Advertisement

Father: ಅಪ್ಪನೆಂಬ ಆಕಾಶ

03:30 PM Jul 05, 2024 | Team Udayavani |

ಅಪ್ಪ ಎಂದರೆ ಅವ್ಯಕ್ತ ಭಾವಗಳ ಆಗರ. ಮೌನದಲ್ಲೇ ಹೊತ್ತು ಸಾಗುವನು ಬದುಕಿನ ಭಾರ.ತನ್ನ ಆಸೆ ಕನಸುಗಳನ್ನು ತನ್ನೊಡಲ ಕುಡಿಗಳ ಶ್ರೇಯಸ್ಸಿನಲ್ಲಿ ಕಾಣುತ್ತಾ ದಡ ಸೇರುವವರೆಗೂ ಅವರೊಂದಿಗೆ ಇರುವ ಶಕ್ತಿ. ಅಪ್ಪನೆಂದರೆ ಆಪ್ತಮಿತ್ರ.

Advertisement

ಗೆದ್ದಾಗ ಬೆನ್ನು ತಟ್ಟುವಂತೆ ಸೋತಾಗ ಕೈ ಹಿಡಿದು ಮುನ್ನಡೆಸುವವ.ಅಪ್ಪ ಜೊತೆಗಿದ್ದರೆ ಬದುಕಿಗೊಂದು ಭರವಸೆ.ಅವನ ಅವಿರತ ಪರಿಶ್ರಮದ ಫ‌ಲ ಸದಾ ಕುಟುಂಬದ ಸುಖಕ್ಕಾಗಿಯೇ ಮೀಸಲು.ತನ್ನ ಕೊರತೆಗಳನ್ನು ಬಚ್ಚಿಡುತ್ತಾನೆ ಅದೆಷ್ಟು ಜಾಣತನದಿಂದ. ಮಕ್ಕಳ ನಗುವಿಗಾಗಿ ಅವನ ಕಂಗಳು ಹಂಬಲಿಸುತ್ತಲೇ ಇರುತ್ತವೆ. ಮಕ್ಕಳ ನೋವನ್ನು ಸಹಿಸದ ಶುದ್ಧ ಅಂತಃಕರಣ ಅಪ್ಪನದ್ದು.

ನನಗೆ ಅಪ್ಪನೆಂದರೆ ನನ್ನ ಚೈತನ್ಯ. ನಾನು ಸಹ ಅಪ್ಪನಂತೆ ಮೌನಿ.ಭಾವನೆಗಳನ್ನು ವ್ಯಕ್ತಪಡಿಸಲಾರೆವು.ಆದರೆ ಎಲ್ಲರ ಬಗ್ಗೆ ಸಾಗರದಷ್ಟು ಪ್ರೀತಿ.ಅಪ್ಪ ಮತ್ತು ನನ್ನ ನಡುವೆ ಇನ್ನೊಂದು ಸಾಮ್ಯತೆಯೆಂದರೆ ಕಷ್ಟ ಸಹಿಷ್ಣುತೆ ಮತ್ತು ತಾಳ್ಮೆ.ಅಪ್ಪನ ಮನದಾಳ ಅರಿತವರಷ್ಟೇ ಬಲ್ಲರು.ಅವನ ಹೃದಯ ಪ್ರೀತಿಯ ಅರಮನೆ.ಮದುವೆಯಾಗಿ ಹೋಗುವ ಹೆಣ್ಣುಮಗಳ ಬೀಳ್ಕೊಡುವಾಗ ತುಂಬಿ ಬರುವ ಅವನ ಕಣ್ಣುಗಳಲ್ಲಿ ಅವನ ಹೆಗಲೇರಿ ಕುಣಿದ ಪುಟ್ಟಿಯ ನೆನಪುಗಳು.

