ದೀಪಾವಳಿ ಹಬ್ಬ ಎಂದ ಕೂಡಲೆ ನಮ್ಮ ಬಾಲ್ಯ ದಿನಗಳು ಮತ್ತೆ ಮರುಕಳಿಸಬಾರದೇ ಎಂದು ಅನಿಸುತ್ತದೆ. ಆಗ ಹಬ್ಬವೆಂದು ಬಂದು ಬಳಗ ಒಂದೆಡೆ ಸೇರುವುದೇ ಬಹಳ ಖುಷಿ ಎನ್ನಬಹುದು. ನಾವು ಮಕ್ಕಳಿದ್ದಾಗ ಪಟಾಕಿಯನ್ನು ರಾತ್ರಿವರೆಗೂ ಕಾದು ಬಿಡುವ ಪ್ರಮೇಯ ಬಹಳ ಕಮ್ಮಿ. ಬೆಳಗ್ಗೆಯೇ ಪಟಾಕಿ ಹೊತ್ತಿಸಿದರೆ ರಾತ್ರಿ ತನಕ ಕಾಯುವಂತೆ ಮನೆ ಹಿರಿಯರ ಸಲಹೆ ಪಾಲಿಸಲೇ ಬೇಕಿತ್ತು. ದೀಪಾವಳಿ ಹಬ್ಬಕ್ಕೆ ಮೂರು ನಾಲ್ಕು ಬಾಕ್ಸ್ ಪಟಾಕಿ ಹೊಡೆದರು ನಮಗೆ ಸಮಧಾನವೇ ಆಗುತ್ತಿರಲಿಲ್ಲ. ಅದರಲ್ಲಿ ಬೇರೆ ತುಳಸಿ ಪೂಜೆಗೂ ಪಟಾಕಿ ಉಳಿಸಿಡುವಂತೆ ಬರುವ ಸಲಹೆ ಕೂಡ ಪಾಲಿಸಬೇಕಿತ್ತು. ಈಗ ಆ ಉತ್ಸಾಹದ ದಿನಗಳು ಮರೆಯಾಗಿವೆ.
ಹಿಂದೆಲ್ಲ ಪಟಾಕಿ ಸಿಡಿಸುವ ಬರದಲ್ಲಿ ನಮ್ಮ ಪ್ರಕೃತಿ ನಾವೇ ಹಾಳು ಗೆಡವುತ್ತಿದ್ದೇೆವೆ ಎಂಬ ಪರಿವೆ ನಮಗಿರಲಿಲ್ಲ ಆದರೆ ಈಗ ಹಸುರು ಪಟಾಕಿಗೆ ಆಧ್ಯತೆ ನೀಡುವ ಕಾಲ ಬಂದಿದೆ. ಹಬ್ಬದ ಆಚರಣೆಯ ಹಿಂದಿನ ಮಹತ್ವ ಅರಿತಷ್ಟು ಅವುಗಳಿಗೆ ನಾವು ನೀಡುವ ಪ್ರಾಮುಖ್ಯತೆ ಕೂಡ ಹೆಚ್ಚಾಗುತ್ತದೆ.
ಹಬ್ಬದ ಮೊದಲ ದಿನ ಮಹಾಕಾಳಿ ನರಕಾಸುರನನನ್ನು ಕೊಂದ ದಿನ ಎಂದು ಹೇಳುತ್ತಾರೆ. ಈ ದಿನ ಉತ್ತರ ಭಾರತದಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ದೀಪಗಳ ಹಣತೆ ಬೆಳಗಲಾಗುವುದು. ಲಕ್ಷ್ಮೀ ಪೂಜೆ, ಅಭ್ಯುಂಜನ ಸ್ನಾನ, ಬಲಿಪಾಡ್ಯಮಿ ಎಲ್ಲವನ್ನು ಕೂಡ ಆಚರಿಸಲಾಗುವುದು. ಇನ್ನು ನಮ್ಮ ಊರಾದ ಹೊಸ ಉಂಡವಾಡಿಯಲ್ಲಿ ಹಬ್ಬವನ್ನು ಆಚರಣೆ ಮಾಡುವಾಗ ಸ್ವತ್ಛತೆಗೂ ಆಧ್ಯತೆ ನೀಡುತ್ತೇವೆ. ರಸ್ತೆಯಲ್ಲೆ ಸ್ವತ್ಛ ಗೊಳಿಸಿ ನೀರೆರಚಿ ರಂಗೋಲಿ ಬಿಟ್ಟು ಸಂಭ್ರಮದ ಮೆರವಣಿಗೆಗೆ ಸಿದ್ಧತೆ ಮಾಡುತ್ತೇವೆ. ಈ ಮೂಲಕ ಬಸವಣ್ಣನ ಆಗಮನ ಊರಿಗಾಯ್ತು ಎಂಬ ನಂಬಿಕೆಯೂ ಇದೆ. ಮೂರು ದಿನಗಳ ರಾತ್ರಿ ಸಮಯ ಈ ಆಚರಣೆ ಇರಲಿದ್ದು ಅನೇಕ ಜನರು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ.
-ಕಿರಣ್ ಪಿ. ಕೌಶಿಕ್, ಮೈಸೂರು