Advertisement

Mother Tongue: ಮಾತೃಭಾಷೆಯ ಮೇಲೆ ಇರಲಿ ಗೌರವ

01:02 PM Jun 24, 2024 | Team Udayavani |

“ಸಾಯುತಿದೆ ನಿಮ್ಮನುಡಿ, ಓ

Advertisement

ಕನ್ನಡದ ಕಂದರಿರ,

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ

ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು

ದೇವನುಡಿಯೆಂದೊಂದು ಹತ್ತಿ ಜಗ್ಗಿ,

Advertisement

ನಿರನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ

ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ’

ಕನ್ನಡ ಪರ ಹೋರಾಟಗಾರರು ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಹಿಂದಿ, ಇಂಗ್ಲಿಷಿನ ಬೋರ್ಡು ಕಿತ್ತು ಬೀದಿಗೆಸೆದು ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರಂತೆ, ಪರಭಾಷಿಕರಿಗೆ ಕನ್ನಡ ಕಲಿಯಬೇಕೆಂಬ ನೀತಿ ಪಾಠ ಹೇಳಿದರಂತೆ, ಇದೆಲ್ಲ ಕೇಳಿ ಹೌದೌದು ಕರ್ನಾಟಕದ ಭಾಷೆ ಕನ್ನಡ.

ಎಲ್ಲಿಂದಲೋ ಇಲ್ಲಿ ಬಂದ ಮೇಲೆ ಇಲ್ಲಿನ ಭಾಷೆ ಕಲಿಯಲೇ ಬೇಕೆನ್ನುವವರ ಮನೆ ಮಕ್ಕಳು ಮಾತ್ರ ಆಂಗ್ಲಮಾಧ್ಯಮದ ವಿದ್ಯಾರ್ಥಿಗಳು! ಅವರು ಕನ್ನಡ ಕಲಿಯಲಿ, ಇವರು ಕನ್ನಡ ಕಲಿಯಲಿ ಎಂದು ಕೈಯನ್ನು ದೂರದ ವ್ಯಕ್ತಿಗಳತ್ತ ಬೊಟ್ಟು ಮಾಡುತ್ತಾ ತಮ್ಮ ಕಾಲಡಿಯಲ್ಲಿ ಮಾತೃ ಭಾಷೆಯ ಮಾರಣ ಹೋಮ ನಡೆಸುವವರ ಮಧ್ಯೆ ದಿನೇ ದಿನೆ ಬಾಗಿಲು ಹಾಕುತ್ತಿರುವ ಸರಕಾರಿ ಶಾಲೆಗಳ ಸಂಖ್ಯೆ ಕಂಡರೆ  ಕನ್ನಡದ ಉಳಿವಿನ ಬಗ್ಗೆ ನಿಜಕ್ಕೂ ಭಯವಾಗುತ್ತದೆ!

ನನ್ನ ಊರಿನ ಶಾಲೆ ಬರಿ ಶಾಲೆಯಲ್ಲ, ಒಂದು ಊರಿನ ಶಾಲೆ, ಆ ಊರಿನ ಅಭಿವೃದ್ಧಿಯ ಅಡಿಪಾಯವೇ ಸರಿ. ಅದರದ್ದೇ ಬಾಗಿಲು ಹಾಕಿಸಿ ತಮ್ಮ ಮಕ್ಕಳನ್ನು ಆಂಗ್ಲಮಾದ್ಯಕ್ಕೆ ಸೇರಿಸುವವರು ತಮ್ಮ ಊರಿನ ಭವಿಷ್ಯವನ್ನು ಬುಡಮೇಲು ಮಾಡುತ್ತಿರುವುದು ಅವರಿಗೆ ಇಂದಿಗೂ ಅರ್ಥವಾಗದ ವಿಷಯ.