ಮದುವೆಗೆ ಒಂದು ವಾರ ಇರುವಾಗಲೇ ಅವನೆದೆಯಲ್ಲಿ ಚಡಪಡಿಕೆ.ಪುಟ್ಟಿಯಿಲ್ಲದ ಮನೆಯಲ್ಲಿ ಇನ್ನು ಮುಂದೆ ಸಂಜೆಗಳನ್ನು ಹೇಗೆ ಕಳೆಯಲಿ ಎಂಬ ಪ್ರಶ್ನೆ.ಅತ್ತು ಗೋಳಾಡಲಾರದೆ ಮೌನವಾಗಿ ಕುಳಿತು ಅವಳ ಫೋಟೋಗಳನ್ನು ನೋಡಿ ಯಾರಿಗೂ ಗೊತ್ತಾಗದಂತೆ ಕಣ್ಣೊರೆಸಿಕೊಂಡು ಮದುವೆ ಕೆಲಸಗಳಲ್ಲಿ ತೊಡಗಿಕೊಳ್ಳುವ ಅಪ್ಪನ ಅಂತರಂಗ ಅವನನ್ನು ಅಷ್ಟೇ ಹಚ್ಚಿಕೊಂಡ ಮಗಳಿಗೆ ಮಾತ್ರ ಗೊತ್ತು.

ಮೊಮ್ಮಕ್ಕಳು ಬಂದ ಮೇಲೆ ಅಪ್ಪ ಮತ್ತೆ ಮಗುವಾಗುವನು.ಮಕ್ಕಳ ಓದು,ಉದ್ಯೋಗ,ಮದುವೆಯ ಜವಾಬ್ದಾರಿಗಳಿಂದ ಮುಕ್ತನಾಗಿ ಸ್ವಲ್ಪ ಹಗುರೆನಿಸುವ ಸಮಯದಲ್ಲಿ ಮಗಳು ಬಾಣಂತನಕ್ಕಾಗಿ ತವರಿಗೆ ಬಂದರೆ ಅಪ್ಪನ ಸಂಭ್ರಮ ಮೇರೆ ಮೀರುತ್ತದೆ.

Advertisement

ಬೆಳಿಗ್ಗೆ ಎದ್ದು ಮೊಮ್ಮಗುವಿನ ಮುದ್ದು ಮುಖ ನೋಡಿ ತೋಟದ ಕೆಲಸಕ್ಕೆ ಹೋಗಿ ಮತ್ತೆ ಸಂಜೆ ಬಂದ ಕೂಡಲೇ ಮೊಮ್ಮಗುವಿನೊಂದಿಗೆ ಆಡಬೇಕು.ಮಗಳಿಗೆ ಏನು ಇಷ್ಟ ಎಲ್ಲ ತಂದುಕೊಡಬೇಕು.ಮಗಳು ಮೊಮ್ಮಗು ತವರಿನಲ್ಲಿ ಇದ್ದಷ್ಟು ದಿನ ಅವನೆದೆಯೊಳಗೆ ಬೆಚ್ಚಗಿನ ಭಾವ.

ಮೊಮ್ಮಕ್ಕಳು ಶಾಲೆಗೆ ಹೋಗುವವರಾದರೆ ರಜೆಯಲ್ಲಿ ಬರುವ ಅವರಿಗಾಗಿ ಕಾಯುತ್ತಾನೆ. ಬಗೆಬಗೆಯ ಸಿಹಿಗಳನ್ನು ಅವರಿಗೆಂದು ತಂದುಕೊಟ್ಟು ಕೀಟಲೆ ಮಾಡುತ್ತಾ ಮಗುವೇ ಆಗುತ್ತಾನೆ ಅಪ್ಪ. ದುಡಿಯುವ ಮಕ್ಕಳು ಮನೆಗೆ ಬಂದು ಹೋಗುವಾಗ ಅವರು ತಂದುಕೊಟ್ಟ ಹೊಸ ಬಟ್ಟೆ, ವಾಚ್‌ ಎಲ್ಲವನ್ನೂ ತೊಟ್ಟು ಕನ್ನಡಿ ಮುಂದೆ ನಿಂತು ಹೆಮ್ಮೆಯಿಂದ ಬೀಗುವನು.

ಅದೊಂದು ಸಾರ್ಥಕ ಭಾವ ಅವನೊಳಗೆ. ಮಗ ಹೊಸ ಕಾರ್‌ ಖರೀದಿಸಿ ಮನೆ ಮುಂದೆ ತಂದು ನಿಲ್ಲಿಸಿದಾಗ ತಾನು ಅವನನ್ನು ಓದಿಸಲು ಬಸ್‌,ಆಟೋಗಳಲ್ಲಿ ಓಡಾಡಿದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ.ಮಗನೋ ಮಗಳ್ಳೋ ಕಾರ್‌ ನಲ್ಲಿ ಕೂರಿಸಿಕೊಂಡು ಅವನಿಷ್ಟದ ಸ್ಥಳಗಳಿಗೆ ಕರೆದುಕೊಂಡು ಹೋದರೆ ಮನದೊಳಗೆ ಸಂಭ್ರಮಿಸುತ್ತಾನೆ.

