ನು ಅಗೆದು ಅಡಿಕೆ ಗಿಡ ಮತ್ತು ಗದ್ದೆ ನಾಟಿಯೊಂದಿಗೆ ಕೃಷಿ ಕ್ರಾಂತಿ ಮಾಡಿ ಊರಿಗೆ ಮಾದರಿಯಾಗಿದ್ದಾರೆ. ಕರಾಯ ಗ್ರಾಮದ ಉಜಿರ್‌ಬೆಟ್ಟು ಎಂಬಲ್ಲಿ ಬಂಗೇರ್‌ಕಟ್ಟೆ ನಿವಾಸಿ ಯೂಕೂಬ್‌ಯವರ 1.74 ಎಕ್ರೆ ಮುರ ಕಲ್ಲಿನಿಂದ ಕೂಡಿದ್ದ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿ ಇದೀಗ ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆಗೊಂಡಿದೆ. ಯಾಕೂಬ್‌ ಅವರು ತಣ್ಣೀರುಪಂಥ ಗ್ರಾಮದ ಉರ್ನಡ್ಕ ನಿವಾಸಿ ಆದಂ ಅಲ್‌ ಮದೀನ ಅವರ ಸಹಕಾರದೊಂದಿಗೆ ಕೆಂಪು ಕಲ್ಲು ತೆಗೆದು ಮತ್ತೆ ಮಣ್ಣು ಹಾಕಿ ಸಮತಟ್ಟು ಮಾಡಿ ಕೃಷಿ ಮಾಡಿದ್ದಾರೆ.

Advertisement

1.74 ಎಕ್ರೆ ಭೂಮಿಯಲ್ಲಿ ಅರ್ಧ ಎಕ್ರೆಯಲ್ಲಿ ಉಳುಮೆ ಮಾಡಿ ನೇಜಿ ನಾಟಿ ಮಾಡುತ್ತೇವೆ. ಉಳಿದ ಜಾಗದಲ್ಲಿ ಈಗಾಗಲೇ 450 ಅಡಿಕೆ ಗಿಡ ನೆಡಲಾಗಿದೆ, ಇನ್ನೂ 500 ಗಿಡ ನೆಡುವುದಕ್ಕೆ ತಯಾರಿ ನಡೆಸುತ್ತಿದ್ದೇವೆ ಎಂದು ಯಾಕೂಬ್‌ ತಿಳಿಸಿದ್ದಾರೆ. ಮುರ ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯನ್ನು ಕೃಷಿ ಇಲಾಖೆಯವರಿಗೆ ತೋರಿಸಿ ಮಾಹಿತಿ ಕೇಳಿದ್ದೆವು. ಮೇಲಿನ ಹಂತದಲ್ಲಿರುವ ಕೆಂಪು ಕಲ್ಲುಗಳನ್ನು ತೆಗೆದರೆ ಕೃಷಿಗೆ ಬಳಸಬಹುದು ಎಂದು ಕೃಷಿ ಇಲಾಖೆಯವರು ಮಾಹಿತಿ ನೀಡಿದರು. ಈ ಬಗ್ಗೆ ಅವರಿಂದ ದೃಢೀಕರಣ ಪಡೆದುಕೊಂಡು ಬಳಿಕ ಗಣಿ ಇಲಾಖೆಯಿಂದ ಕೆಂಪು ಕಲ್ಲು ತೆಗೆಯಲು ಅನುಮತಿಗೆ ಮನವಿ ಸಲ್ಲಿಸಿದೆವು. ಗಣಿ ಇಲಾಖೆಯವರು ಪರಿಶೀಲನೆ ನಡೆಸಿ ಕಲ್ಲು ತೆಗೆಯುವುದಕ್ಕೆ ಅನುಮತಿ ನೀಡಿದರು. ಸರಕಾರ ನಿಗದಿಪಡಿಸಿದ ರಾಜಧನ ಕಟ್ಟಿ ಕಾನೂನು ಪ್ರಕಾರ ಕಲ್ಲುಗಳನ್ನು ತೆಗೆದು ಬಳಿಕ ಸಮತಟ್ಟು ಮಾಡಿ ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಲು ಸಾಧ್ಯವಾಯಿತು ಎಂದು ಅಲ್‌ ಮದೀನ ಆದಂ ತಿಳಿಸಿದ್ದಾರೆ.  ಭತ್ತದ ವಿಶಿಷ್ಟ ನಾಟಿ ವೀಕ್ಷಿಸಲು ಪಂ. ಆಡಳಿತಾಧಿಕಾರಿ ಶೇಷಗಿರಿ ನಾಯಕ್‌ ಹಾಗೂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಚ್ಛಾಶಕ್ತಿ ಇದ್ದರೆ ಸಾಧನೆ
ಈ ಜಾಗ ಮುರ ಕಲ್ಲಿನಿಂದ ಕೂಡಿತ್ತು. ಹಡಿಲು ಬಿಡುವುದಕ್ಕೆ ಮನಸ್ಸು ಇರಲಿಲ್ಲ. ಕೃಷಿ ಇಲಾಖೆಯವರಿಂದ ಸಲಹೆ ಪಡೆದು ಗೆಳೆಯ ಆದಂ ಅಲ್‌ ಮದೀನ ಅವರ ಸಹಾಯ ಪಡೆದುಕೊಂಡು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಿದೆವು. ಇಚ್ಛಾಶಕ್ತಿ ಇದ್ದರೆ ಸಾಧನೆ ಮಾಡಬಹುದು. ಇದರಲ್ಲಿ ಯಶಸ್ಸು ಆಗುವ ಭರವಸೆ ಹೊಂದಿದ್ದೇವೆ.
 -ಯೂಕೂಬ್‌ ಬಂಗೇರ್‌ಕಟ್ಟೆ ಕೃಷಿ ಸಾಧಕರು

Advertisement

Udayavani is now on Telegram. Click here to join our channel and stay updated with the latest news.

Next