Advertisement

UV Fusion: ನುಡಿಯಲ್ಲಿ ಕೊಂಕುತನ ಬೇಡ

06:01 PM Jan 14, 2025 | Team Udayavani |

ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಹೌದೌದ ಎನಬೇಕು ಎಂದು ಬಸವಣ್ಣನವರು ನುಡಿಯ ಬಗ್ಗೆ ಸೊಗಸಾಗಿ ತಿಳಿಸುತ್ತಾರೆ. ನುಡಿಯು ಕೇಳುಗರಿಗೆ ಅನುಕ್ಷಣ ಸಂತಸವನ್ನು ತರಬೇಕೆ ಹೊರತು ಕರ್ಕಶತೆಯನ್ನಲ್ಲ. ನುಡಿಯಲ್ಲಿ ವ್ಯಂಗ್ಯ ನುಡಿಯೂ ಇದೆ ಆದರೆ ಆ ನುಡಿಯು ತರವಲ್ಲ. ಇಂತಹ ನುಡಿಯಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಬರಬಹುದು.

Advertisement

ಕೆಲವೊಬ್ಬರ ನುಡಿ ಹೇಗಿರುತ್ತದೆಂದರೆ ಅವರ ನುಡಿಯಿಂದಲೇ ಕಲಹಗಳು ಸೃಷ್ಟಿಯಾಗುತ್ತವೆ. ‘ನುಡಿಯಿಂದಲೇ ನಡೆಯನ್ನು ಅರಿಯಬೇಕು’ ಎಂಬ ಗಾದೆಯಿದೆ. ಹಲವರಿಗೆ ಇದು ರೂಢಿಯಾಗಿದ್ದು ಅವರ ನುಡಿ ವ್ಯಂಗ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಅಸೂಯೆ ಭಾವ ಮೂಡಿದಾಗ ಅಥವಾ ನ್ಯೂನತೆಯನ್ನು ಕಂಡಾಗ ವ್ಯಂಗ್ಯ ನುಡಿಗಳು ಉದ್ಭವಿಸುತ್ತವೆ.

ಕೊಂಕುನುಡಿಗಳಿಂದ ಏನೇನೋ ಆಗಬಹುದು, ಮನಸ್ಸಿನಲ್ಲಿ ಖನ್ನತೆ ಮೂಡಬಹುದು, ಸ್ನೇಹ ಒಡೆಯಬಹುದು, ಪ್ರೀತಿಯು ಮುರಿಯಬಹುದು, ಸಾವು ಕೂಡ ಸಂಭವಿಸಬಹುದು. ನಾವಾಡುವ ಮಾತು ಖುಷಿ ಕೊಡಬೇಕೆ ಹೊರತು ದುಃಖವನ್ನಲ್ಲ.

ಇರುವಾಗ ವ್ಯಂಗ್ಯ ನುಡಿಯಾಡುತ್ತ, ಪರರನ್ನು ಛೇಡಿಸುತ್ತ, ಜೀವನವನ್ನು ಕಳೆಯುವ ಮನುಜರೇ ಹೆಚ್ಚು. ಇದು ದುರುಳತನವನ್ನು ತೋರುತ್ತದೆ ಹೊರತು ಉದಾತ್ತತೆಯನ್ನಲ್ಲ. ನುಡಿಯಲ್ಲಿ ವ್ಯಂಗ್ಯತನ ಪ್ರತಿಕ್ಷಣ ಮಾನಸಿಕ ಸ್ಥಿತಿಯನ್ನು ಕುಗ್ಗಿಸಿ ಅಧೋಮಟ್ಟಕ್ಕೆ ಒಯ್ಯುತ್ತದೆ. ಹೀಗಾದಾಗ ಆ ವಾತಾವರಣ ನಿತ್ಯವೂ ನರಕದಂತೆ ಕಾಣುತ್ತದೆ. ಉದಾಹರಣೆಗೆ ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಗಾಂಧಿ’ ಎಂಬ ಕಥೆಯಲ್ಲಿ ಗಾಂಧಿ ಎಂಬ ಹುಡುಗನು ನಗೆಪಾಟಲಿಗೆ ಈಡಾಗಿ ಸಾವನ್ನಪ್ಪುತ್ತಾನೆ. ಕಾರಣ ವೈದ್ಯರಾದವರು ರೋಗಿಯನ್ನು ಹಾಗೂ ರೋಗದ ಲಕ್ಷಣ ನೋಡಬೇಕೆ ಹೊರತು ಹೆಸರನ್ನಲ್ಲ. ಈ ಕಥೆಯಲ್ಲಿ ರೋಗಿಯು ಎಲ್ಲರ ಕೊಂಕುನುಡಿಗಳಿಗೆ ಬಲಿಯಾಗಿ ಸಾಯುವ ಹೃದಯವಿದ್ರಾವಕ ಘಟನೆಯಿದೆ.

ಮನಸ್ಸನ್ನು ಘಾಸಿಗೊಳಿಸುವ ಕೊಂಕುನುಡಿ ಆಡುವುದರಿಂದ ವಿಷಮ ವಾತಾವರಣ ಸೃಷ್ಟಿಯಾಗುವುದೇ ಹೊರತು ಸುಖದ ವಾತಾವರಣವಂತೂ ಅಲ್ಲ. ಈ ಕೊಂಕುನುಡಿಯಿಂದ ಬರುವುದಾದರೂ ಏನು? ಆಸ್ತಿಯೆ? ಐಶ್ವರ್ಯವೆ? ಹಣವೇ? ಭೂಮಿಯೇ? ಏನೂ ಇಲ್ಲವೆಂದ ಮೇಲೆ ಪರರ ಮನನೋಯಿಸಿ ನರಕದಲ್ಲಿ ತೊಳಲಿ ಬಳಲಿ ಕೊನೆಗೆ ಪಶ್ಚಾತ್ತಾಪದಿಂದ ನೊಂದುಕೊಂಡು ನಾನು ಹಾಗೆ ಮಾತನಾಡಬಾರದಿತ್ತು ಎಂದು ದುಃಖೀಸುವ ಬದಲು ಪ್ರೀತಿಯ ನುಡಿಯಾಡಿ ಮನವಗೆಲ್ಲುವ ಕಾರ್ಯವನ್ನು ಮಾಡೋಣ.

Advertisement

ಕೊಂಕುನುಡಿಯಿಂದ ಮನುಷ್ಯ ದೊಡ್ಡವನಾಗುವುದಿಲ್ಲ, ದಡ್ಡನಾಗುತ್ತಾನೆ ಎಂಬ ನುಡಿಯನ್ನು ನೆನಪಿಸುತ್ತ ಇರುವಷ್ಟು ದಿನ ಹಿತನುಡಿಯ ಆಡುತ್ತ ಬದುಕೋಣ.

– ಶಂಕರಾನಂದ ಹೆಬ್ಟಾಳ

Advertisement

Udayavani is now on Telegram. Click here to join our channel and stay updated with the latest news.