ವರ್ಷ ಅರವತ್ತಾದರೂ ಇನ್ನೂ ಪಾದರಸದಂತೆ ಚುರುಕಾಗಿ ಹಳ್ಳಿಮನೆಯ ಕೆಲಸಗಳಲ್ಲಿ ತೊಡಗುವ ಅಪ್ಪನಿಗೆ ಸುಮ್ಮನೆ ಕೂರುವುದೆಂದರೆ ಆಗದು.ಈ ಕ್ರಿಯಾಶೀಲತೆಯೇ ಅವನ ಜೀವಂತಿಕೆ.ತೋಟದ ಗಿಡಗಳು, ಕೊಟ್ಟಿಗೆಯ ಹಸುಗಳು, ಕೆಲಸಕ್ಕೆ ಬರುವ ಆಳುಗಳು ಅವನ ಬದುಕಿನ ಅವಿಭಾಜ್ಯ ಅಂಗಗಳು. ಕಾಯಕನಿಷ್ಠೆಯೆಂದರೆ ಅಪ್ಪ.

ಆಯಾಸವನ್ನು ಗಣಿಸದೆ ದುಡಿಮೆಯಲ್ಲಿ ಸಂತೋಷ ಕಾಣುವುದನ್ನು ಅಪ್ಪನಿಂದಲೇ ಕಲಿಯಬೇಕು.ಅರವತ್ತಾದರೂ ಯುವಕನಂತೆ ಕಾಣುವ ಅಪ್ಪನ ಜೀವನೋತ್ಸಾಹಕ್ಕೆ ಅಪ್ಪನೇ ಸರಿಸಾಟಿ. ಅಪ್ಪನೆಂದರೆ ಆಕಾಶ.ಅವನಿಲ್ಲದ ಮನೆಮನಗಳು ಶೂನ್ಯ. ಅಪ್ಪನೆಂದರೆ ಅದಮ್ಯ ಚೈತನ್ಯ.

ಚೈತನ್ಯ ಸೂಸುವ ಕಂಗಳಲ್ಲಿ ಆಡದ ನೂರು ಮಾತುಗಳು ಮೌನವ ಹೊದ್ದು ಮಲಗಿವೆ ತನ್ನ ಬೆವರು ಅಮೃತವಾಗಿ ಒಡಲ ಕುಡಿಗಳ ಪೊರೆಯುತಿರಲು ಪ್ರೀತಿ ತುಳುಕುವ ಹೃದಯವದುಮುಗುಳು ನಗುತಿದೆ ಅವ್ಯಕ್ತ ಭಾವಗಳ ಆಗರವದು ಮನ ನಂಬಿದವರ ದಡ ಸೇರಿಸುವ ಗುರಿಯನೊಂದೆ ನಂಬಿದೆ ಸುಖದಪೇಕ್ಷೆ ಇಲ್ಲದವನಿಗೆ ಎಲ್ಲರ ನಗಿಸುವ ಹಂಬಲವಿದೆ.

ನಿದ್ದೆ ತೊರೆದ ಕಂಗಳಲ್ಲಿ ಸುಖದಿ ಮಲಗುವ ಮನೆಯೇ ನಿತ್ಯದ ಕನಸಾಗಿದೆ ತಾನುಣ್ಣದೆ ಉಡದೆ ದುಡಿವ ಕಾರ್ಪಣ್ಯಗಳ ಮರೆಯಲ್ಲಿ ಮುಂದಿನ ಚಿಗುರುಗಳ ಹೆಮ್ಮರವಾಗಿಸುವ ಹೆಬ್ಬಯಕೆಯಿದೆ.

-ಭವ್ಯಾಟಿ.ಎಸ್‌.

ಶಿಕ್ಷಕರು, ಸ.ಪ್ರೌ. ಶಾಲೆ, ಕಾನುಗೋಡು, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next