Advertisement
ಜೀವನದಲ್ಲಿ ನಾವೆಲ್ಲಾ ತೀರಾ ಸುಖೀ ಎಂದು ಅಂದುಕೊಳ್ಳುವಾಗ ಈ ನೆನಪುಗಳು ನಮ್ಮತ್ತ ಸುಳಿಯದಿದ್ದರೂ, ಮನಸ್ಸಿನಲ್ಲಿ ದುಃಖ,ನೋವು, ಅಸಹಾಯಕತೆ ಕಾಡಿದಾಗ ಬಾಲ್ಯದ ಜೀವನವನ್ನು ಒಮ್ಮೆ ಜ್ಞಾಪಿಸಿದಾಗ ಮುಖದಲ್ಲಿ ಮೂಡುವ ಆ ನಗು ಅಮ್ಮ ಪ್ರೀತಿ ಕೊಟ್ಟಷ್ಟೇ ಹಿತ ನೀಡುವುದು. ಹೌದು, ಬದುಕಿನ ನೋವುಗಳನ್ನೆಲ್ಲಾ ಮರೆತು ನೆನಪುಗಳ ಬಂಡಿಯನ್ನೇರಿ ಬಾಲ್ಯದ ಕಡೆಗೆ ಪಯಣ ನಡೆಸಿದಾಗ ದಾರಿಯಿಡಿ ತೆರೆ ಸರಿಸಿಕೊಳ್ಳುತ್ತಿದ್ದ ಆ ಜಗತ್ತು ಅದೆಷ್ಟೂ ಸುಂದರವಾದದ್ದು.
Related Articles
Advertisement
ಅಂದಿನ ನಮ್ಮ ಆಟದ ಸಾಮಾನುಗಳು ನಿಸರ್ಗದ ಕಲ್ಲುಮಣ್ಣುಗಳೇ ಅಲ್ಲವೇ? ಬೇಸಗೆ ರಜೆ ಸಿಕ್ಕರೆ ಸಾಕು, ಅಕ್ಕಪಕ್ಕದ ಗೆಳೆಯ ಗೆಳತಿಯರು ಸೇರಿ ಅಡುಗೆಮನೆ ಆಟ, ಮುಟ್ಟಾಟ ಹೀಗೆ ಹಲವಾರು ಆಟಗಳು ನಿಸರ್ಗದ ಕಡೆಗೆ ಮುಖ ಮಾಡಿಸುತ್ತಿತ್ತು. ಮಳೆಗಾಲ ಶುರುವಾದರೆ ನೀರು ನಿಂತ ಗುಂಡಿಗಳಲ್ಲಿ ಇರುವಂತಹ ಕಪ್ಪೆಗಳಿಗೆ ಕಲ್ಲುಗಳನ್ನು ಬಿಸಾಡುವುದು, ಮೀನು ಹಿಡಿಯುವುದು ಇದುವೇ ಅಂದಿನ ದಿನಗಳ ಬಂಗಾರದ ಕ್ಷಣಗಳು.
ಒತ್ತಡಗಳಿಲ್ಲದ ಜೀವನದಲ್ಲಿ ಬಿದ್ದು ಗಾಯಮಾಡಿಕೊಂಡಾಗ ನೋವಿಗೆ ಅಮ್ಮನ ಪ್ರೀತಿಯೇ ಮುಲಾಮು. ಆದರೆ ಇಂದು ಜಗತ್ತು ಬದಲಾಗಿದೆ. ಆಧುನಿಕತೆಗೆ ಒಗ್ಗುತ್ತಿದ್ದಂತೆ ಈ ಮೊಬೈಲ್‌ಗಳ ಬಳಕೆ ಅತಿಯಾಗುತ್ತಾ ಇಂದಿನ ಮಕ್ಕಳ ಬಾಲ್ಯ ಕೇವಲ ಮೊಬೈಲ್‌ಗಳಲ್ಲಿ ಇರುವಂತಹ ರೀಲ್ಸ್, ಗೇಮ್ಸ್ ಇವುಗಳಲ್ಲಿಯೇ ಕಳೆದು ಹೋಗುತ್ತಿದ್ದಾರೆ. ಆರೋಗ್ಯಕರವಾದ ಅಂದಿನ ಪರಿಸರ ಇಂದು ಇಲ್ಲದಂತಾಗಿದೆ. ಬಿದ್ದು ಗಾಯಮಾಡಿಕೊಳ್ಳುತ್ತಾರೆಯೋ ಎನ್ನುವಂತಹ ಭಯ ತಂದೆ ತಾಯಿಯ ಮನಸ್ಸಿನಲ್ಲಿ ಮನೆ ಮಾಡಿದೆ. ನೂರಕ್ಕೆ ನೂರು ತೆಗೆಯಬೇಕೆಂದು ಒತ್ತಡಗಳಿಲ್ಲದ ಅಂದಿನ ಬಾಲ್ಯ ಎಷ್ಟೊಂದು ಚೆನ್ನಾಗಿರುತ್ತಿತ್ತು ಎನ್ನುವುದಕ್ಕೆ ಎಲ್ಲಾರೂ ಕಳೆದಂತಹ ಆ ಕ್ಷಣಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ಮತ್ತೆ ಮತ್ತೆ ಕಾಡುವ ಬಯಕೆ ಎಂದರೆ ಬಾಲ್ಯವೇ ಮತ್ತೇ ಬರುವೆಯಾ…?
–ಸಂಧ್ಯಾ ಎನ್.
ಮಣಿನಾಲ್ಕೂರು