ಮೇ ಐ ಕಮ್‌ಇನ್ ಮ್ಯಾಮ್, ಅಸೈನ್‌ಮೆಂಟ್ ಯಾವಾಗ ಕೊಡಬೇಕು, ಸೆಮಿನಾರ್ ಯಾವಾಗ, ನಾಳೆ ಎಕ್ಸಾಮ್ ಉಂಟಾ ಸರ್ ಎಂದು ಅಧ್ಯಾಪಕರ ತಲೆ ತಿಂದದ್ದು ಇನ್ನು ನೆನಪು ಮಾತ್ರ.
ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನುವ ಹಾಗೆ ಕಾಲೇಜು ಎಂದರೆ ಮರೆಯಲಾಗದ ಒಂದು ಸುಂದರ ಬದುಕು. ಕಾಲೇಜಿಗೆ ಮೊದಲ ದಿನ ಬಂದಾಗ ನಾಲ್ಕೆ çದು ಮಂದಿ ಪಿಯುಸಿ ಸ್ನೇಹಿತರನ್ನು ಬಿಟ್ಟರೆ ಬಹುತೇಕ ಎಲ್ಲ ಹೊಸ ಮುಖಗಳು. ದಿನಕಳೆದಂತೆ ಆತ್ಮೀಯತೆ ಬೆಳೆದು ಸ್ನೇಹಿತರ ಪಟ್ಟಿ ಬೆಳೆಯುತ್ತಾ ಹೋಯಿತು.
ಸೀನಿಯರ್‌ಗಳ ಮಾತಿಗೆ ತಲೆ ಆಡಿಸುತ್ತಿದ್ದದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದದ್ದು, ದಿನ ಕಳೆದಂತೆ ಮೊದಲ ವರ್ಷದ ಇಂಟರ್ನಲ್ ಪರೀಕ್ಷೆಯೂ ಬಂದೇಬಿಟ್ಟಿತ್ತು. ಇಂಟರ್ನಲ್ ಏನು ಅಂತ ಗೊತ್ತಿರದಿದ್ದರೂ ಕಷ್ಟಪಟ್ಟು ಓದಿ ಬರೆದು ಪಾಸಾದ ಖುಷಿ.ಅಸೈನ್‌ಮೆಂಟ್, ಸೆಮಿನಾರ್‌ಗಳನ್ನು ಸರಿಯಾದ ಸಮಯಕ್ಕೆ ವಿದೇಯ ವಿದ್ಯಾರ್ಥಿಯಂತೆ ಸಲ್ಲಿಸಿ ಹೊಗಳಿಸಿಕೊಳ್ಳುವುದು, ಮೊದಲ ವರ್ಷದಲ್ಲಿ ಕಾಲೇಜಿನಲ್ಲಿ ಎಲ್ಲಿಗೆ ಹೋಗಬೇಕಾದರೂ ಚಿಕ್ಕ ಮಕ್ಕಳಂತೆ ಒಟ್ಟಿಗೆ ಹೋಗುವುದು, ಮೊದಲ ಬಾರಿಗೆ ಬಂಕ್ ಮಾಡುವಾಗ ಭಯ, ಕಾರಿಡಾರ್‌ನಲ್ಲಿ ನಿಂತು ಕಾಮೆಂಟ್ ಮಾಡುವುದು, ಉಪನ್ಯಾಸಕರನ್ನು ಗಮನಿಸುವುದು ಇವೆಲ್ಲ ಹೊಸ ಅನುಭವಗಳೇ.
ಕಾಲೇಜು ಮೊದಲ ವರ್ಷದ ರಜೆ ಮುಗಿದು ಎರಡನೇ ವರ್ಷಕ್ಕೆ ಕಾಲಿಟ್ಟಾಗ ಮತ್ತೆ ಸ್ನೇಹಿತರನ್ನು ನೋಡಿದಾಗ ಆದ ಸಂತೋಷ. ಬಂಕ್ ಹೊಡೆದು ಕ್ಯಾಂಟೀನ್‌ನಲ್ಲಿ ಹರಟೆ ಹೊಡೆಯುವುದು, ಕಾರಿಡಾರ್‌ನಲ್ಲಿ ನಿಂತು ಹುಡುಗ ಹುಡುಗಿಯರಿಗೆ ತಮಾಷೆ ಮಾಡುವುದು, ತರಗತಿಯಲ್ಲಿ ನೋಟ್ಸ್ ಕೊಡುವಾಗ ಬರೆಯದೇ ಎಕ್ಸಾಮ್ ಟೈಮ್‌ನಲ್ಲಿ ಸ್ನೇಹಿತರ ನೋಟ್ಸ್ ಅನ್ನು ಕಾಪಿ ಮಾಡೋದು, ಉಪನ್ಯಾಸಕರಿಗೆ ತರಗತಿಯಲ್ಲಿ ಪಾಠ ಮಾಡಲು ಬಿಡದೆ ತರಗತಿಯಲ್ಲಿ ತರ್ಲೆ ಮಾಡುವುದು, ಅವರಿಂದ ಬೈಸಿಕೊಂಡು ಪ್ರಾಂಶುಪಾಲರ ಕಚೇರಿಗೆ ಹೋಗುತ್ತಿದ್ದದ್ದು. ಎಕ್ಸಾಮ್ ಸಮಯದಲ್ಲಿ ಉಪನ್ಯಾಸಕರು ಎಷ್ಟೇ ಸ್ಟ್ರಿಕ್ಟ್ ಇದ್ದರೂ ಅವರ ಕಣ್ಣು ತಪ್ಪಿಸಿ ಕಾಪಿ ಮಾಡುವುದು ಇವೆಲ್ಲ ಮರೆಯಲಾಗದ ನೆನಪುಗಳೇ.
