ಆರಂಭದ ನನ್ನ ಮತ್ತು ಬಸ್ಸಿನ ಪರಿಚಯ ನಾನು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿದ್ದಾಗ. ಹೌದು, ನಾನು ಒದುತ್ತಿದ್ದ ಶಾಲೆ ಹತ್ತಿರದಲ್ಲಿದ್ದರು ಬಸ್ಸಿಲ್ಲದೆ ಹೋಗಲು ಸಾಧ್ಯವಿರಲಿಲ್ಲ. 2 ರೂ. ಕೊಟ್ಟರೆ 15 ನಿಮಿಷದಲ್ಲಿ ಶಾಲೆಗೆ ತಲುಪುತ್ತಿದ್ದೆ. ಆ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ವರೆಗೆ ಕಲಿತಾಯಿತು. ಸಂಜೆ ಮೂರು ಗಂಟೆಗೆ ಮನೆ ತಲುಪುತ್ತಿದ್ದ ದಿನಗಳವು.
ಮುಂದೆ ಪ್ರೌಢಶಾಲೆಗೆ ಬಂದಾಯಿತು. ಹೊಸತೇನೋ ಕಲಿಯಲು ಸಿಗುವ ಈ ಪ್ರೌಢಶಾಲೆ ಮೊದಲಿಗಿಂತಲು ದೂರದಲ್ಲಿದ್ದ ಕಾರಣ ಬೆಳಗ್ಗೆ ಏಳುವ ಸಮಯ ಸಹಿತ ಕೆಲವು ದಿನಚರಿ ಬದಲಾಯಿತು. ರಾತ್ರಿ ಮಲಗುವಾಗ ಹಿಂದಿನ ದಿನದ ತರಗತಿಯನ್ನು ಭಯದಿಂದ ಮನನ ಮಾಡಿಕೊಂಡು ನಿದ್ದೆಗೆ ಜಾರುತ್ತಿದ್ದ ದಿನಗಳವು. ಇಂದಿಗೂ ಅವುಗಳನ್ನು ನೆನೆದರೆ ಇಂಗ್ಲಿಷ್, ಗಣಿತ ತರಗತಿಗಳು, ಅಧ್ಯಾಪಕರು ನೆನಪಾಗುತ್ತಾರೆ.
ಪ್ರೌಢ ಎಂಬ ಹೆಸರಲ್ಲೇ ಇದೆ ಬದಲಾವಣೆ, ತಪ್ಪು – ತಿದ್ದುಗಳು ಆ ದಿನಗಳಲ್ಲೇ ಆಗಬೇಕಾದದ್ದೇ, ಹಾಗಾಗಿ ತಪ್ಪುಗಳನ್ನು ತಿದ್ದಿಕೊಳ್ಳಬೇಕಾದರೆ ಪೆಟ್ಟು ಕೊಡುವ ಶಿಕ್ಷಕರು ಬೇಕಲ್ಲವೇ. ಮತ್ತೆ ಮುಗಿತು ಎಂಬ ಖುಷಿಯೊಂದಿಗೆ ಮುಂದೇನೋ ಇದೆ ಅಲ್ಲವೇ. ಮುಂದೇನು ಎಂದಾಗ ಅಲ್ಲಿ ಕಣ್ಣಿಗೆ ಕಂಡಿದ್ದು ಮೂರು ಆಯ್ಕೆಗಳು. ಕಲಾ, ವಿಜ್ಞಾನ, ವಾಣಿಜ್ಯ. ಮೂರರಲ್ಲಿ ಒಂದನ್ನು ಆಯ್ಕೆ ಮಾಡಲೇಬೇಕು. ಎರಡು ವರ್ಷಗಳ ಪಿಯುಸಿ ಜೀವನ ನಮ್ಮ ಪಾಲಿಗೆ ಒಂದೂವರೆ ವರ್ಷವಾಗಿತ್ತು.
ಕೊರೋನಾ ಎಲ್ಲವನ್ನೂ ಅರ್ಧಕ್ಕೆ ಇಟ್ಟುಬಿಟ್ಟ ದಿನಗಳವು. ಗಡಿ ಈಚೆಗಿನ ಮನೆ, ಗಡಿ ಆಚೆಗಿನ ಕಾಲೇಜು. ಮನೆಯಲ್ಲಿ ಕಲಿತು ಪರೀಕ್ಷೆಗೆ ಮಾತ್ರ ಕಾಲೇಜಿಗೆ ಹೋದರೆ ಸಾಕು ಎಂದಿದ್ದರು. ಆದರೆ ಪರೀಕ್ಷೆಯೇ ಇರಲಿಲ್ಲವಲ್ಲ, ಪಾಸ್ ಅಂತು ಆದೆ. ಮತ್ತೆ ಬೆನ್ನತ್ತಲು ಪ್ರಾರಂಭಿಸಿತು ಮುಂದೇನು ಎಂಬ ಪ್ರಶ್ನೆ.