ಸರಕಾರಿ ಶಾಲೆಗಳು ಬರಿ ಪಠ್ಯವನ್ನಷ್ಟೇ ಕಲಿಸುವುದು ಮಾತ್ರವಲ್ಲ, ಬದುಕಿನ ಶಿಕ್ಷಣವನ್ನೂ ನೀಡುತ್ತವೆ. ಬಸ್ಸು ಹತ್ತಿ ಶಾಲೆ ಸೇರಿ ಯಾರೋ ಗುಡಿಸಿ ಒರೆಸಿಟ್ಟ ತರಗತಿಯೊಳಗೆ ಕೂತು ಇಂಟರ್ಲಾಕ್‌ ಹಾಕಿದ ಗ್ರೌಂಡಿನಲ್ಲಿ ಆಟವಾಡಿ ಮನೆ ಸೇರಿ, ಅಪ್ಪ ಅಮ್ಮನ ಬಳಿ ಎರಡಕ್ಷರ ಇಂಗ್ಲಿಷ್‌ ಮಾತನಾಡಿದಾಗ ಹಿಗ್ಗುವ ಹೆತ್ತವರಿಗೆ ತಮ್ಮ ಬಾಲ್ಯದಲ್ಲಿ ಸರಕಾರಿ ಶಾಲೆಯ ಮಣ್ಣಿನ ಕಣದಲ್ಲಿ ಎದ್ದು ಬಿದ್ದು ಗೆದ್ದು ಸೋತು ಹಿರಿ ಹಿಗ್ಗಿ ಗಟ್ಟಿಯಾದ ತಮ್ಮ ದೇಹದ ಗುರುತಿಲ್ಲ.

ತಮ್ಮ ತರಗತಿ ಶೌಚಾಲಯಗಳನ್ನು ತಾವೇ ಸ್ವತ್ಛಗೊಳಿಸುವಾಗ ನಾವು ಕಲಿತ ಸ್ವತ್ಛತೆಯ ಪಾಠ ಇಂದು  ತರಗತಿಯೊಳಗೆ ಸ್ಕ್ರೀನ್‌ ಮೇಲೆ ಯಾವ ಕಸ ಎಲ್ಲಿಗೆಂದು ನೋಡಿ ಕಲಿಯಲು ತಮ್ಮ ಮಕ್ಕಳಿಂದ  ಸಾಧ್ಯವೇ? ಅದೂ ಗೊತ್ತಿಲ್ಲ. ಹಾರೆ ಹಿಡಿದು ತಮ್ಮ ಶಾಲೆಯಲ್ಲಿ ತರಕಾರಿ ನೆಟ್ಟು ಹೂವನ್ನು ಬೆಳೆಸುತಿದ್ದವರಿಂದು ತಮ್ಮ ಮಕ್ಕಳು ಅಮ್ಮಾ, ಭತ್ತ ಯಾವ ಮರದಲ್ಲಿ ಬೆಳೆಯುತ್ತದೆಂಬ ಪೆದ್ದು ತನದ ಪ್ರಶ್ನೆ ಬಗ್ಗೆಯೂ  ಹೆಮ್ಮೆ ಪಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಇಂಗ್ಲಿಷಿನವರ ದಾಸ್ಯ ದೇಶ ಬಿಟ್ಟಿತೇ ಹೊರತು ಮನಸ್ಸುಗಳನ್ನಲ್ಲ! ಇಂಗ್ಲಿಷ್‌ ಕಲಿತವ ಬುದ್ಧಿವಂತನೆಂಬ ಅದ್ಯಾವುದೋ ಹುಚ್ಚುತನ ಇನ್ನೂ ಹೆಚ್ಚಾಗುತ್ತಲೇ ಇದೆ.

