Advertisement

UV Fusion: ಸಂತಸದ ಬದುಕಿಗಿರಲಿ ಕೃತಜ್ಞತೆಯ ಮನಸು

07:27 AM Jun 06, 2024 | Team Udayavani |

ಗರ್ಭದಿಂದ ಗೋರಿಯವರೆಗೆ ನಾವು ಎಷ್ಟು ಜನರಿಗೆ, ಜೀವಸಂಕುಲಕ್ಕೆ ಕೃತಜ್ಞರಾಗಿದ್ದರೂ ಸಾಲದು. ಒಬ್ಬ ವ್ಯಕ್ತಿಯು ತನಗೆ ಲಭಿಸಿದ ಅಥವಾ ಲಭಿಸುವ ಸೌಲಭ್ಯಕ್ಕೆ ಪ್ರತಿಯಾಗಿ ನೀಡುವ ಒಂದು ತರಹದ ಗೌರವಪೂರ್ವಕ ಧನ್ಯವಾದವನ್ನು ಕೃತಜ್ಞತೆ ಎನ್ನಬಹುದು. ಬೆಳಗ್ಗೆ ಎದ್ದ ತತ್‌ಕ್ಷಣ ಒಂದು ಕೈಯಲ್ಲಿ ಕಾಫಿ ಮತ್ತೂಂದು ಕೈಯಲ್ಲಿ ವೃತ್ತ ಪತ್ರಿಕೆ ಓದುತ್ತಿರುವಾಗ ನಾವು ಯಾರಿಗೆಲ್ಲ ಕೃತಜ್ಞರಾಗಿರಬೇಕು? ಯಾರೋ ಸಂಪಾದಕ, ಯಾರೋ ಪತ್ರಕರ್ತ, ಯಾರೋ ಜಾಹಿರಾತುದಾರ, ಯಾವುದೋ ಗಾಡಿಯಲ್ಲಿ ನಿಮ್ಮೂರಿಗೆ ಪತ್ರಿಕೆಯನ್ನು ತಂದು ಇಳಿಸುವ ಚಾಲಕ.

Advertisement

ಚಳಿ, ಮಳೆ, ಗಾಳಿ ಎನ್ನದೆ ಪತ್ರಿಕೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಹುಡುಗ. ಇವರಿಗೆಲ್ಲ ಎಂದಾದರೂ ಒಂದು ಕೃತಜ್ಞತೆಯನ್ನು ಹೇಳಿದ್ದೇವೆಯೇ? ನಾವು ಕುಡಿಯುವ ಕಾಫಿಯ ಹಿಂದೆ ಎಷ್ಟೊಂದು ಜನರ ಪರಿಶ್ರಮವಿದೆ. ಹೆಂಡತಿ ಅಥವಾ ಅಮ್ಮನಿಂದ ಕಾಫಿಯ ಕಪ್‌ನ್ನು ತೆಗೆದುಕೊಳ್ಳುವಾಗ ಒಂದು ಕೃತಜ್ಞತೆಯ ನಗುವನ್ನು ಬೀರಿದ್ದೇವೆಯೇ? ಇವುಗಳೆಲ್ಲವೂ ನಮಗೆ ಕೃತಕವಾಗಿಯೇ ಕಾಣುತ್ತವೆ. ಪ್ರತಿದಿನ ಪತ್ರಿಕೆ ಬರುತ್ತದೆ, ಕಾಫಿ ಕುಡಿಯುತ್ತಾ ಓದಿ ಮುಗಿಸುತ್ತೇವೆ ಅಷ್ಟೇ.

ಅಷ್ಟೇ ಏಕೆ ಬಸ್‌ನಲ್ಲಿ, ಹಿರಿಯರು, ಹೆಂಗಸರು, ವಿದ್ಯೆ ಕಲಿಸಿದ ಶಿಕ್ಷಕರು ನಿಂತಿದ್ದರೂ, ತಮಗೇನು ಗೊತ್ತಿಲ್ಲವೇನೋ ಎನ್ನುವಂತೆ ನಾಟಕೀಯವಾಗಿ ಸುಮ್ಮನೆ ಕುಳಿತುಕೊಂಡಿರುವವರನ್ನು ನಾವು ಕಂಡಿರುತ್ತೇವೆ. ಇಂತಹ ವಿದ್ಯಾರ್ಥಿಗಳಿಂದ ಕೃತಜ್ಞತೆ ನಿರೀಕ್ಷಿಸುವುದು ತಪ್ಪೇ..? ಬರಿ ಅಂಕಗಳಿಗೆ ಮಾತ್ರವೇ ನಮ್ಮ ಮಕ್ಕಳನ್ನು ಸೀಮಿತಗೊಳಿಸಿ ಬಿಟ್ಟಿದ್ದೇವೆಯೇ..?.

ಸಂಕಷ್ಟದಲ್ಲಿ ಧನಸಹಾಯ ಪಡೆದ ಆತ್ಮೀಯರು ಅನಂತರ ತಲೆ ತಪ್ಪಿಸಿಕೊಂಡು ಓಡಾಡುವುದನ್ನು ಕಾಣುತ್ತೇವಲ್ಲವೇ. ನಿತ್ಯ ಚೂರು ಪ್ರೀತಿ, ಮುಷ್ಟಿ ಅನ್ನ ಪಡೆದ ನಾಯಿ ಕೊನೆಯವರೆಗೂ ಮಾಲಕನಿಗೆ ಕೃತಜ್ಞತೆಯಿಂದ ಇರುತ್ತದೆ.

ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ಕ್ಷಣಿಕ ಸಾಧನೆಯಲ್ಲ. ಇದು ನಮ್ಮ ಯೋಗಕ್ಷೇಮ, ಸಂಬಂಧಗಳು ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಪರಿವರ್ತಕ ಮನಸ್ಥಿತಿಯಾಗಿದೆ. ಭವ್ಯವಾದ ಸಾಧನೆಗಳಿಂದ ಹಿಡಿದು ಪ್ರಾಪಂಚಿಕ ಕ್ಷಣಗಳವರೆಗೆ ಎಲ್ಲದಕ್ಕೂ ಕೃತಜ್ಞರಾಗಿರಲು ಕಲಿಯುವುದು ನಿಜವಾಗಿಯೂ ಜೀವನಕ್ಕೆ ಸಾರ್ಥಕತೆಯನ್ನು ಒದಗಿಸುತ್ತದೆ. ಕೃತಜ್ಞತೆಯನ್ನು ಅಭ್ಯಾಸ ಮಾಡುವ ಮೂಲಕ ನಾವು ಕತ್ತಲೆಯ ಸಮಯದಲ್ಲೂ ಬೆಳ್ಳಿರೇಖೆಗಳನ್ನು ಕಾಣಬಹುದು.

Advertisement

ನಮ್ಮ ಬದುಕಿನ ಹಾದಿಯಲ್ಲಿ ಕೆಟ್ಟವರು ಮತ್ತು ಒಳ್ಳೆಯವರು ಸದಾ ಎಡತಾಕುತ್ತಲೇ ಇರುತ್ತಾರೆ. ಇಬ್ಬರಿಗೂ ನಾವು ಕೃತಜ್ಞರಾಗಿರಬೇಕು. ಒಳ್ಳೆಯವರು ಸನ್ಮಾರ್ಗವನ್ನು ತೋರಿದರೆ, ಕೆಟ್ಟವರು ಒಳ್ಳೆಯ ಅನುಭವಗಳನ್ನು ಕಟ್ಟಿಕೊಡುತ್ತಾರೆ.

ಎನಿತು ಜೀವದಲಿ

ಎನಿತು ಜೀವರಿಗೆ

ಎನಿತು ನಾವು ಋಣಿಯೋ

ಅರಿತು ನೋಡಿದರೆ ಬಾಳು

ಎಂಬುದಿದು ಋಣದ ರತ್ನ ಗಣಿಯೋ

ಎನ್ನುತ್ತಾ ಜಿ . ಎಸ್‌. ಶಿವರುದ್ರಪ್ಪನವರು ಬದುಕಿನಲ್ಲಿ ನಾವು ಎಲ್ಲರಿಗೂ ಋಣಿಯಾಗಿರಬೇಕೆಂದು ಆಶಿಸುತ್ತಾರೆ.

ಒಂದು ಬೆಳಗು ಯಾರಿಗೆಲ್ಲ ಕೃತಜ್ಞರಾಗಿ ಇರಬೇಕೆಂದು ಹೇಳುತ್ತದೆ. ನಮ್ಮ ಕುಟುಂಬ, ಹಕ್ಕಿ ಪಕ್ಷಿಗಳ ಕಲರವ, ಸೂರ್ಯೋದಯ, ತಣ್ಣನೆಯ ಗಾಳಿ, ಗಿಡ ಮರಗಳು, ದಿನಪತ್ರಿಕೆ ಹಾಕುವ ಹುಡುಗ, ವಾಯು ವಿಹಾರಕ್ಕೆ ಜತೆಯಾಗುವ ಹಿರಿಕಿರಿಯರು, ಒಳಿತನ್ನು ಬಯಸುವ ಸನಿ¾ತ್ರರು, ಒಳಿತನ್ನು ಬಯಸುವಂತೆ ನಾಟಕವಾಡುವ ಗೋಮುಖ ವ್ಯಾಘ್ರರು, ತಪ್ಪಾದಾಗ ಮುನ್ನಡೆಸುವ ಮಾರ್ಗದರ್ಶಕರು,… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ನಾವು ಉಸಿರಾಡುವ ಗಾಳಿಯಿಂದ ಹಿಡಿದು ಪ್ರೀತಿಸುವ ಸಂಬಂಧಗಳವರೆಗೆ ಕೃತಜ್ಞತೆಯ ಮೂಲಕ ಜೀವನದಲ್ಲಿ ನಿಜವಾದ ಸಮೃದ್ಧಿಯನ್ನು ಕಾಣಬಹುದು. ಕೃತಜ್ಞತೆಯು ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಕೃತಜ್ಞತೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಮನಸ್ಸು ಕೇಂದ್ರೀಕರಿಸುವ ಮೂಲಕ ಒತ್ತಡ, ಆತಂಕ ಮತ್ತು ಖನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಭಾವನಾತ್ಮಕ ಸ್ಥಿತಿ ಸ್ಥಾಪಕತ್ವ ಮತ್ತು ಚೈತನ್ಯಕ್ಕೆ ಕಾರಣವಾಗುತ್ತದೆ.

ಕೆ.ಟಿ. ಮಲ್ಲಿಕಾರ್ಜುನಯ್ಯ

ಶಿಕ್ಷಕರು, ಕಳ್ಳಿಪಾಳ್ಯ, ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next