ಇದೆಲ್ಲಾ ಒಂದು ಕಡೆಯಾದರೆ ಕಾಲೇಜಿನ ವಿವಿಧ ಸಂಘಗಳು ನಡೆಸುವ ಕಾರ್ಯಕ್ರಮದಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದು, ಮೊದಲ ಬಾರಿಗೆ ಕಾಲೇಜು ವಾರ್ಷಿಕೋತ್ಸವದ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಇವೆಲ್ಲ ನೆನಪಿನ ಬುತ್ತಿಯಲ್ಲಿ ಭದ್ರವಾಗಿ ಕುಳಿತುಕೊಂಡಿದೆ.
ಕಾಲೇಜಿನ ಕೊನೆಯ ವರ್ಷದಲ್ಲಿ ನಮ್ಮ ವ್ಯಕ್ತಿತ್ವ, ಭಾವನೆ ಎಲ್ಲವೂ ಬದಲಾಗಿರುತ್ತದೆ. ನಾವೇ ಸೀನಿಯರ್ ನಮ್ಮದೇ ಹವಾ ಎನ್ನುವ ರೀತಿ ಓಡಾಡುತ್ತಿರುತ್ತೇವೆ. ಉಪನ್ಯಾಸಕರ ಜತೆ ಗೆಳೆಯರಂತೆ ಇರುವುದು, ತರಗತಿಗಿಂತ ಹೆಚ್ಚಾಗಿ ಸ್ಟಾಫ್ ರೂಂನಲ್ಲಿರುವುದೇ ಹೆಚ್ಚು. ಟ್ಯಾಲೆಂಟ್ಸ್ ಡೇ ಗೆ ಭರ್ಜರಿ ತಯಾರಿ ನಡೆಸಿ ಪೈಪೋಟಿಗೆ ಸಿದ್ಧವಾಗಿ ಪ್ರಶಸ್ತಿಗಳನ್ನು ಗೆದ್ದಾಗ ಆಗುವ ಖುಷಿ ವರ್ಣಿಸಲಸಾಧ್ಯ.
ಕೊನೆಯ ವರ್ಷದ ಕೊನೆಯ ವಾರ್ಷಿಕೋತ್ಸವ ಎಲ್ಲವೂ ಮುಗಿದು ಬೀಳ್ಕೊಡುಗೆ ಸಮಾರಂಭ ಬಂದೇಬಿಟ್ಟಿತು. ನಮ್ಮ ಜೂನಿಯರ್‌ಗಳು ನಮಗೆ ಅದ್ಭುತವಾದ ವಿಧಾಯ ಕೂಟವನ್ನು ಪ್ರೀತಿಯಿಂದ ಏರ್ಪಡಿಸಿದರು. ಆ ದಿನ ಕಾಲೇಜು ಜೀವನವನ್ನು ಹಿಂದುರುಗಿ ನೋಡಿದಾಗ ಎಲ್ಲವೂ ಕ್ಷಣಗಳಂತೆ ಕಳೆದವು. ಸಂತೋಷ, ಬೇಸರದ ಮಿಶ್ರ ಭಾವನೆಗಳ ಸಮ್ಮಿಲನ ಆ ಕ್ಷಣ. ಕಾಲೇಜಿನ ಕೊನೆಯ ದಿನ ಹೃದಯಕ್ಕೆ ನೆನಪುಗಳು ಭಾರವಾಗಿ ಕಣ್ಣಂಚಲ್ಲಿ ಕಣ್ಣೀರ ಹನಿ ಕೂಡಿ ಕೊನೆಗೂ ಮುಗಿಯಿತು ಕಾಲೇಜು ಜೀವನ.
-ಆಯಿಶತುಲ್ ಬುಶ್ರ
ಎಂ.ಪಿ.ಎಂ. ಕಾಲೇಜು ಕಾರ್ಕಳ