ಅಪ್ಪ ಅಂದರೆ ಆಕಾಶ ಎಂಬ ಮಾತಿದೆ. ಅಂದರೆ ಅಪ್ಪನ ಪ್ರೀತಿ ಆಕಾಶದಷ್ಟು ವಿಶಾಲವಾದದ್ದು ಎನ್ನಬಹುದು. ಹಾಗಿದ್ದರೂ ಅಪ್ಪ ಸದಾ ನಮ್ಮನ್ನೆಲ್ಲ ಗದರುತ್ತಲೇ ಇರುತ್ತಾರೆ ಹಾಗಿದ್ದರೂ ಬೈದರು ಎಂದು ಸಿಟ್ಟಾಗುವ ಬದಲು ಗದರುವ ಹಿಂದಿನ ಪ್ರೀತಿಯನ್ನು ಹುಡುಕಬೇಕು. ಅಣ್ಣ ಅಪ್ಪನ ಸ್ಥಾನ ತುಂಬುತ್ತಾನೆಯೇ ಎಂಬ ಪ್ರಶ್ನೆಗೆ ಬಹುತೇಕರಿಗೆ ಹೌದು ಎಂಬ ಅಭಿಪ್ರಾಯ ವ್ಯಕ್ತವಾಗುವುದು.
ಅಣ್ಣ ಅಂದರೆ ನಮಗೆ ಒಂದು ತೆರನಾದ ಧೈರ್ಯ ಇದ್ದಂತೆ. ನಾವೆಷ್ಟು ಅಣ್ಣನ ಜೊತೆಗೆ ಜಗಳ ಮಾಡಿದರೂ ನಮ್ಮ ರಕ್ಷಣೆಗೆ ಆತ ಬಂದೇ ಬರುತ್ತಾನೆ. ಅಪ್ಪನ ಅನಂತರ ನನ್ನ ಕಾವಲಿಗೆ ನಿಲ್ಲೋದೆ ನನ್ನ ಅಣ್ಣ.
ನಂಗೆ ಅದು ಬೇಕು ಇದು ಬೇಕು ಎಂದು ಯಾವಾಗಲೂ ಅಪ್ಪನ ಹತ್ತಿರ ಕೇಳ್ತಿದ್ದ ನಾನು, ಅದು ಯಾವಾಗ ಅಣ್ಣನ ಹತ್ತಿರ ಕೇಳ್ಳೋದಕ್ಕೆ ಶುರು ಮಾಡಿದೆ ಅನ್ನೋದೇ ನನಗೆ ಅರ್ಥ ಆಗುತ್ತಿಲ್ಲ. ಒಮೊಮ್ಮೆ ನಾವು ಇನ್ನು ಚಿಕ್ಕವರಾಗಿಯೇ ಇರಬೇಕಿತ್ತು ಎಂದು ಅನ್ನಿಸುವುದುಂಟು.
ಒಂದೇ ತಟ್ಟೆಲಿ ಮೂರು ಜನ ಊಟ ಮಾಡಿದ್ದು, ನೀವ್ ಶಾಲೆಗೆ ಹೋಗಿಲ್ಲ ಅಂದ್ರೆ ನಾನು ಹೋಗಲ್ಲ ಅಂತ ಹಠ ಮಾಡಿದ್ದು, ಮನೇಲಿ ಯಾರು ಇಲ್ಲದೆ ಇದ್ದಾಗ ಬಜ್ಜಿ ಮಾಡೋಕೆ ಹೋಗಿ ಯಾರಿಗೂ ಗೊತ್ತಾಗಬಾರದು ಅಂತ ಎಣ್ಣೆ ಸೋಸುವಾಗ ಮೈ ಸುಟ್ಟು ಅದನ್ನು ಬಚ್ಚಿಟ್ಟ ನೆನಪು ಹೇಳುತ್ತದೆ ಅಣ್ಣಂದಿರ ಜತೆ ಕಳೆದ ನೆನಪುಗಳು ಅದೆಷ್ಟು ಸುಂದರ ಅಲ್ವಾ.
ಈವಾಗಂತೂ ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿಬಿಟ್ಟಿರುತ್ತಾರೆ. ಅವರೊಂದಿಗೆ ಕೂತು ಮಾತನಾಡಲು ಕೂಡ ಸಮಯ ಸಿಗುವುದಿಲ್ಲ ಅನ್ನೋದನ್ನೇ ಯೋಚಿಸಿದಾಗ ನಾವು ಇನ್ನು ಚಿಕ್ಕವರಿಗೆ ಇರಬೇಕಿತ್ತು ಎಂದು ತುಂಬಾ ಸಲ ಅನಿಸಿದ್ದೂ ಇದೆ.
ಹಾಗಾಗಿ ಅಣ್ಣನು ಅಪ್ಪನ ಜವಾಬ್ದಾರಿಗಳನ್ನು ಬಹಳ ಮುತುವರ್ಜಿಯಿಂದಲೆ ಕಾಯಲಿದ್ದಾನೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದು. ಅಕ್ಕರೆಯ ಪ್ರೀತಿಯ ಧಾರೆ ಎರೆವ ಅಣ್ಣನಿಗೆ ಈ ಲೇಖನದ ಮುಖೇನ ವಿಶೇಷ ನಮನಗಳು ಸಲ್ಲಿಸುವೆ.
- ಲಕ್ಷ್ಮೀ ಶಿವಣ್ಣ
ಮಹಿಳಾ ವಿವಿ ವಿಜಯಪುರ