ಇದು ಮತ್ತೂಂದು ಪರ್ಷಿಯನ್ ಭಾಷೆಯ ಚಲನಚಿತ್ರ. ಇರಾನ್ ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಮಜಿದ್ ಮಜಿದಿ ನಿರ್ದೇಶಿಸಿರುವ ಚಲನಚಿತ್ರ. ಮಜಿದ್ ಮಜಿದಿ ಸೂಕ್ಷ್ಮ ಗ್ರಹಿಕೆಯ ನಿರ್ದೇಶಕ. ಮುಖ್ಯವಾಗಿ ಮಾನವೀಯ ಭಾವನೆಗಳನ್ನು ಸಾಂದ್ರವಾಗಿ ಸಕ್ಕರೆ ಅಚ್ಚಿನಂತೆ ಕಟ್ಟಿಕೊಡುವ ಸಾಮರ್ಥ್ಯ ಮಜಿದ್ ಮಜಿದಿ ಅವರದ್ದು. ಹಾಗಾಗಿ ಇವರ ಸಿನಿಮಾಗಳ ಮೂಲಕವೇ ಹೆಚ್ಚಿನ ಸಿನಿಮಾ ಪ್ರೇಮಿಗಳು ವಿಶ್ವ ಸಿನಿಮಾ ಲೋಕವನ್ನು ಪ್ರವೇಶಿಸುತ್ತಾರೆ. ಇವರ ಸಿನಿಮಾಗಳ ಒಂದೇ ಸಿದ್ಧಾಂತ ಮತ್ತು ತತ್ತ್ವ ಬದುಕು ಮತ್ತು ಮಾನವತೆ. ಯಾವುದೇ ಸಿನಿಮಾದಲ್ಲೂ ಬದುಕೂ ಸೋಲುವುದಿಲ್ಲ, ಮಾನವತೆಯೂ ಸಾಯುವುದಿಲ್ಲ. ಸಾಮಾನ್ಯವಾಗಿ ಭರವಸೆಯ ಟಿಪ್ಪಣಿಯೊಂದಿಗೆ ಬಹುತೇಕ ಸಿನಿಮಾ ಮುಗಿಯುವುದು ವಿಶೇಷ.
ದಿ ಸಾಂಗ್ ಆಫ್ ಸ್ಪ್ಯಾರೋಸ್ 2008ರಲ್ಲಿ ರೂಪಿತವಾದುದು. ರೇಜಾ ನಾಜಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. 96 ನಿಮಿಷಗಳ ಚಲನಚಿತ್ರ. ಹಲವಾರು ಪುರಸ್ಕಾರಗಳನ್ನು ಪಡೆದಿದೆ.
ಕಥಾನಾಯಕ ಕರೀಮ್ ಇರಾನಿನ ರಾಜಧಾನಿ ಟೆಹರಾನ್‌ನ ಒಂದು ಗ್ರಾಮದಲ್ಲಿ ಆಸ್ಟ್ರಿಚ್ ಪಕ್ಷಿಗಳನ್ನು ಸಾಕಿ ಜೀವನ ನಿರ್ವಹಿಸುತ್ತಿರುತ್ತಾನೆ. ಮೂರು ಮಕ್ಕಳು. ಬದುಕಿನ ನಾನಾ ಸಂದರ್ಭಗಳಿಗೆ ಸಿಕ್ಕು ಗಳಿಕೆ ಮತ್ತು ಪ್ರಾಮಾಣಿಕತೆಯ ಮಧ್ಯೆ ದ್ವಂದ್ವಕ್ಕೆ ಸಿಲುಕಿ ಕೊನೆಗೆ ಬದುಕಿನಲ್ಲಿ ಖುಷಿ, ಸಂತೋಷ ತಂದು ಕೊಡುವುದು ಪ್ರಾಮಾಣಿಕತೆಯೇ ಎನ್ನುವುದನ್ನು ಮನಗಂಡು ತನ್ನ ಹಳೆಯ ಬದುಕಿಗೇ ಮರಳುತ್ತಾನೆ. ಇಲ್ಲಿ ನಿರ್ದೇಶಕ ಕರೀಮನ ಹಳೆಯ ಮತ್ತು ಹೊಸ (ಹೊಂದಲು ಬಯಸಿದ) ಜೀವನವನ್ನು ಹಳ್ಳಿಯ ಮತ್ತು ನಗರದ ಬದುಕಿನ ಉಪಮೆಗಳಾಗಿ ಬಳಸಿದ್ದಾರೆ.
ಗಳಿಕೆಯ ಹಿಂದೆ ಓಡುವಾಗ ನಾವು ಏನನ್ನು ಕಳೆದುಕೊಳ್ಳುತ್ತೇವೆ ಮತ್ತು ಕಳೆದುಕೊಳ್ಳಬಾರದು ಎಂಬುದರ ಅರಿವು ಇರಬೇಕು. ಇಲ್ಲವಾದರೆ ಮೌಲ್ಯಗಳ ರಹಿತ ಜೀವನವಾಗಿ ಬಿಡುವ ಅಪಾಯವನ್ನೂ ಚಿತ್ರ ಹೇಳುತ್ತದೆ. ಅದರೊಟ್ಟಿಗೇ ಬದುಕಿಗೆ ಹಣಕ್ಕಿಂತ ನೆಮ್ಮದಿ, ಸಂತೋಷವೇ ಮುಖ್ಯ. ಅದು ಬದುಕನ್ನು ಉಲ್ಲಾಸಿತವಾಗಿಡಬಲ್ಲದು.
ಮಜಿದ್ ಮಜಿದಿ ಖುಷಿ ಕೊಡುವುದೂ ಸಣ್ಣಸಂಗತಿಗಳನ್ನು ದೊಡ್ಡದಾಗಿ ತೋರಿಸುವುದು.
ಇದೂ ಸಹ ತಪ್ಪದೇ ನೋಡುವ ಚಲನಚಿತ್ರ.
– ಅಪ್ರಮೇಯ