ಅಲ್ಲೊಂದೆಡೆ ಮಳೆಯಾಗಿ, ಇನ್ನೊಂದೆಡೆ ಅತಿ ಶಾಖವಾಗಿ, ಮನಸಿನಲ್ಲಿ ಗೊಂದಲವಿದ್ದರೂ ಸಂಭ್ರಮದಿಂದ ದೀಪ ಹಚ್ಚಿ ಜೀವನದ ಬೆಳಕನ್ನು ನಿಮ್ಮದಾಗಿಸಿಕೊಳ್ಳಿ. ಈ ಹಬ್ಬ ಬೆಳಕಿನೊಂದಿಗೆ ಸಂತೋಷವನ್ನು ಹರಡಲಿ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!
ಒಂದು ಹಣತೆಯಿಂದ ಇನ್ನೊಂದು ಹಣತೆ ಹಚ್ಚುವ ವಿಧಾನವೇ ಎಷ್ಟು ಸೊಗಸಲ್ಲವೇ. ಒಬ್ಬರ ಬಾಳನ್ನು ಇನ್ನೊಬ್ಬರು ಬೆಳಗುವಂತೆ. ಜೀವನ ಎಷ್ಟೇ ಕಷ್ಟವೆನಿಸಿದರು ಹಬ್ಬ ಬಂದಾಗ ಎಲ್ಲವನ್ನೂ ಮರೆತು ಸಂಭ್ರಮದಿಂದ ಆಚರಿಸುತ್ತೇವೆ ಅದಕ್ಕೆ ಅಲ್ವೇ ಹಿರಿಯರು ಹಬ್ಬ – ಹರಿ ದಿನಗಳನ್ನು ತಿಂಗಳಿಗೊಮ್ಮೆಯಾದರು ಇಟ್ಟಿರೋದು.
ಪ್ರತಿ ಹಬ್ಬದ ಹಿಂದೆ ಪುರಾಣ ಕಥೆಗಳು ಇದ್ದೆ ಇರುತ್ತವೆ ನಾವು ಕೇಳಿರುವ ಹಾಗೆ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೇ ದೀಪಾವಳಿ ಆಚರಣೆ. ಒಂದೊಂದು ದಿನಕ್ಕೂ ಅರ್ಥವಿದೆ, ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ನರಕ ಚತುರ್ದಶಿ.
ಮರುದಿನ ಅಮವಾಸ್ಯೆ ಅನಂತರ ಬಲಿಪಾಡ್ಯಮಿ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೆಟ್ಟತನದ ಮೇಲೆ ವಿಜಯವನ್ನು ಆಚರಿಸಲಾಗುತ್ತದೆ ಹಾಗೂ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ.
ಹಬ್ಬದ ಸಂಭ್ರಮ ಸಡಗರ ನಿಮ್ಮ ಮನೆಯಲ್ಲಿ ಹೇಗಿರುತ್ತೆ? ನಮ್ಮ ಮನೆಯಲ್ಲಂತೂ ದೀಪಗಳದ್ದೇ ಹಾವಳಿ, ದೀಪಾವಳಿ ಹಬ್ಬದ ದಿನಕ್ಕಿಂತ ಹಿಂದಿನ ದಿನವೇ ಹೆಚ್ಚು ಚಂದ! ಮನೆಗೆ ಬೇಕಿರುವ ಎಲ್ಲಾ ಸಾಮಗ್ರಿಗಳನ್ನು ಪಟ್ಟಿ ಮಾಡಿ ಅಪ್ಪ ದಿನಸಿ ಅಂಗಡಿಗೆ ಹೋಗಿ ಬರುತ್ತಾರೆ ಇನ್ನೊಂದೆಡೆ ಮಕ್ಕಳೆಲ್ಲ ಪಟಾಕಿ ಬಾಕ್ಸ್‌ಗಾಗಿ ಕಾಯುತಿರುತ್ತೇವೆ ಬರುತ್ತಾ ಅಪ್ಪ ಇದ್ದಷ್ಟು ಹಣದಲ್ಲೆ ಒಂದಷ್ಟು ಸುರಸುರ ಬತ್ತಿ, ಭೂಚತ್ರ, ಹೂಕುಂದ ಕೆಲವು ಹಸುರು ನೀಲಿ ಬಣ್ಣದ ಸಿಡಿಯುವ ಪಟಾಕಿಗಳನ್ನು ತಂದಿರುತ್ತಾರೆ. ಅಷ್ಟನ್ನೇ ಬೀದಿಯಲ್ಲಿವ ಸ್ನೇಹಿತರಿಗೆ ತೋರಿಸುತ್ತಾ ಯಾರ ಬಾಕ್ಸ°ಲ್ಲಿ ಎಷ್ಟಿದೆ? ಎಂದು ಲೆಕ್ಕ ಹಾಕುತ್ತೇವೆ. ಅಷ್ಟರಲ್ಲಿ ಅಮ್ಮ ಮನೆಯೊಳಗಿಂದ ಪಟಾಕಿ ನಾಳೆಗೆ ಇವತ್ತಿಗಲ್ಲ! ಎಂದು ಗದರುತ್ತಾಳೆ. ಮರುದಿನ ಎದ್ದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು, ಕೈ ತುಂಬ ಗಲ ಗಲ ಬಳೆ ತೊಟ್ಟು ಮನೆಯಲ್ಲ ಓಡಾಡುವುದೇ ಸಂಭ್ರಮ.
