Advertisement
ಬಹಳ ಕಾಡಿದ ಚಿತ್ರ ಇದು. ಭರ್ಜರಿ ಫೈಟ್, ಹಾಡುಗಳಿಲ್ಲದೆಯೂ ಒಂದು ಅತ್ಯತ್ತಮ ಸಿನಿಮಾವನ್ನು ನೀಡಬಹುದು ಎಂಬುವುದಕ್ಕೆ ಉದಾಹರಣೆ. ಅನೀರಿಕ್ಷಿತ ತಿರುವುಗಳು, ಡೈಲಾಗ್‍ಗಳು, ಸಂಬಂಧಗಳು, ತಾಯಿ ಮಗನ ಪ್ರೀತಿ, ಗೆಳೆತನ, ಪ್ರೀತಿ, ತ್ಯಾಗವನ್ನು ಒಳಗೊಂಡಿದೆ. ಆದರೂ ಈ ಸಿನಿಮಾದ ಕ್ಲೈಮ್ಯಾಕ್ಸ್ ಮನಸ್ಸಿಗೆ ತುಂಬಾ ನೋವು ಮಾಡಿತು.
Related Articles
Advertisement
ಪ್ರಾರಂಭದ ಸುಮಾರು ಅರ್ಧ ಗಂಟೆ ಒಂದು ಪ್ರೇಮಕಥೆ: ಬಳಿಕದ ಸುಮಾರು ಒಂದು ಗಂಟೆ ಮತ್ತೊಂದು ಪ್ರೇಮ ಕಥೆ. ಅದನ್ನು ನೋಡುವಾಗ ಮೊದಲ ಕಥೆಯನ್ನು ಯಾಕೆ ಹೆಣೆಯಲಾಗಿದೆ ಎಂದು ತಿಳಿಯದು. ಆದರೆ, ಸಿನಿಮಾದಲ್ಲಿ ಬಳಿಕ ಬರುವ ಎಲ್ಲಾ ಆಗುಹೋಗುಗಳಿಗೂ ಅದುವೇ ಬುನಾದಿ ಎಂದು ಕೊನೆಯಲ್ಲಿ ಗೊತ್ತಾಗುತ್ತದೆ.
ಹಲವಾರು ಸಿನಿಮಾಗಳಲ್ಲಿ ಒಂದೋ ಕಾಮಿಡಿ ಇಲ್ಲವೇ ಸಂಗೀತವೇ ಜೀವಾಳ ಆಗಿರುತ್ತದೆ. ಆದರೆ ದಿಯಾ ಸಿನಿಮಾದ ವಿಶೇಷತೆ ಎಂದರೆ ಇದರಲ್ಲಿ ಒಂದೇ ಒಂದು ಹಾಡು ಇಲ್ಲ. ಹಾಸ್ಯ ಕಲಾವಿದರೂ ಇಲ್ಲ. ಹಾಗಂತ ಇಡೀ ಸಿನಿಮಾ “ಬೋರ್ ಹೊಡೆಯದು. ಸಿನಿಮಾದ ನಾಲ್ಕು ಮುಖ್ಯಪಾತ್ರಧಾರಿಗಳಲ್ಲೇ ಹಾಸ್ಯ ಪ್ರಜ್ಞೆ ಇದೆ.
ಹಲವಾರು ಕಡೆ ಸಂಭಾಷಣೆಯೇ ಸಂಗೀತಮಯವಾಗಿ ಗೋಚರಿಸುತ್ತದೆ. ಕೆಲವೊಂದು ಸನ್ನಿವೇಶಗಳು ನಮ್ಮ ಜೀವನದಲ್ಲೂ ಆಗಿದೆ ಎಂಬಂತಹ ಭಾವನೆಯನ್ನು ಮೂಡಿಸುತ್ತದೆ. ಕೆಲವೊಮ್ಮೆ ಆ ಪಾತ್ರಕ್ಕೂ, ಘಟನೆಗಳಿಗೂ, ನಮ್ಮ ನಿಜ ಜೀವನಕ್ಕೂ ಏನೋ ಹೋಲಿಕೆ ಇದ್ದಂತೆ ಭಾಸವಾಗುತ್ತದೆ. ಇವೆಲ್ಲದರ ಹಿಂದೆ, ನಿರ್ದೇಶಕರು ಇಡೀ ಸಿನಿಮಾದಲ್ಲಿ ಕಾಪಾಡಿಕೊಂಡು ಬಂದಂತಹ ಪಾತ್ರಗಳಲ್ಲಿನ ನೈಜತೆ ಪ್ರಧಾನ ಅಂಶ.
ಚಿತ್ರವು ಪಾತ್ರಗಳ ಮುಗ್ದತೆಯನ್ನು ಬಹಳ ಪರಿಣಾಮಕಾರಿಯಾಗಿ ಸೆರೆಹಿಡಿಯುತ್ತದೆ. ಇಡೀ ಕಥಾಹಂದರದಲ್ಲಿ ಯಾವುದೇ ಅನಗತ್ಯ ಅಂಶಗಳಿಲ್ಲ ಮತ್ತು ನೃತ್ಯ- ಹೊಡೆದಾಟಗಳೂ ಇಲ್ಲ. ಹಾಗಾಗಿ ಈ ಚಿತ್ರವು ಅರ್ಥಪೂರ್ಣ ಸಿನೆಮಾ ಬಯಸುವವರಿಗೆ ಇಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಚಲನಚಿತ್ರವು ಶಕ್ತಿಯುತವಾದ ಒಂದು ಕಥೆಯನ್ನು ಹೊಂದಿದೆ ಮತ್ತು ಕೆಲವು ಹೃದಯಸ್ಪರ್ಶಿ ದೃಶ್ಯಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಬಂದಂತಹ ಅತ್ಯುತ್ತಮ ಪ್ರೇಮಕಥೆಗಳಲ್ಲಿ ಈ ಸಿನಿಮಾವೂ ಒಂದು.– ದೀಪಾ ಮಂಜರಗಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕ ಮಹಾದೇವಿ ಮಹಿಳಾ ವಿವಿ ವಿಜಯಪುರ