Advertisement
ಅರೇ.. ವಿದ್ಯಾರ್ಥಿಗಳೆಲ್ಲರೂ ಇದ್ದಾರೆ, ಆದರೆ ಮೌನ ತಾಂಡವವಾಡುತ್ತಿದೆ. ಅಸಹನೀಯ ನೀರವತೆ. ಇರುವ ಅಷ್ಟೂ ವಿದ್ಯಾರ್ಥಿಗಳೂ ಎಲ್ಲೋ ಕಳೆದುಹೋಗಿದ್ದಾರೆ. ಹೆಚ್ಚಾ ಕಮ್ಮಿ ನಾಲ್ಕರಿಂದ ಐದು ಇಂಚಿನ ತೆರೆಯ ಒಳಗೆ. ಯಾವುದೋ ಒಬ್ಬ ವಿದ್ಯಾರ್ಥಿಗೆ ನಾನು ಕ್ಲಾಸ್‌ಗೆ ಬಂದಿರುವುದು ಗಮನಕ್ಕೆ ಬಂತು ಅವನು ಸರಿಯಾಗಿ ಕುಳಿತ… ಶ್… ಶ್… ಅಂದ. ಆ ಸದ್ದಿಗೆ ಎಲ್ಲರೂ ತಲೆ ಎತ್ತಿದರು, ಕೈಯಲ್ಲಿದ್ದಿದ್ದು ಡೆಸ್ಕ್ನೋಳಗೆ ಮರೆಯಾಯಿತು. ಎಲ್ಲರೂ ಎದ್ದು ನಿಂತರು. ಆದರೆ ಮುಖದಲ್ಲಿ ಅದೇನೋ ನಿರ್ಲಿಪ್ತತೆ. ಆ ಕ್ಷಣದಲ್ಲಿ ನನಗೆ ನೆನಪಾಗಿದ್ದು ನನ್ನ ಕಾಲೇಜಿನ ದಿನಗಳು. ಒಂದು ತರಗತಿಯಿಂದ ಇನ್ನೊಂದು ತರಗತಿಯ ನಡುವಿನ ಐದು ನಿಮಿಷದ ಬ್ರೇಕ್ ನಿಜವಾಗಿಯೂ ರಿಲೀಫ್ ತಂದುಕೊಡುವ ಕ್ಷಣವದು. ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಇನ್ನೊಂದು ವಿಷಯದ ಉಪನ್ಯಾಸಕ್ಕೆ ಅಣಿಯಾಗಲು ಅದೊಂದು ಟಾನಿಕ್ ಇದ್ದ ಹಾಗೆ.
Related Articles
Advertisement
ಅದಕ್ಕಿಂತಾ ಹೆಚ್ಚಾಗಿ ಹೆಚ್ಚಾ ಕಮ್ಮಿ ತರಗತಿಯಲ್ಲಿದ್ದ ಅಷ್ಟು ವಿದ್ಯಾರ್ಥಿಗಳೊಂದಿಗೆ ಸ್ನೇಹ ಇತ್ತು. ಪ್ರತಿಯೊಬ್ಬರ ಜತೆಯಲ್ಲೂ ಒಂದಲ್ಲಾ ಒಂದು ನೆನಪಿನ ಬುತ್ತಿ ಇಂದಿಗೂ ಇದೆ. ಈಗಿನ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಇದೆ. ಅದರೊಳಗೇ ಪರಸ್ಪರ ಸಂವಹನದ ಕುರಿತಂತೆ, ಮಾತಿನ, ಸ್ನೇಹದ ಹಾಗೂ ನಗುವಿನ ಕುರಿತಂತೆ ಅತ್ಯದ್ಭುತ ಸಂಶೋಧನಾ ಲೇಖನಗಳೇ ಇವೆ. ಆದರೆ ಕಳೆದು ಹೋಗಿರೊದು ಈ ಜಾಲದೊಳಗಿನ ಸಣ್ಣ ಗುಡಿಸಲಿನೊಳಗೆ. ಅದರೊಳಗೆ ಮಾತಿಲ್ಲ, ನಗುವಿಲ್ಲ, ಮನಸ್ಸು ಹಗುರಾಗಲು ಸಹಕಾರಿಯಾಗುವ ಕೋಪ, ತಾಪ, ಅಳು ಯಾವುದೂ ಇಲ್ಲ. ಎಲ್ಲವೂ ಏಕತಾನತೆ.