ಅಮ್ಮ ಅಡುಗೆ ಮನೆಯಲ್ಲಿ ಸಿಹಿ ಹೋಳಿಗೆ ಮಾಡುತ್ತಿದ್ದಾರೆ, ಅಪ್ಪ ಮಾವಿನ ತೋರಣ ಕಟ್ಟುತ್ತಿರುತ್ತಾರೆ. ಅಜ್ಜಿ ಎಲ್ಲ ಸರಿ ಇದೀಯ ಇಲ್ವಾ ನೋಡ್ತಾ ಇರ್ತಾರೆ, ನಾವು ಊಟ ಮಾಡಿ ರಾತ್ರಿಗಾಗಿ ಕಾಯ್ತಾ ಇರ್ತೀವಿ. ಸಂಜೆ ಮುಗಿದು ರಾತ್ರಿಯಾದ ಕೂಡಲೇ ಮನೆಯ ಅಂಗಳದಿಂದ ಹಿಡಿದು ದೇವರ ಕೋಣೆಯ ವರೆಗೂ ಬೆಳಕಿನ ಸಂಭ್ರಮ, ಹೆಜ್ಜೆ ಹೆಜ್ಜೆಗೂ ಸಿಗುವ ದೀಪಗಳು ಮುಂದಿನ ಜೀವನದ ಬೆಳಕನ್ನು ಸೂಚಿಸುತ್ತಿರುತ್ತವೆ. ಇಲ್ಲೊಂದೆಡೆ ಮಕ್ಕಳೆಲ್ಲಾ ಪಟಾಕಿ ಬಾಕ್ಸ್ ತಗೊಂಡು ಓಡಿಬಿಡುತ್ತಾರೆ, ಬೀದಿಯಲ್ಲಾ ಹಬ್ಬದ ಸಂಭ್ರಮ. 3 ದಿನದ ದೀಪಾವಳಿಯಲ್ಲಿ ಒಂದು ದಿನವಾದರೂ ದೇವಸ್ಥಾನಕ್ಕೆ ಹೋಗಿ ಬರದಿದ್ದರೆ ಮನೆಯವರಿಗೆ ಸಮಾಧಾನವಿಲ್ಲ. ಇಷ್ಟೆಲ್ಲಾ ಹಬ್ಬದ ನೆನಪು ಬಾಲ್ಯದಿಂದ ಇಲ್ಲಿಯವರೆಗೂ ಅಚ್ಚುಳಿದು ಬಿಟ್ಟಿದೆ. ಜೀವನ ಎಂಬ ಜಂಜಾಟದಲ್ಲಿ ಎಷ್ಟೋ ವಿಷಯಗಳನ್ನು ಕೂಡ ಲೆಕ್ಕಿಸದೆ ಜೀವನದ ಬಗ್ಗೆ ಕಂಪ್ಲೆಂಟ್ ಮಾಡ್ತಾ ಬದುಕುವುದು ಎಷ್ಟು ಸರಿ! ಇಷ್ಟೆಲ್ಲಾ ಸೊಗಸಾದ ಹಬ್ಬವನ್ನು ದಿವಾಳಿ ಎಂದು ಹೇಳಿ ದೀಪದ ಹಸ್ತಿತ್ವವನ್ನು ಮರೆಮಾಡುವುದು ಖಂಡಿತ ಸರಿಯಿಲ್ಲ. ಅದಕ್ಕೆ ಒಟ್ಟಿಗೆ ಎಲ್ಲರೂ ಹೇಳ್ಳೋಣ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
-ವರ್ಷಾ ಟಿ.ಎಂ., ಎಟಿಎಂಇ ಎಂಜಿನಿಯರಿಂಗ್ ಕಾಲೇಜು, ಮೈಸೂರು