ಪ್ರಕೃತಿಯ ಆರಾಧಕರು, ಪ್ರಕೃತಿ ಮಡಿಲಿನಲ್ಲಿ ಜೀವನ ನಡೆಸುವವರು. ಅದೆಷ್ಟು ಚಂದ ಮಲೆನಾಡು. ಚುಮು ಚುಮು ಚಳಿ, ಸುತ್ತಲೂ ಹಸುರು, ಆ ಮಳೆ, ಚಿಕ್ಕಮಗಳೂರಿನ ಕಾಫಿ ತೋಟಗಳು, ಬೆಟ್ಟ -ಗುಡ್ಡ, ಮೈಮನ ಸೆಳೆಯುವ ಜಲಪಾತಗಳು ನೋಡೋದೇ ಚಂದ.
ನಾನು ಮಲೆನಾಡಿನವಳಾಗಿರುವುದರಿಂದ ಮಲೆನಾಡನ್ನು ನನ್ನ ತವರು ಮನೆ ಎಂದೇ ಹೇಳಬಹುದು. ಶೃಂಗೇರಿ ಶಾರದಾಂಬೆ ನೆಲೆಸಿರುವ ಪುಣ್ಯಕ್ಷೇತ್ರ, ಜೋಗ ಜಲಪಾತದ ಮನಮೋಹಕ ದೃಶ್ಯ, ಮುಳ್ಳಯ್ಯನಗಿರಿ ಬೆಟ್ಟ, ತೀರ್ಥಹಳ್ಳಿಯಲ್ಲಿರುವ ಕುವೆಂಪುರವರ ಮನೆ, ಅಲ್ಲಿನ ಪರಿಸರ ನೀಡುವ ನೆಮ್ಮದಿ ಇವೆಲ್ಲವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.
ಮಲೆನಾಡಿನ ಆಚಾರ -ವಿಚಾರ, ಭಾಷೆ, ತಿಂಡಿ -ತಿನಸುಗಳು, ಸಂಸ್ಕೃತಿ ವೈವಿಧ್ಯಮಯವಾಗಿದೆ. ಏನಿವತ್ತು ತಿಂಡಿ ಎಂದು ಕೇಳಿದ ತತ್‌ಕ್ಷಣ ಕೇಳುವ ಒಂದೇ ಒಂದು ಪದ ಎಂದರೆ ಕಡುಬು. ಕಡುಬು ಮಲೆನಾಡಿಗರ ಮನೆಯಲ್ಲಿ ಮಾಡುವ ಪ್ರತಿನಿತ್ಯದ ತಿಂಡಿ. ಆನೆಗಳ ಹಾವಳಿ, ಮಳೆಗಾಲದಲ್ಲಿ ಕೀಟಲೆ ನೀಡುವ, ರಕ್ತ ಹೀರುವ ಜಿಗಣೆಗಳು. ನಾನು ಓದಲೆಂದು ಮಲೆನಾಡಿನಿಂದ ತುಳುನಾಡಿಗೆ ಬಂದಾಗ ನನ್ನ ಮನಸ್ಸು ಕೇಳಲೇ ಇಲ್ಲ ಮಲೆನಾಡಿಗೂ ಹಾಗೂ ಕರಾವಳಿಗೂ ತುಂಬಾ ವ್ಯತ್ಯಾಸಗಳಿವೆ.
ಹವಮಾನ, ಸಂಸ್ಕೃತಿ, ಭಾಷೆ, ಆಚಾರ -ವಿಚಾರ, ಮಲೆನಾಡಿನ ಹಸುರು, ಚಳಿ, ಹವಾಮಾನ ಎಲ್ಲವನ್ನು ಕರಾವಳಿಯಲ್ಲೂ ಹುಡುಕಲು ಪ್ರಯತ್ನಿಸಿದೆ ಆದರೆ ಸಿಗಲೇ ಇಲ್ಲ
ಬಿ. ಶರಣ್ಯ ಜೈನ್ ಜಯಪುರ