ಇವತ್ತು ಆಂಗ್ಲ ಮಾಧ್ಯಮಗಳಲ್ಲಿ ಎ ಫಾರ್‌ ಆಪಲ್‌ ಅನ್ನುವ ಮಗು, ಹಾರೆ ಹಿಡಿದು ಯಾವುದೋ ತರಕಾರಿ ಬೆಳೆವ ಸಾಮರ್ಥಯ ಪಡೆಯಬಲ್ಲದೇ? ಆಂಗ್ಲ ಮಾಧ್ಯಮಗಳ ಆಸೆಗೆ ಬಿದ್ದು ಅದ್ಯಾಕೆ ನಾವು ಕಲಿತ ಶಾಲೆಗೆ ಬೀಗ ಹಾಕುವ ಬಯಕೆಯಲ್ಲಿದ್ದೇವೆ? ಇಂದಿಗೆ ನಾವು ನೀವು ಯಾವ ಮಟ್ಟದಲ್ಲಿದ್ದರೂ ನಾವು ಕಲಿತ ಶಾಲೆಯ ಪಾಲು ಅದರಲ್ಲಿದೆ ತಾನೆ? ಅದರಿಂದ ನಮ್ಮ ಮಕ್ಕಳನ್ಯಾಕೆ ವಂಚಿತರಾಗಿಸುವ ಬಯಕೆ?

ಯಾವುದೋ ನಮ್ಮದಲ್ಲದ ಭಾಷೆ ಕಲಿಕೆಗಿರಲಿ, ಮಕ್ಕಳದನ್ನು ಕಲಿಯಲಿ, ಆದರೆ ಮಾತೃಭಾಷೆಯಲ್ಲೇ ಬದುಕು ನಡೆದರಷ್ಟೇ ಮಾತೃದೇವೋ ಭವ, ಪಿತೃದೇವೋ ಭವದ ಸಂಸ್ಕೃತಿ ನಮ್ಮ ದಾಗಿಯೇ ಉಳಿಯುತ್ತದೆ. ಇಲ್ಲವೇ ಹೆತ್ತವರು ಅನಾಥಾಶ್ರಮಕ್ಕೆ, ಮಕ್ಕಳು ಪಬ್ಬು ಬಾರಿಗೆ! ಹೆತ್ತವರ ಕಷ್ಟಗಳು ಸರಕಾರಿ ಶಾಲೆಯ ಮಕ್ಕಳಿಗೆ ಗೊತ್ತೇ ಹೊರತು ಸಾಲ ಸೂಲ ಮಾಡಿ ಬೂಟು ಹಾಕಿ  ನೀಟಾದ ತರಗತಿಯಲ್ಲಿ ಕೂತು ಬಂದ ಮಕ್ಕಳಿಗಲ್ಲ, ಮುಂದೊಮ್ಮೆ ತಮ್ಮ ಶಾಲೆಯ ಅಂತಸ್ತಿನ ಮುಂದೆ ಮಕ್ಕಳಿಗೆ ಅಪ್ಪ ಅಮ್ಮನ್ನನ್ನ ಇನ್ನೊಬ್ಬರಿಗೆ ಪರಿಚಯಿಸಲು ನಾಚಿಕೆ ಪಟ್ಟರೂ ಆಶ್ಚರ್ಯವಿಲ್ಲ. ಸರಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಕಲಿಸೋದಿಲ್ಲ, ಮಕ್ಕಳು ಬದುಕಿನಲ್ಲಿ ಯಶಸ್ಸುಗಳಿಸಲಾರರು ಎಂಬ ಮೂಢತೆಯೂ ಬೇಡ. ಅದೆಷ್ಟೋ ಸಾಧಕರು ನಮ್ಮ ನಡುವೆಯೇ ಕನ್ನಡ ಮಾಧ್ಯಮದಲ್ಲೇ ಕಲಿತು ಸಾಧಿಸಿ ಮಾದರಿಯಾಗಿದ್ದಾರೆ. ಅವರೆಲ್ಲ ಕನ್ನಡ ಮಾಧ್ಯಮದಲ್ಲೇ ಓದಿ ಯಶಸ್ಸುಗಳಿಸಿದ ಮೇಲೆ ನಿಮ್ಮ ಮಕ್ಕಳಿಗ್ಯಾಕೆ ಅದು ಸಾಧ್ಯವಿಲ್ಲ??

ದೇವಿಪ್ರಸಾದ ಶೆಟ್ಟಿ

ಶಂಕರನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next