Advertisement

New Life: ಹೊಸ ಹುರುಪಿನಲ್ಲಿ ನವಜೀವನ ಆರಂಭಿಸಿ

10:58 AM Jun 01, 2024 | Team Udayavani |

ಪ್ರತಿ ಜೀವಿಗಳಲ್ಲೂ ಒಂದಲ್ಲ ಒಂದು ವಿಶೇಷ ಗುಣವಿದ್ದೆ ಇರುತ್ತದೆ. ಆ ವಿಶೇಷ ಗುಣವನ್ನು ಗುರುತಿಸುವ ಮನಸ್ಥಿತಿ, ಶಕ್ತಿ, ಸಾಮರ್ಥ್ಯ ನಮ್ಮಲ್ಲಿರಬೇಕು. ಅಂತಹ ಉದಾಹರಣೆಗಳಲ್ಲಿ ಈ ನಾಗಲಿಂಗ ಪುಷ್ಪ ಮತ್ತು ಜೇನುನೊಣದ ಚಿತ್ರಪಟ ವಿಶೇಷ ಅಂಶವೊಂದನ್ನು ತಿಳಿಸುತ್ತದೆ.

Advertisement

ಈ ಪುಷ್ಪ ತನ್ನದೇ ಆದ ವಿಶೇಷ ಸೌಂದರ್ಯ, ಸುವಾಸನೆಯೊಂದಿಗೆ ಮಕರಂಧವನ್ನು ಹೊಂದಿದೆ. ಆ ಸೌಂದರ್ಯ, ಸುವಾಸನೆ ಹಾಗೂ ಮಕರಂಧಕ್ಕೆ  ಆಕರ್ಷಣೆಗೊಂಡ ಸಾವಿರಾರು ಜೇನುನೊಣಗಳು ಹೂವಿನತ್ತ ಲಗ್ಗೆ  ಇಡುತ್ತವೆ. ಮಕರಂಧವನ್ನು ಹೀರಿದ ಆ ಜೇನುನೊಣಗಳು ಜೇನುಗೂಡನ್ನು ಕಟ್ಟಿ ಜೇನುತುಪ್ಪ ತಯಾರಿಸುತ್ತವೆ.

ಆ ಜೇನುನೊಣಗಳು ಏಕಭಾವದಿಂದ ಜೇನುಗೂಡಿನ ರೂಪದಲ್ಲಿ ತಮ್ಮ ಕುಟುಂಬವನ್ನು ರೂಪಿಸಿಕೊಂಡಿರುತ್ತವೆ. ಜೇನುತುಪ್ಪದ ಆಸೆಗಾಗಿ ಮನುಷ್ಯರು ತಮ್ಮ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡುವರೆಂಬ ಸಣ್ಣ ಅನುಮಾನವು ಅವುಗಳಿಗೆ ಇರುವುದಿಲ್ಲ. ಕಾರಣ ನಂಬಿಕೆಯೇ ಜೀವನ ಅಂತಾರಲ್ಲ ಹಾಗೆ. ಅದೇ ನಂಬಿಕೆ ಮೇಲೆಯೇ ಅಲ್ಲವೇ ಜೇನುನೊಣಗಳು ಮನುಷ್ಯರು ಅದೆಷ್ಟೇ ಸಾರಿ ಗೂಡು ಹಾಳು ಮಾಡಿದರೂ ಪುನಃ ಗೂಡು ನಿರ್ಮಿಸಿ, ಜೇನುತುಪ್ಪ ತಯಾರಿಸುವುದು ಅವುಗಳ ಕಾಯಕವನ್ನಾಗಿಸಿಕೊಂಡಿರುವುದು.