ಪಿಯುಸಿಯಲ್ಲಂತು ಮೂರೇ ಆಯ್ಕೆ ಇದ್ದದ್ದು, ಆದರೆ ಇಲ್ಲಿ ಎಲ್ಲ ಕಡೆಗೂ ದೋಣಿಗಳಿವೆ. ಯಾವ ದೋಣಿ ಮೇಲೆ ಕಾಲಿಡಲಿ ಎಂದು ಆಲೋಚನೆ ಮಾಡುತ್ತಲೇ ಡಿಗ್ರಿ ಇಸ್ ಗೋಲ್ಡನ್ ಲೈಫ್ ಮತ್ತೇನು ಡಿಗ್ರಿ ಮಾಡುವೆ ಎಂದು ಕಾಲೇಜಿನಲ್ಲಿ ಅಡ್ಮಿಷನ್‌ಗೆ ಹೋದೆ. ನಾಲ್ಕು ಕಡೆಗಳಲ್ಲೂ ಅವರಿಸಿಕೊಂಡಿದ್ದ ಕಟ್ಟಡ ಕಂಡು ಮೊದಲು ನೆನಪಾದದ್ದೇ ಬಾಲ್ಯದ ಶಾಲೆ. ಕೆಲವೇ ವರ್ಷಗಳಲ್ಲಿ ಜೀವನ ಎಷ್ಟೊಂದು ಬದಲಾಗಿದೆಯಲ್ಲ ಎಂದು. ಹೀಗೆ ಕಾಲೇಜು ಕ್ಯಾಂಪಸ್ ಸುತ್ತ ಕಣ್ಣು ಹಾಯಿಸಿದೆ.
ಮೊದಲು ಹತ್ತು ಮಂದಿಯೊಂದಿಗೆ ಬಾಲ್ಯದ ಶಾಲೆ, ಮುಂದೆ ಇಪ್ಪತ್ತು -ಮೂವತ್ತು ಜನರ ಜತೆ ಬೆಳೆದ ನಾನು, ಈಗ ತರಗತಿಯ ಐವತ್ತು -ಅರವತ್ತು ವಿದ್ಯಾರ್ಥಿಗಳ ಪೈಕಿ ನಾನೂ ಒಬ್ಬಳು. ಯಾರ ಪರಿಚಯವನ್ನೂ ನಾನು ಮಾಡಿಕೊಂಡಿರಲಿಲ್ಲ, ಪರಿಚಯ ಮಾಡಿಕೊಳ್ಳುವ ಮನಸ್ಸೂ ನನಗಿರಲಿಲ್ಲ. ಆದರೆ ಕಲಿಕೆ ಕೊಂಚ ಭಿನ್ನವಾಗಿದ್ದರಿಂದ ಬೆರೆಯುವಿಕೆ ಅಗತ್ಯವೇ ಆಗಿತ್ತು. ಹತ್ತು ವಿಭಿನ್ನ ಮನಸ್ಸುಗಳು. ನನ್ನ ಮೌನ ಯಾರಿಗೆಲ್ಲ ಉದಾಸೀನತೆಯನ್ನು ಕೊಟ್ಟಿದೆಯೋ ನನಗರಿಯದು, ಆದರೆ ಡಿಗ್ರಿ ಎಂಬ ಮೂರು ವರ್ಷ ನೆನಪಿನ ಬುತ್ತಿಯೊಂದಿಗೆ ಕಲಿಯಬೇಕಾದದ್ದನ್ನು ಕಲಿಸಿಕೊಟ್ಟಿದೆ. ಈಗ ಇದು ಕೂಡ ಮುಗಿಯಿತು, ಮತ್ತದೇ ಮುಂದೇನು ಪ್ರಶ್ನೆ?
ಪ್ರಶ್ನೆಯಂತೂ ಬೆನ್ನ ಹಿಂದೆ ಯಾವಾಗಲೂ ಇದ್ದೇ ಇರುತ್ತದೆ. ಈಗ ತಿಳಿದಿದ್ದೇನೆ ಬದುಕಿನಲ್ಲಿ ಪ್ರಶ್ನೆ, ಆ ಪ್ರಶ್ನೆಗೆ ಉತ್ತರ, ಇವೆರಡು ಇದ್ದರೆ ಬದುಕು ಸಾಗುವುದು ಎಂದು. ಮುಂದೇನು? ಎಂಬುದು ದಾರಿ ಹುಡುಕುತ್ತ ಹೋಗುವಂತದ್ದು.
-ಸುಮನಾ
ವಿವೇಕಾನಂದ ಮ.ವಿ.
(ಸ್ವಾಯತ್ತ ) ಕಾಲೇಜು ಪುತ್ತೂರು