ಇಷ್ಟೊಂದು ಗಂಭೀರವಾಗಿರಬೇಡಿ, ನಿಮ್ಮೊಳಗಿನ ಮಕ್ಕಳ ಮನಸ್ಸನ್ನು ಕಳೆದುಬಿಡಬೇಡಿ, ಏನಾದರು ಮಾತನಾಡಿ, ನಕ್ಕು ಹಗುರಾಗಿ ಬಿಡಿ ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಳ್ಳುವ ನನ್ನಂತಾ ಉಪನ್ಯಾಸಕರ ಇಂದಿನ ದಿನಗಳಿಗೂ, ಸೈಲೆನ್ಸ್ ಪ್ಲೀಸ್ ಎನ್ನುತ್ತಿದ್ದ ನಮ್ಮ ಉಪನ್ಯಾಸಕರ ತಕರಾರಿಗೂ ಎಂತಹಾ ವ್ಯತ್ಯಾಸ. ನಮ್ಮದು ಮುಖಾಮುಖೀ ನೆಟ್ ವರ್ಕಿಂಗ್ ಇದ್ದರೆ ಈಗ ವರ್ಚುವಲ್‌ಗೆ ಕಣ್ಣು ನೆಟ್ ವರ್ಕಿಂಗ್. ಆದರೆ ಯಾವುದೋ ತಾಂತ್ರಿಕ ಸಲಕರಣೆಯನ್ನೇ ನೆಚ್ಚಿಕೊಂಡು ಮಾನವ ಸಹಜ ಮಾತು, ನಗು, ಕೋಪ, ಅಳು ಸಹಜವಾಗಿಯೇ ಹೊರಬರದಿದ್ದರೆ ಅದರಿಂದಾಗುವ ಅಪಾಯ ಅಷ್ಟಿಷ್ಟಲ್ಲ. ಅದಕ್ಕೆ ನಾನು ವಿದ್ಯಾರ್ಥಿಗಳಿಗೆ ಗದರೋದು ಬ್ರೇಕ್ ಸಂದರ್ಭದಲ್ಲಿ ನನಗೆ ನಿಮ್ಮ ತರಗತಿಯಿಂದ ಮಾತು, ನಗು, ಚರ್ಚೆ ಕೇಳಬೇಕು, ಅಸಹನೀಯ ಮೌನವಲ್ಲ.
ಒಂದು ಅಧ್ಯಯನದ ಪ್ರಕಾರ ವಿದ್ಯಾರ್ಥಿಗಳ ಮುಖಾಮುಖೀ ಸಂವಹನ ನಿಜಜೀವನದಲ್ಲಿ ಶೇ. 50%ರಷ್ಟು ಕಡಿಮೆಯಾಗಿದೆ. ಪರಿಣಾಮವಾಗಿ ಒಂಟಿತನ, ಖನ್ನತೆ, ಅಧ್ಯಯನದಲ್ಲಿ ನಿರಾಸಕ್ತಿ, ಏಕಾಗ್ರತೆಯ ಕೊರತೆ, ಸಂವಹನ ಕೌಶಲದಲ್ಲಿ ಸಮಸ್ಯೆ ಇತ್ಯಾದಿಗಳನ್ನು ಈ ಅಧ್ಯಯನದಲ್ಲಿ ಪಟ್ಟಿಮಾಡಲಾಗಿತ್ತು. ಸುಮಾರು 16 ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಈ ಅಧ್ಯಯನ ನಡೆಸಲಾಗಿತ್ತು.
ಮಾತು ಬೆಳ್ಳಿ ಮೌನ ಬಂಗಾರ ಎನ್ನುವುದು ಗಾದೆ ಮಾತು ಕೆಲವು ಸಂದರ್ಭದಲ್ಲಿ ಉಪಕಾರಿಯೇನೋ ನಿಜ. ಆದರೆ ನೀರಡಿಕೆ, ಆಹಾರ ಮತ್ತು ಶೌಚದಷ್ಟೇ ಮಹತ್ವವುಳ್ಳ ಮಾತನ್ನೇ ಮರೆತು ಇನ್ನೆಲ್ಲೋ ಕಳೆದುಹೋದರೆ ಅದು ತುಕ್ಕು ಹಿಡಿದ ಕಬ್ಬಿಣದಷ್ಟೇ ಅಪಾಯಕಾರಿ. ಪರಸ್ಪರ ಮಾತು ಮನವನ್ನು ಹಗುರವಾಗಿಸುತ್ತದೆ, ನಿರಾಳತೆ ತಂದೊಡುತ್ತದೆ, ನಕ್ಕಾಗ, ಅತ್ತಾಗ, ಕೋಪಿಸಿಕೊಂಡಾಗ ಬಿಡುಗಡೆಯಾಗುವ ಹಾರ್ಮೋನ್‌ಗಳು ಮನಸ್ಸು ಹಾಗೂ ದೇಹವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿ. ಹಾಗಾಗಿ ಈ ಡಿಜಿಟಲ್ ಯುಗದಲ್ಲಿ ಮಾತೇ ಬಂಗಾರ ಎಂದರೆ ತಪ್ಪಾಗಲಾರದು. ಅದಕ್ಕೆ ಮತ್ತೂಮ್ಮೆ ಹೇಳುವುದೇನೆಂದರೆ ಬಿಡುವಿನ ಸಂದರ್ಭದಲ್ಲಿ ಪಕ್ಕದಲ್ಲಿ ಯಾರಾದರೂ ಇದ್ದರೆ ಏನಾದರೂ ಮಾತಾಡಿ, ಹಗುರಾಗಿ.
-ಡಾ| ಗೀತಾ ಎ.ಜೆ.
ಸಹಾಯಕ ಪ್ರಾಧ್ಯಾಪಕಿ,
ಎಸ್‌ಡಿಎಂ, ಕಾಲೇಜು ಉಜಿರೆ