ಇನ್ನೂ ಹೂವಿನ ವಿಚಾರಕ್ಕೆ ಬರುವುದಾದರೆ ಮಕರಂದವನ್ನು ಕಳೆದುಕೊಂಡು ಹೂವು ಬಾಡಿದರೂ ಕೂಡ ತನ್ನ ಬಳ್ಳಿ, ಗಿಡ, ಮರಗಳಲ್ಲಿ ನಾಳೆಯೆಂಬ ಭವಿಷ್ಯದಲ್ಲಿ ಅರಳಲಿರುವ ತನ್ನ ಕುಟುಂಬದ ಸದಸ್ಯನಾದ ಮತ್ತೂಂದು ಹೂವಿನ ಸಂತೋಷ ಕಂಡು ತನ್ನ ಗೈರುಹಾಜರಿಯನ್ನು ಇತರ ಹೂವುಗಳು ತುಂಬುವರೆಂಬ ಸಾರ್ಥಕತೆಯನ್ನು ಹೊಂದುತ್ತದೆ.

ಇದೇ ಸಂದರ್ಭದಲ್ಲಿ ಮನುಷ್ಯರ ಸ್ಥಿತಿ ಊಹಿಸಿಕೊಂಡರೆ  ಆಕಾಶವೇ ಕಳಚಿ ಬಿತ್ತೇನೋ ಎಂಬ  ಮನೋಭಾವದಿಂದ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವುದು ಕಾಣುತ್ತಿದ್ದೇವೆ.  ಪ್ರತಿ ಮನುಷ್ಯನಲ್ಲೂ ಕೂಡ ಒಳ್ಳೆಯ ಗುಣಗಳು, ಧೈರ್ಯವು ಇದ್ದೇ ಇರುತ್ತದೆ.

Advertisement

ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಪರೋಪಕಾರವನ್ನು ಮರೆತು ಯಾಂತ್ರಿಕವಾಗಿ ಜೀವನ ಸವೆಸುತ್ತಾರೆ. ಅಂತಹವರಿಗೆ ಅಂತಸ್ತು, ಆಸ್ತಿ ಎಂಬ ತಮ್ಮದೇ ಆದ ಚೌಕಟ್ಟಿನಲ್ಲಿ ಬದುಕು ನಡೆಸುತ್ತಿರುತ್ತಾರೆ ಹಾಗಾಗಿ ಅವರ ಮನಸ್ಥಿತಿ ಕೂಡ ಸೀಮಿತ ಹಾಗೂ ಸಂಕುಚಿತವಾಗಿರುತ್ತದೆ. ಇದರಿಂದಲೇ ಚಿಕ್ಕ-ಪುಟ್ಟ ವಿಷಯಗಳಿಗೂ ಮನುಷ್ಯರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಾರೆ.

ಈ ಹೂವು ಮತ್ತು ಜೇನುನೊಣದ ಒಂದು ದೃಷ್ಟಾಂತದ ಮೂಲಕವಾದರೂ ಮನುಷ್ಯರು ಜೀವನದಲ್ಲಾಗುವ ಸಣ್ಣ ಸಣ್ಣ ಏರುಪೇರುಗಳಿಗೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳದೇ ಹೊಸ ಹುರುಪಿನಲ್ಲಿ ನವಜೀವನ ಆರಂಭಿಸುವಂತಾಬೇಕು ಹಾಗೂ ಮನುಷ್ಯರು ಪರೋಪಕಾರವನ್ನು ಮೈಗೂಡಿಸಿಕೊಳ್ಳುವ ಮೂಲಕ ಇನ್ನಾದರೂ ಬದುಕಿರುವಷ್ಟು ದಿನಗಳಲ್ಲಿ ಯಾವುದೇ  ಫಲಾಪೇಕ್ಷೆ ಬಯಸದೇ ಪರರಿಗೂ, ಪರಿಸರಕ್ಕೂ ಒಳಿತನ್ನು ಮಾಡುವಂತಾಗಬೇಕು…..

- ವಿದ್ಯಾ

ಹೊಸಮನಿ, ಶಿರಹಟ್ಟಿ ಗದಗ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next